More

    ಭಾರಿ ವಾಹನಗಳ ಸಂಚಾರ ತಂದ ಆತಂಕ

    ಮ.ಬೆಟ್ಟ ಹಾಗೂ ನಾಲ್‌ರೋಡ್ ರಸ್ತೆ ಅಧ್ವಾನ, ದಿನನಿತ್ಯ ಹೆಚ್ಚುತ್ತಿವೆ ಅಪಘಾತಗಳು

    ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಹಾಗೂ ನಾಲ್‌ರೋಡ್ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಳೆದ 3 ತಿಂಗಳಿನಿಂದ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರ ಹೆಚ್ಚಾಗಿದ್ದು, ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇವೆ. ಹಾಗಾಗಿ, ಈ ಮಾರ್ಗದಲ್ಲಿ ಭಾರಿ ವಾಹನಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


    ಚಾಮರಾಜನಗರ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಬಣ್ಣಾರಿ-ದಿಂಬಂ ಘಾಟ್‌ನಲ್ಲಿ ಸತ್ಯಮಂಗಲಂ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಿದ್ದು, ವನ್ಯಪ್ರಾಣಿಗಳ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಮದ್ರಾಸ್ ಹೈಕೋರ್ಟ್ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಸರಕು ಸಾಗಣೆ ವಾಹನಗಳ ಸಂಚಾರವನ್ನು ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರ್ಬಂಧಿಸಲಾಗಿದೆ.


    ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಅಧಿಕ ಭಾರದ ಲಾರಿಗಳು 3 ತಿಂಗಳಿನಿಂದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಹಾಗೂ ನಾಲ್‌ರೋಡ್ ಮಾರ್ಗದ ಮೂಲಕ ಸಂಚರಿಸುತ್ತಿವೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವು- ನೋವು ಉಂಟಾಗುತ್ತಿದೆ. ಜತೆಗೆ ಅಪಘಾತಗಳಿಂದ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಈ ಮಾರ್ಗದ ಅಲ್ಲಲ್ಲಿ ರಸ್ತೆ ಕುಸಿಯುತ್ತಿದ್ದು, ಗುಂಡಿಗಳು ನಿರ್ಮಾಣವಾಗುತ್ತಿವೆ.


    ಅಪಘಾತ ಸಂಖ್ಯೆ ಹೆಚ್ಚಳ
    : ಈ ಮಾರ್ಗದಲ್ಲಿ ಭಾರದ ಮಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಭಾರ ತುಂಬಿದ ಲಾರಿಗಳು ತಮಿಳುನಾಡಿಗೆ ಸಂಚರಿಸುತ್ತಿವೆ. ಇದರಿಂದ ಕಳೆದ 3 ತಿಂಗಳ ಅವಧಿಯಲ್ಲಿ 10 ಕ್ಕೂ ಹೆಚ್ಚು ಲಾರಿ ಅಪಘಾತಗಳು ಸಂಭವಿಸಿದೆ. ಇದರಲ್ಲಿ ಮ.ಬೆಟ್ಟಕ್ಕೆ ನೀರು ಪೂರೈಸುವ ಪಾಲಾರ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆಯ ಕಾವೇರಿ ನೀರು ಸರಬರಾಜು ಘಟಕದ ಕಾಂಪೌಂಡ್‌ಗೆ 3 ಲಾರಿಗಳು ಡಿಕ್ಕಿ ಹೊಡೆದು, ಚಾಲಕರು ಗಾಯಗೊಂಡಿದ್ದಾರೆ. ಮ.ಬೆಟ್ಟದ ಆನೆತಲೆದಿಂಬದ ತಿರುವಿನಲ್ಲಿ ಲಾರಿ ಮಗುಚಿದೆ. ಪಾಲಾರ್ ಮಾರ್ಗದಲ್ಲಿ ಜೋಳ ತುಂಬಿದ ವಾಹನ ಮಗುಚಿ ಚಾಲಕ ಮೃತಪಟ್ಟಿದ್ದಾನೆ. ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ತಡೆಗೋಡೆಗೆ ಡಿಕ್ಕಿ ಹೊಡೆದು ಮಗುಚಿದೆ. ಆನೆತಲೆ ದಿಂಬದ ತಿರುವಿನಲ್ಲಿ ಕರಿಕಲ್ಲು ಲಾರಿ ಪಲ್ಪಿ ಹೊಡೆದಿದೆ. ಇದ್ದಿಲನ್ನು ಸಾಗಿಸುತ್ತಿದ್ದ ಲಾರಿ ಮಲೆಮಹದೇಶ್ವರ ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಂದಕಕ್ಕೆ ಉರುಳಿದೆ. ಒಟ್ಟಾರೆ ದಿನೇ ದಿನ ಅವಘಡಗಳ ಸಂಖ್ಯೆ ಹೆಚ್ಚುತ್ತಿದೆ.


    ಅವಘಡಕ್ಕೆ ಕಾರಣ: ಈ ಮಾರ್ಗದ ರಸ್ತೆಯು ಬೆಟ್ಟಗುಡ್ಡಗಳಿಂದ ಕೂಡಿದ್ದು, ಕಿರಿದಾದ ರಸ್ತೆಯಲ್ಲಿ ತಿರುವುಗಳನ್ನು ಹೊಂದಿದೆ. ಬಸ್, ಕಾರು ಹಾಗೂ ಇನ್ನಿತರ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ 12 ಚಕ್ರದ ಲಾರಿಗಳಲ್ಲಿ ಮಿತಿಮೀರಿದ ಸರಕನ್ನು ಸಾಗಣೆ ಮಾಡಲಾಗುತ್ತಿದೆ. ಇದರಿಂದ ತಿರುವುಗಳಲ್ಲಿ ಹಾಗೂ ಕಿರಿದಾದ ರಸ್ತೆಯಲ್ಲಿ ಚಾಲಕ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವಘಡಗಳು ನಡೆಯುತ್ತಿವೆ.

    ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ!
    ರಾಜ್ಯದ ವಿವಿಧೆಡೆಯಿಂದ ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಮಾರ್ಗದಲ್ಲಿ ಆಗಾಗ್ಗೆ ಲಾರಿ ಅವಘಡಗಳು ಸಂಭವಿಸುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದ್ದು, ಗಂಟೆಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಅಲ್ಲದೇ ಕಿರಿದಾದ ರಸ್ತೆಯ ಬಳಿ 2 ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಇದರಿಂದ ಭಕ್ತರು ತುಂಬ ತೊಂದರೆ ಎದಿರುಸುವಂತಾಗಿದೆ.


    ಈ ಹಿನ್ನೆಲೆಯಲ್ಲಿ ಸರಕು ಸಾಗಣೆ ವಾಹನಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾ ಉಸ್ತವಾರಿ ಸಚಿವ ವಿ.ಸೋಮಣ್ಣ ಕಳೆದ ತಿಂಗಳು ಮ.ಬೆಟ್ಟದ ನಾಗಮಲೆ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದ ಪರಿಣಾಮ ಸರಕು ಸಾಗಣೆ ವಾಹನಗಳಿಗೆ ಕಡಿವಾಣ ಬಿದ್ದಿಲ್ಲ. ಆ ಮೂಲಕ ಸಚಿವರ ಸೂಚನೆಗೂ ಕಿಮ್ಮತ್ತಿಲ್ಲದಂತಾಗಿದೆ.


    ಹಾಳಾಗುತ್ತಿದೆ ರಸ್ತೆ: ತಾಳುಬೆಟ್ಟದಿಂದ ಮ.ಬೆಟ್ಟದವರೆಗಿನ ರಸ್ತೆಯು ಕಳೆದ ನಾಲ್ಕೈದು ತಿಂಗಳ ಹಿಂದೆ ಅಲ್ಲಲ್ಲಿ ಗುಂಡಿ ಬಿದ್ದು ಹಾಳಾಗಿತ್ತು. ಹಾಗಾಗಿ, ಪಿಡಬ್ಲುೃಡಿ ಇಲಾಖೆ ಕಾಮಗಾರಿಗಳನ್ನು ಕೈಗೊಂಡು ಗುಂಡಿಗಳನ್ನು ಮುಚ್ಚುವುದರ ಜತೆಗೆ ಹಾಳಾಗಿದ್ದ ಕೆಲವು ಕಡೆಗಳಲ್ಲಿ ರಸ್ತೆಯನ್ನು ಡಾಂಬರೀಕರಣಗೊಳಿಸಿತ್ತು. ಆದರೆ 3 ತಿಂಗಳಿನಿಂದ ಈ ರಸ್ತೆಯಲ್ಲಿ ಅಧಿಕ ಭಾರದ ಸರಕು ಸಾಗಾಣಿಕೆ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಕೆಲವು ಕಡೆಗಳಲ್ಲಿ ರಸ್ತೆ ಕುಸಿದಿದ್ದು, ಡಾಂಬರು ಕಿತ್ತು ಬಂದು ಮತ್ತೇ ಗುಂಡಿಗಳು ಬಾಯ್ತೆರೆಯುತ್ತಿವೆ.


    ಭಾರಿ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ 3 ತಿಂಗಳೊಳಗೆ ಈ ರಸ್ತೆ ಸಂಪೂರ್ಣ ಹಾಳಾಗಲಿದ್ದು, ಮ.ಬೆಟ್ಟಕ್ಕೆ ಆಗಮಿಸುವ ಭಕ್ತರು ತೊಂದರೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ತಿಳಿದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಸಂಬಂಧಪಟ್ಟ ಅಧಿಕಾರಿಗಳು ಸರಕು ಸಾಗಣೆ ವಾಹನಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವರೆ ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts