More

    ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ಜನತೆ


    ಯಾದಗಿರಿ: ಜಿಲ್ಲಾದ್ಯಂತ ಗುರುವಾರ ಎಳ್ಳ ಅಮಾವಾಸ್ಯೆ ನಿಮಿತ್ತ ರೈತರು ಹೊಲಗಳಲ್ಲಿ ಚರಗ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸುಗ್ಗಿಯ ಮಾಗಿಯಲ್ಲಿ ನಾಟಿ ಮಾಡಿದ ಭತ್ತ ಹಾಗೂ ಇತರ ಬೆಳೆಗಳ ಒಕ್ಕಣೆ ಮಾಡುವ ಸಮಯ ಇದಾಗಿದೆ.


    ಮುಂಗಾರು ಮುಕ್ತಾಯದ ಹಂತ, ಸಮದ್ಧಿಯ ಸಂಕೇತವೆಂದು ಈ ಹಬ್ಬವನ್ನು ಬಣ್ಣಿಸಲಾಗುತ್ತದೆ. ವಿಶೇಷವಾಗಿ ರೈತಾಪಿ ವರ್ಗದವರು ತಮ್ಮ ಹೊಲಗಳಲ್ಲಿ ಕುಟುಂಬ ಸಹಿತ ವಿಶಿಷ್ಟವಾಗಿ ಆಚರಿಸುತ್ತಾರೆ. ಕೆಲ ರೈತರು ಸಾಮೂಹಿಕವಾಗಿ ಬಂಡಿ ಕಟ್ಟಿಕೊಂಡು ಹೊಲಗಳಿಗೆ ಹೋಗಿ ಹಬ್ಬ ಆಚರಿಸಿದರು. ಹಬ್ಬದ ನಿಮಿತ್ತ ನಗರ ಪ್ರದೇಶದ ಜನರು ಸಹ ತಮ್ಮ ಹಳ್ಳಿಗಳಲ್ಲಿನ ಜಮೀನಿಗೆ ಕುಟುಂಬಸ್ಥರು, ಸ್ನೇಹಿತರೊಂದಿಗೆ ತೆರಳಿ ಭೂಮಾತಿಗೆ ಚರಗ ಚೆಲ್ಲಿ ಭಕ್ತಿಯಿಂದ ನಮಿಸಿದರು.

    ಜಮೀನಿನ ಬದುಗಳು ಇರುವ ಜಾಗದಲ್ಲಿ ಸಾಂಕೇತಿಕವಾಗಿ ಹಿಡಿ ಗಾತ್ರದ 5 ಕಲ್ಲುಗಳನ್ನು ಸ್ಥಾಪಿಸುತ್ತಾರೆ. ಅವುಗಳನ್ನು ಪಾಂಡವರ ಪ್ರತೀಕವೆಂದು ನಂಬಿ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ನಂತರ ತೀರ್ಥವನ್ನು ಗದ್ದೆಗಳಿಗೆ ಸಿಂಪರಣೆ ಮಾಡುವುದು ಸಂಪ್ರದಾಯ.
    ಗುರಮಠಕಲ್ ತಾಲೂಕಿನ ನವಾಬುರಜ್ ಗ್ರಾಮದ ದ ಜಮೀನಿನಲ್ಲಿ ನಡೆದ ಚರಗ ಚೆಲ್ಲುವ ಹಬ್ಬದಲ್ಲಿ ಮಾತನಾಡಿದ ಕೋಲಿ ಸಮಾಜದ ಉಮೇಶ ಕೆ. ಮುದ್ನಾಳ, ಕೇವಲ ಒಂದೇ ಮಳೆಗೆ ಬೆಳೆಯುವ ಮತ್ತು ಚಳಿಯ ತಂಪಿನಿಂದಲೇ ಬೆಳೆದು ಸಲು ನೀಡುವ ಏಕೈಕ ಬೆಳೆ ಬಿಳಿಕೋಳ. ಎಳ್ಳ ಅಮಾವಾಸ್ಯೆಯಂದು ಈ ಬೆಳೆಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ಜೋಳದ ಸಲು ಉತ್ತಮವಾಗಿ ಬಂದರೆ ಮನುಷ್ಯರಿಗೆ ಮತ್ತು ಜಾನುವಾರುಗಳ ಹೊಟ್ಟೆಗೆ ಆಧಾರವಾಗುತ್ತದೆ ಎಂದರು.


    ಹೋಳಿಗೆ, ಕಡುಬು, ಬದನೆಕಾಯಿ ಪಲ್ಯ, ಭಜ್ಜಿ, ಹಪ್ಪಳ, ಸೆಂಡಿಗಿ, ಶೇಂಗಿನ ಕಾರ, ಗುರೆಳ್ಳಪುಡಿ, ಕಡ್ಲೆಪುಡಿ, ಅನ್ನ, ಚಿತ್ರನ್ನ, ಸಾಂಬಾರ ಸೇರಿದಂತೆ ವೈವಿದ್ಯಮಯ ಖಾದ್ಯಗಳನ್ನು ಜನತೆ ಜಮೀನಿಲ್ಲಿ ಗೋಲಾಕಾರವಾಗಿ ಕುಳಿತು ಸವಿದರು. ನಂತರ ತೋಟಗಳಲ್ಲಿ ಮಕ್ಕಳು ಉಲ್ಲಾಸದಿಂದ ಆಟವಾಡಿ ಮನೆಗೆ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts