More

    ಭಾಷೆ ಉಳಿವಿಗೆ ಹೋರಾಟ ಮಾಡಬೇಕು, ಸಮ್ಮೇಳನಾಧ್ಯಕ್ಷ ತಾ.ನಂ. ಕುಮಾರಸ್ವಾಮಿ ಸಲಹೆ, ಆನೇಕಲ್ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

    ಸರ್ಜಾಪುರ: ಭಾರತ ಬಹುಭಾಷೆ, ಬಹುಸಂಸ್ಕೃತಿಯ ನಾಡು. ಪ್ರತಿ ರಾಜ್ಯದಲ್ಲೂ ಭಾಷೆಯ ಉಳಿವಿಗೆ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಅದರಂತೆ ನಾವು ಕೂಡ ಕನ್ನಡ ಭಾಷೆಗೆ ಕಂಟಕ ಎದುರಾದಾಗ ಹೋರಾಟ ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷ ತಾ.ನಂ.ಕುಮಾರಸ್ವಾಮಿ ಹೇಳಿದರು.

    ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿ ಶನಿವಾರ ಆಯೋಜನೆಗೊಂಡಿದ್ದ ಆನೇಕಲ್ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

    ಉದ್ಯೋಗ ಸುಲಭವಾಗಿ ಸಿಗುತ್ತದೆ ಎಂದು ಇಂಗ್ಲಿಷ್ ಮಾಧ್ಯಮದಲ್ಲಿ ಓದಲು ಎಲ್ಲರೂ ಆದ್ಯತೆ ನೀಡುತ್ತಿದ್ದಾರೆ. ಆದರೆ, ಕನ್ನಡ ಮಾಧ್ಯಮದಲ್ಲಿ ಓದಿದರೂ ಉದ್ಯೋಗ ಸಿಗುತ್ತದೆ ಎಂಬ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕು. ಆಗ ಎಲ್ಲರೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಆದ್ಯತೆ ನೀಡುತ್ತಾರೆ ಎಂದರು.

    ಅಂಕಗಳಿಸುವ ಯಂತ್ರಗಳು: ವಿದ್ಯಾರ್ಥಿಗಳು ಅಂಕ ಗಳಿಸುವ ಯಂತ್ರಗಳಂತೆ ಆಗಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ಕಡಿಮೆಯಾಗುತ್ತಿದೆ. ಆದ್ದರಿಂದ, ಸರ್ಕಾರ ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ತಾ.ನಂ. ಕುಮಾರಸ್ವಾಮಿ ಆಗ್ರಹಿಸಿದರು.

    ಸಂಸ್ಕೃತಿ ರಕ್ಷಿಸಿದರೆ ಭಾಷೆ ಉಳಿಯುತ್ತೆ: ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಕನ್ನಡ ಭಾಷೆ ಅಳಿದರೆ, ಕನ್ನಡ ಸಂಸ್ಕೃತಿಯೂ ಅಳಿಯುತ್ತದೆ. ಆದ್ದರಿಂದ, ಕನ್ನಡ ಭಾಷೆಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು.

    ದೇಣಿಗೆಗೆ ಮನವಿ: ಮರಸೂರು ಗ್ರಾಪಂ ವ್ಯಾಪ್ತಿಯಲ್ಲಿ ಕನ್ನಡ ಭವನ ನಿರ್ಮಿಸಲಾಗುತ್ತಿದೆ. ಇದು 1.50 ಕೋಟಿ ರೂ.ವೆಚ್ಚದ ಯೋಜನೆಯಾಗಿದೆ. ಇದು ಗಡಿಭಾಗದಲ್ಲಿ ನಿರ್ಮಾಣವಾಗುತ್ತಿರುವುದರಿಂದ, ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಈ ಕಾಮಗಾರಿಗೆ ದೇಣಿಗೆ ನೀಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

    ‘ನನ್ನೊಳಗಿನ ನೀನು’ ಮತ್ತು ‘ಅಂಬೇಡ್ಕರ್ ಅವರು ಹೇಳಿದ ಮಾತಗಳು’ ಎಂಬ ಕವನಸಂಕಲನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ ಬಿಡುಗಡೆ ಮಾಡಿದರು. ವಿಜಯ ಸಂಜೆ ಕಾಲೇಜಿನ ಉಪ ಪ್ರಾಂಶುಪಾಲ ಶಾಂತರಾಜು, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಸಾಹಿತಿ ಬೈರಮಂಗಲ ರಾಮೇಗೌಡ, ತಹಸೀಲ್ದಾರ್ ಸಿ. ಮಹದೇವಯ್ಯ, ಹೋರಾಟಗಾರರಾದ ಬಿ.ಗೋಪಾಲ್, ಸ್ಪೂರ್ತಿ ವಿದ್ಯಾಸಂಸ್ಥೆ ಅಧ್ಯಕ್ಷ ಗೋಪಾಲರೆಡ್ಡಿ, ಸಾಹಿತಿ ಎಂ. ತಿಮ್ಮಯ್ಯ, ಎಸ್‌ಎಫ್‌ಎಸ್ ಕಾಲೇಜಿನ ಉಪ ಪ್ರಾಂಶುಪಾಲ ಫಾದರ್ ಜಿಜೊ ಜೋಸ್, ಪಿಡಿಒ ರಾಮಾಂಜನೇಯ ಮತ್ತಿತರರು ಇದ್ದರು.

    ಐಟಿ-ಬಿಟಿ ಸಿಟಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡೇತರರು ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಕನ್ನಡ ಕಲಿಸಲು ಕನ್ನಡಿಗರು ದೃಢಸಂಕಲ್ಪ ಮಾಡಬೇಕು. ಸಾಧ್ಯವಾದರೆ ಹೋಬಳಿ ಮಟ್ಟದಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು.
    ಡಾ.ಸಿ.ಸೋಮಶೇಖರ್ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ತಹಸೀಲ್ದಾರ್ ಅವರಿಂದ ಚಾಲನೆ: ದೊಮ್ಮಸಂದ್ರದಲ್ಲಿ ಆಯೋಜನೆಗೊಂಡಿದ್ದ ಆನೇಕಲ್ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಹಸೀಲ್ದಾರ್ ಸಿ.ಮಹದೇವಯ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಕಸಾಪ ಧ್ವಜಾರೋಹಣ ನೆರವೇರಿಸಿದರು. ನಂತರ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಿಂದ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷ ತಾ.ನಂ.ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮಾಡಲಾಯಿತು. ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ನಾನಾ ಕಲಾ ತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.

    ಹಸಿರು ತೋರಣದಿಂದ ಕಂಗೊಳಿಸಿದ ಗ್ರಾಮ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ದೊಮ್ಮಸಂದ್ರ ಗ್ರಾಮದ ಪ್ರಮುಖಬೀದಿಗಳುದ್ದಕ್ಕೂ ತಳಿರು ತೋರಣದಿಂದ ಶೃಂಗರಿಸಲಾಗಿತ್ತು.

    ಭಾಷೆ ಕಡೆಗಣನೆಗೆ ದೊಡ್ಡರಂಗೇಗೌಡ ಬೇಸರ: ಈಜಿಪ್ಟ್‌ನಂಥ ದೇಶದಲ್ಲಿ ಅಚ್ಚ ಕನ್ನಡ ಪದಗಳು ಇಂದಿಗೂ ರಾರಾಜಿಸುತ್ತಿವೆ. ಆದರೆ, ನಮ್ಮ ರಾಜ್ಯದಲ್ಲಿ ಕನ್ನಡತನವೇ ನಾಶವಾಗುತ್ತಿದೆ. ಅನ್ಯ ಭಾಷೆಗಳ ಆರಾಧನೆ ಜೋರಾಗಿದೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ. ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದರು.
    ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ಹೊರದೇಶದವರು ಮಾರಕವಾಗಿಲ್ಲ. ಬದಲಿಗೆ ನಮ್ಮವರೇ ಅದನ್ನು ಹಾಳುಗೆಡವುತ್ತಿದ್ದಾರೆ ಎಂದರು.
    ಬದಲಾವಣೆ ಜಗದ ನಿಯಮ. ಆದರೆ, ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಭಾಷೆ ಬದಲಾವಣೆ ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts