More

    ಭೀತಿ ಹುಟ್ಟಿಸಿದ ಬಂಕಾಪುರದ ಚಾಲಕ

    ಹಾವೇರಿ: ಜಿಲ್ಲೆಯಲ್ಲಿ ಪಾಸಿಟಿವ್ ಬಂದಿರುವ ಬಂಕಾಪುರದ ಪಿ-1691 ವೃತ್ತಿಯಲ್ಲಿ ಚಾಲಕನಾಗಿದ್ದು, ಸ್ವ್ಯಾಬ್ ವರದಿ ಬಂದಾಗ ಬೆಂಗಳೂರು ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಅನಾನಸ್ ಹಣ್ಣು ಮಾರಾಟ ಮಾಡುತ್ತಿದ್ದ. ಆತನನ್ನು ಶುಕ್ರವಾರ ತಡರಾತ್ರಿ 12ಕ್ಕೆ ಹಾವೇರಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ.

    ಸೋಂಕು ಅಂಟಿಸಿಕೊಂಡು ಇಡೀ ದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೆಂಗಳೂರು ಯಶವಂತಪುರ ಎಪಿಎಂಸಿಯಲ್ಲಿ ಓಡಾಡಿದ್ದರಿಂದ ಅಲ್ಲಿ ಅದೆಷ್ಟು ಜನರಿಗೆ ಸೋಂಕು ಹಬ್ಬಿಸಿದ್ದಾನೆ ಎಂಬ ಆತಂಕ ಎದುರಾಗಿದೆ. ಸ್ವ್ಯಾಬ್ ಟೆಸ್ಟ್​ಗೆ ಕಳಿಸಿದ ಕೂಡಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೆ ಈತ ಬೆಂಗಳೂರಿಗೆ ಹೋಗುವ ಪ್ರಮೆಯವೇ ಬರುತ್ತಿರಲಿಲ್ಲ. ಸೋಂಕು ದೃಢಪಟ್ಟು 30 ಗಂಟೆಯಾದರೂ ಜಿಲ್ಲಾಡಳಿತಕ್ಕೆ ಆತನ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಬಲ್ಲ ಮೂಲಗಳ ಪ್ರಕಾರ ಈತನ ಟ್ರಾವೆಲ್ ಹಿಸ್ಟರಿ ಗಾಬರಿ ಹುಟ್ಟಿಸುತ್ತದೆ. ಈತ ಕಳೆದ ಕೆಲವು ದಿನಗಳ ಹಿಂದೆಯೇ ಮುಂಬೈಗೆ ಹೋಗಿ ಬಂದಿದ್ದು, ಇದಾದ ಬಳಿಕ ಜಿಲ್ಲೆಯಲ್ಲಿ ಅಡ್ಡಾಡಿದ್ದಾನೆ. ಅನಾನಸ್ ಖರೀದಿಗಾಗಿ ಹಾನಗಲ್ಲ, ಶಿಗ್ಗಾಂವಿ ತಾಲೂಕಿನ ಅನೇಕ ರೈತರನ್ನು ಭೇಟಿಯಾಗಿದ್ದಾನೆ. ಬಂಕಾಪುರದಲ್ಲಿ ಬಾಡಿಗೆ ರೂಂ ಪಡೆದು ವಾಸವಾಗಿದ್ದಾನೆ.

    ಮುಂದುವರಿದಿದೆ ಗೊಂದಲ: ಚಾಲಕನಿಗೆ ಸೋಂಕು ಇರುವುದು ಶುಕ್ರವಾರ ಬೆಳಗ್ಗೆ ದೃಢಪಟ್ಟಿದ್ದು, ಜಿಲ್ಲಾಡಳಿತಕ್ಕೂ ಆಗಲೇ ಮಾಹಿತಿ ಗೊತ್ತಾಗಿದೆ. ಆದರೆ, ಆತ ಅದಾಗಲೇ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಅನಾನಸ್ ಹಣ್ಣುಗಳನ್ನು ಇಳಿಸಲು ಹೋಗಿದ್ದ. ತನಗೆ ಸೋಂಕು ಇರುವುದು ಗೊತ್ತಿಲ್ಲದ್ದರಿಂದ ಆತ ಸಹಜವಾಗಿಯೇ ಎಲ್ಲ ಕಡೆ ಅಡ್ಡಾಡಿದ್ದಾನೆ. ಸೋಂಕಿತ ಚಾಲಕನನ್ನು ಮೊಬೈಲ್​ನಲ್ಲಿ ಸಂಪರ್ಕ ಮಾಡಿರುವ ಪೊಲೀಸರು ತಕ್ಷಣ ಬೆಂಗಳೂರಿನಿಂದ ಹೊರಟು ಬರುವಂತೆ ತಿಳಿಸಿದ್ದಾರೆ. ಆದರೂ, ಆ ವ್ಯಕ್ತಿ ಸಂಜೆವರೆಗೂ ಬೆಂಗಳೂರು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಾಡಿದ್ದಾನೆ. ವಿಷಯ ತಿಳಿದು ಇಲ್ಲಿಯ ಅಧಿಕಾರಿಗಳು ಬೆಂಗಳೂರಿಗೆ ದೌಡಾಯಿಸಿದರೂ ತಲುಪುವುದು ಸಂಜೆಯಾಗಿದೆ.

    ಅಧಿಕಾರಿಗಳು ಪೋನ್ ಮಾಡಿ ತಕ್ಷಣ ಹಾವೇರಿಗೆ ಹಿಂದಿರುಗುವಂತೆ ಸೂಚನೆ ನೀಡಿದ್ದರೂ ‘ಬೆಂಗಳೂರು ಬಿಟ್ಟಿದ್ದೇನೆ’ ಎಂದು ಸತಾಯಿಸುತ್ತಲೇ ವ್ಯಾಪಾರ ಮಾಡಿದ್ದಾನೆ. ಆತನ ಪೋನ್ ಲೋಕೇಶನ್ ಪರಿಶೀಲನೆ ಮಾಡಿದಾಗ ಆತ ಸಂಜೆವರೆಗೂ ಬೆಂಗಳೂರಿನಲ್ಲೇ ಇರುವುದು ಗೊತ್ತಾಗಿದೆ. ಬಳಿಕ ಅಲ್ಲಿನ ಅಧಿಕಾರಿಗಳು, ಪೊಲೀಸರಿಗೆ ಮಾಹಿತಿ ನೀಡಿದಾಗ ಅವರು ಸ್ಥಳಕ್ಕೆ ಹೋಗಿ ದಬಾಯಿಸಿದ ಬಳಿಕವಷ್ಟೇ ಬೆಂಗಳೂರಿನಿಂದ ಹೊರಟಿದ್ದಾನೆ. ಅಷ್ಟರೊಳಗೆ ಜಿಲ್ಲೆಯ ಪೊಲೀಸರು ಶುಕ್ರವಾರ ತಡರಾತ್ರಿ ಆಸ್ಪತ್ರೆಗೆ ತಂದು ಸೇರಿಸಿದ್ದಾರೆ. ಆತ ಚಲಾಯಿಸಿದ ವಾಹನಕ್ಕೆ ಸ್ಯಾನಿಟೈಸರ್ ಮಾಡಿ ಮರಳಿ ಕಳಿಸಿದ್ದಾರೆ. ಬೆಳಗ್ಗೆಯೇ ಪಾಸಿಟಿವ್ ದೃಢಪಟ್ಟರೂ ತಕ್ಷಣ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸದಂತೆ ತಡೆಯುವುದರ ಬಗ್ಗೆ ಜಿಲ್ಲಾಡಳಿತ ಗಮನ ನೀಡದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts