More

    ಬೆಳೆಗಳಿಗೆ ಶುರುವಾಗಿದೆ ಕೀಟ ಕಾಟ

    ಮುಂಡರಗಿ: ತಾಲೂಕಿನಲ್ಲಿ ಜಿಟಿಜಿಟಿ ಮಳೆ, ಮೋಡ ಕವಿದ ವಾತಾವರಣದಿಂದ ತೇವಾಂಶ ಹೆಚ್ಚಳವಾಗಿ ವಿವಿಧ ಬೆಳೆಗಳು ಕೀಟ, ರೋಗ ಬಾಧೆಯಿಂದ ನಲುಗುತ್ತಿವೆ.

    ಪಟ್ಟಣ ಸೇರಿ ತಾಲೂಕಿನ ಡಂಬಳ, ಡೋಣಿ, ಅತ್ತಿಕಟ್ಟಿ, ಯಕ್ಲಾಸಪುರ, ವೆಂಕಟಾಪುರ, ಹಿರೇವಡ್ಡಟ್ಟಿ, ಬಾಗೇವಾಡಿ ಮತ್ತಿತರ ಕಡೆ ಸೂರ್ಯಕಾಂತಿ, ಗೋವಿನಜೋಳ, ಹೆಸರು, ಶೇಂಗಾ ಮೊದಲಾದವುಗಳನ್ನು ಬೆಳೆಯಲಾಗಿದೆ. ತಾಲೂಕಿನಲ್ಲಿ 6,344 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 15,785 ಹೆಕ್ಟೇರ್ ಗೋವಿನಜೋಳ, 6,637 ಹೆಕ್ಟೇರ್ ಹೆಸರು, 5,221 ಹೆಕ್ಟೇರ್ ಶೇಂಗಾ ಬೆಳೆಯಲಾಗಿದೆ. ಸೂರ್ಯಕಾಂತಿಯಲ್ಲಿ ಬೂದಿರೋಗ, ಗೋವಿನಜೋಳದಲ್ಲಿ ಲದ್ದಿಹುಳು ಕೀಟ ಬಾಧೆ, ಹೆಸರು ಬೆಳೆಯಲ್ಲಿ ಹಳದಿ ರೋಗ, ಶೇಂಗಾ ಬೆಳೆಯಲ್ಲಿ ಸುರುಳಿಪುಚಿ ರೋಗ ಕಾಣಿಸಿದೆ.

    ಸೂರ್ಯಕಾಂತಿ ಬೆಳೆಯಲ್ಲಿ ತೆನೆಗಳು ಮೂಡಿದ ನಂತರ ಬೂದಿರೋಗ ಕಾಣಿಸುವುದರಿಂದ ಸರಿಯಾಗಿ ಕಾಳು ಮೂಡುವುದಿಲ್ಲ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಹೆಸರು ಬೆಳೆಯಲ್ಲಿ ಹಳದಿ ರೋಗದಿಂದ ಕಾಳುಗಳು ಜೊಳ್ಳಾಗುತ್ತಿವೆ. ಶೇಂಗಾ ಬೆಳೆಯಲ್ಲಿನ ಸುರುಳಿಪುಚಿ ರೋಗದಿಂದಾಗಿ ಉತ್ತಮ ಬೆಳೆ ಬರುವುದಿಲ್ಲ. ಗೋವಿನಜೋಳ ಬೆಳೆಯಲ್ಲಿ ಲದ್ದಿಹುಳು ಎಲೆಯ ಮೇಲ್ಭಾಗವನ್ನು ತಿನ್ನುತ್ತವೆ. ಲದ್ದಿ ಹುಳುವು ಸುಳಿಯನ್ನು ಸೇರಿ ಹಾನಿ ಮಾಡುವುದರಿಂದ ಎಲೆಯ ಮೇಲೆ ರಂಧ್ರಗಳಾಗುತ್ತವೆ. ಹೊಸ ಎಲೆ ಮತ್ತು ತೆನೆ ಹೊರಹೊಮ್ಮುವುದಿಲ್ಲ. ಕೆಲವೊಮ್ಮೆ ತೆನೆ ಮತ್ತು ಕಾಳುಗಳನ್ನು ತಿನ್ನುತ್ತವೆ. ಇದರಿಂದಾಗಿ ರೈತರು ನಷ್ಟ ಅನುಭವಿಸಬೇಕಾಗುತ್ತದೆ.

    ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ, ಗೋವಿನಜೋಳ, ಹೆಸರು, ಶೇಂಗಾ ಮೊದಲಾದ ಬೆಳೆಯು ಅತಿ ತಂಪಾದ ವಾತಾವರಣ, ಜಿಟಿಜಿಟಿ ಮಳೆಯಿಂದ ಕೀಟ ಹಾಗೂ ರೋಗ ಬಾಧೆಗೆ ತುತ್ತಾಗುತ್ತಿವೆ. ಪ್ರತಿ ವರ್ಷ ರೈತರು ರೋಗಬಾಧೆಯಿಂದ ಬೆಳೆ ಹಾನಿ ಅನುಭವಿಸುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ರೈತರಿಗೆ ನೆರವಾಗಬೇಕು.

    | ಶಂಕರಗೌಡ ಜಯನಗೌಡ್ರ, ಡೋಣಿ ರೈತ

    | ಚಂದ್ರಶೇಖರ ರಾಟಿ, ಮುಂಡರಗಿ ರೈತ

    ಬೆಳೆಯ ಪ್ರಾರಂಭದ ಹಂತದಲ್ಲಿ ಕೀಟ ಮತ್ತು ರೋಗ ಬಾಧೆಯನ್ನು ನಿಯಂತ್ರಿಸಬಹುದು. ಬೆಳೆ ಕಟಾವು ಹಂತಕ್ಕೆ ಬರುವಾಗ ರೋಗಬಾಧೆ ತಗುಲಿದರೆ ಗುಣಮಟ್ಟದ ಫಸಲು ಬರುವುದಿಲ್ಲ. ವಿವಿಧ ಬೆಳೆಗಳ ರೋಗ ಬಾಧೆಗೆ ಸಂಬಂಧಿಸಿದ ಪೂರಕ ಔಷಧಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ರೈತರು ಸಮರ್ಪಕ ಮಾಹಿತಿ ಪಡೆದುಕೊಂಡು ಔಷಧ ಸಿಂಪಡಿಸಬೇಕು.

    | ವೆಂಕಟೇಶಮೂರ್ತಿ ಟಿ.ಸಿ., ಕೃಷಿ ಸಹಾಯಕ ನಿರ್ದೇಶಕ, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts