More

    ಭಾರತಕ್ಕೆ ಮರಳಿದ 230 ಸುಡಾನ್ ಸಂತ್ರಸ್ತರು 

    ದಾವಣಗೆರೆ: ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಆಪರೇಷನ್ ಕಾವೇರಿ ಕಾರ್ಯಾಚರಣೆ ಮುಂದುವರಿದಿದ್ದು, ಭಾನುವಾರ ಸುಮಾರು 230 ಭಾರತೀಯರು ತಾಯ್ನಡಿಗೆ ತಲುಪಿದ್ದಾರೆ. ಈ ಪೈಕಿ 150ಕ್ಕೂ ಹೆಚ್ಚು ಮಂದಿ ಕನ್ನಡಿಗರು ಇದ್ದಾರೆ ಎಂದು ಹೇಳಲಾಗಿದೆ.
    ಏ.22ರಿಂದ ಸುಡಾನ್‌ನಿಂದ ಪ್ರಯಾಣ ಆರಂಭಿಸಿದ್ದೆವು. ಭಾನುವಾರ ಮಧ್ಯಾಹ್ನ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದೇವೆ. 3 ಬಸ್‌ಗಳಲ್ಲಿ ಅವರವರ ಗ್ರಾಮಕ್ಕೆ ತೆರಳುತ್ತಿದ್ದಾರೆ. ಮೈಸೂರು ಜಿಲ್ಲೆಯ 20, ಶಿವಮೊಗ್ಗ ಜಿಲ್ಲೆಯ 60 ಜನರಿದ್ದಾರೆ. ದಾವಣಗೆರೆ ಜಿಲ್ಲೆಯ ಗೋಪನಾಳ್ ಮತ್ತು ಅಸ್ತಾಪನಹಳ್ಳಿ ಗ್ರಾಮದ 30ಕ್ಕೂ ಹೆಚ್ಚು ಜನರು ಊರಿಗೆ ವಾಪಸಾಗುತ್ತಿದ್ದೇವೆ ಎಂದು ಗೋಪನಾಳ್ ನಿವಾಸಿ ನಂದಕುಮಾರ್ ಪತ್ರಿಕೆಗೆ ತಿಳಿಸಿದರು.
    ಸುಡಾನ್‌ನಲ್ಲಿದ್ದಾಗ ಎಲ್ಲರಿಗೂ ಜೀವಭಯ ಕಾಡುತ್ತಿತ್ತು. ನಾವು 2 ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದೆವು. ನಾವಿದ್ದ ಕಡೆಗೆ 500 ಮೀಟರ್ ದೂರದಿಂದ ಬಾಂಬ್ ದಾಳಿ ನಡೆಯುತ್ತಿತ್ತು. ಅಲ್ಲಿ ಬಿದ್ದ ಹೆಣಗಳನ್ನು ಮೂರ್ನಾಲ್ಕು ದಿನವರೆಗೆ ತೆಗೆಯುವವರೇ ಇರಲಿಲ್ಲ. ಭಾರತೀಯ ರಾಯಭಾರ ಕಚೇರಿಯವರಿಂದಾಗಿ ನಾವು ನಮ್ಮ ಊರುಗಳನ್ನು ಕಾಣಬೇಕಾಯಿತು ಎಂದು ಹೇಳಿದರು.
    ಸುಡಾನ್‌ನಲ್ಲಿದ್ದಾಗ ಹೊರಗೆ ಹೋಗುವುದಕ್ಕೂ ಕಷ್ಟವಿತ್ತು. ಅದಕ್ಕೆಂದೇ ಮಾರುಕಟ್ಟೆಗೆ ಹೋದಾಗೆಲ್ಲ ಕೆಲವರ ಹಣ, ಮೊಬೈಲ್ ಕಳ್ಳತನವಾದವು. ಊಟ-ನೀರಿಗೆ ತೊಂದರೆ ಇತ್ತು. ಅಲ್ಲಿನವರು ಊಟಕ್ಕಾಗಿ ಅಂಗಡಿಗಳಿಗೆ ನುಗ್ಗುವ ಪರಿಸ್ಥಿತಿ ಇತ್ತು. ಮತ್ತೆ ವ್ಯಾಪಾರದ ಕಾರಣಕ್ಕೆ ಸುಡಾನ್ ದೇಶಕ್ಕೆ ಕಾಲಿಡುವ ಮಾತಿಲ್ಲ. ನಮ್ಮ ದೇಶದಲ್ಲೇ ವ್ಯಾಪಾರ ಮಾಡುತ್ತೇವೆ. ನಮ್ಮೂರಲ್ಲಿದ್ದೇ ಕೃಷಿ ಮಾಡುವಾಸೆ ಇದೆ ಎಂದು ಹೇಳಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts