More

    ಭಾರಿ ಮಳೆಗೆ ಕೊಚ್ಚಿ ಹೋದ ಭತ್ತದ ಪೈರು

    ಮದ್ದೂರು: ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನಾಟಿ ಮಾಡಿದ್ದ ಭತ್ತದ ಪೈರು, ಕೆರೆಯಲ್ಲಿದ್ದ ಮೀನುಗಳು ಕೊಚ್ಚಿ ಹೋಗಿವೆ.


    ತಾಲೂಕಿನ ಕಬ್ಬಾರೆ ಗ್ರಾಮದ ಕರೆ ಕೋಡಿ ಬಿದ್ದು 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನಾಟಿ ಪೈರು ಸಂಪೂರ್ಣ ಜಲಾವೃತವಾಗಿದೆ. ನೀರಿನ ರಭಸಕ್ಕೆ 10 ದಿನಗಳ ಹಿಂದೆ ನಾಟಿ ಮಾಡಿದ್ದ ಭತ್ತದ ಪೈರು ನಾಶವಾಗಿದೆ.


    ಭಾನುವಾರ ರಾತ್ರಿ ಸುರಿದ ಮಳೆಗೆ ರೈತರು ಕಂಗಲಾಗಿದ್ದು, ಭತ್ತ ಹಾಗೂ ಕಬ್ಬಿನ ಗದ್ದೆಯಲ್ಲಿ ನದಿಯಂತೆ ಹರಿಯುತ್ತಿರುವ ಜತೆಗೆ ಮನೆಗಳಿಗೂ ಮಳೆ ನೀರು ನುಗ್ಗಿದ್ದ ಮನೆಯಲ್ಲಿದ್ದ ದವಸ ಧಾನ್ಯ ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಯಾಗಿ ಅಪಾರ ನಷ್ಟವಾಗಿದೆ.


    ಕೆರೆ ಕೋಡಿ ಬಿದ್ದು ಕೊಚ್ಚಿ ಹೋದ 3 ಟನ್ ಮೀನು: ಕೆರೆ ಕೋಡಿ ಬಿದ್ದ ಪರಿಣಾಮ ಕಬ್ಬಾರೆ ಗ್ರಾಮದಲ್ಲಿ 3 ಟನ್ ಮೀನು ನೀರಿನಲ್ಲಿ ಕೊಚ್ಚಿ ಹೋಗಿವೆ. ಉಳಿದ ಮೀನು ರಕ್ಷಣೆಗೆ ಸಾಕಣೆದಾರ ಕೋಡಿಗೆ ಬಲೆ ಹಾಕಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.


    ಕಳೆದ ರಾತ್ರಿ ಸುರಿದ ಮಳೆಗೆ ಮೀನು ಕೊಚ್ಚಿ ಹೋದ ಪರಿಣಾಮ ಲಕ್ಷಾಂತರ ರೂ. ನಷ್ಟವಾಗಿದೆ. ಗ್ರಾಮ ಪಂಚಾಯಿತಿಯಿಂದ ಗುತ್ತಿಗೆ ಪಡೆದು 10 ಲಕ್ಷ ರೂ. ಖರ್ಚು ಮಾಡಿ ಮೀನು ಸಾಕಿದ್ದ ನಾಗೇಶ್ ಅವರು ಒಂದು ವರ್ಷದಿಂದ ಮೀನುಗಳನ್ನು ಸಾಕಿದ್ದರಿಂದ ಮೂರ್ನಾಲ್ಕು ಕೆ.ಜಿ. ದಪ್ಪವಾಗಿದ್ದವು. ಸುಮಾರು 5 ಟನ್ ಪೈಕಿ 3 ಟನ್‌ನಷ್ಟು ಮೀನು ಕೊಚ್ಚಿ ಹೋಗಿವೆ.


    ಉಳಿದ ಮೀನು ರಕ್ಷಣೆಗೆ ಮುಂಜಾನೆ 4 ಗಂಟೆಯಿಂದ ಬಲೆ ಹಾಕಿ ಕಾಯುತ್ತಿರುವ ಮೀನು ಸಾಕಣೆದಾರ ನಾಗೇಶ್, ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವುದರಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.


    ಪರ್ಯಾಯ ಮಾರ್ಗ: ಭಾರಿ ಮಳೆಯಿಂದ ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಮಂಡ್ಯದಿಂದ ಬಂದ ವಾಹನಗಳನ್ನು ಸೋಮನಹಳ್ಳಿ ಹೆಮ್ಮನಹಳ್ಳಿ ಗೇಟ್ ಬಳಿಯಿಂದ ಹುಲಿಯೂರುದುರ್ಗಾ, ಕುಣಿಗಲ್, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ವಾಹನಗಳನ್ನು ಹೋಗಲು ಪೊಲೀಸರು ಬದಲಿ ವ್ಯವಸ್ಥೆ ಮಾಡಿದ್ದರು.


    ಮನೆ ಕುಸಿತ: ತಾಲೂಕಿನ ನಗರಕೆರೆ ಗ್ರಾಮದ ಮುರಳಿ ಮತ್ತು ನಟರಾಜ್ ಅವರಿಗೆ ಸೇರಿದ ಮನೆ ನಿರಂತರ ಮಳೆಯಿಂದ ಕುಸಿದು ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಅಲ್ಲದೆ ತಾಲೂಕಿನಾದ್ಯಂತ ಹಲವಾರು ಮನೆಗಳು ಮಳೆಯಿಂದ ಜಖಂಗೊಂಡಿವೆ, ಕೋಟ್ಯಂತರ ರೂ. ಬೆಲೆಬಾಳುವ ಬೆಳೆಗಳು ಜಲಾವೃತವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts