More

    ಭಾನುವಾರದ ಕರ್ಫ್ಯೆ ಜಿಲ್ಲೆ ಸಂಪೂರ್ಣ ಸ್ತಬ್ಧ

    ಹಾವೇರಿ: ಲಾಕ್​ಡೌನ್ ನಿಯಮಗಳ ಸಡಿಲಿಕೆಯಿಂದಾಗಿ ಕಳೆದೊಂದು ವಾರದಿಂದ ಸಹಜ ಸ್ಥಿತಿಯಲ್ಲಿದ್ದ ಜಿಲ್ಲೆ ಭಾನುವಾರದ ನಿಷೇಧಾಜ್ಞೆಯಿಂದ ಸಂಪೂರ್ಣ ಸ್ತಬ್ಧವಾಗಿತ್ತು. ತುರ್ತು ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ವ್ಯವಹಾರಗಳನ್ನು ಜನರು ಬಂದ್ ಮಾಡಿ ಭಾನುವಾರ ಸರ್ಕಾರ ಘೋಷಿಸಿದ ಕರ್ಪ್ಯೂಗೆ ಬೆಂಬಲ ವ್ಯಕ್ತಪಡಿಸಿದರು.

    ಮಾರಕ ಕರೊನಾ ತಡೆಗಟ್ಟಲು ಮಾ. 25ರಿಂದ ಹಂತಹಂತವಾಗಿ ಮೂರು ಲಾಕ್​ಡೌನ್ ಮುಗಿಸಿ ನಾಲ್ಕನೇ ಲಾಕ್​ಡೌನ್​ನಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್​ಡೌನ್ ಘೋಷಿಸಿದ್ದಕ್ಕೆ ಜಿಲ್ಲೆಯಾದ್ಯಂತ ಸಾರ್ವಜನಿಕರು ಬೆಂಬಲ ನೀಡಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೆ ರಸ್ತೆಯಲ್ಲಿ ವಾಹನ, ಜನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಹೋಟೆಲ್, ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಬಸ್, ರೈಲು, ಟ್ಯಾಕ್ಸಿ, ಆಟೋ ಸಂಚಾರವೂ ಸ್ಥಗಿತವಾಗಿತ್ತು. ಮೀನು, ಮಾಂಸದ ವ್ಯಾಪಾರ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಿತು. ಹೋಟೆಲ್, ಪಾನ್ ಶಾಪ್, ಮದ್ಯದಂಗಡಿಗಳು ಸೇರಿ ಯಾವುದೇ ವ್ಯವಹಾರಿಕ ಮಳಿಗೆಗಳು ತೆರೆಯದೇ ಇದ್ದುದರಿಂದ ಬೆರಳೆಣಿಕೆಯಷ್ಟು ಜನ ಅಲ್ಲಲ್ಲಿ ಅಗತ್ಯ ಸೇವೆಗಳಿಗಾಗಿ ಸಂಚಾರ ನಡೆಸಿದ್ದು ಬಿಟ್ಟರೆ ಉಳಿದಂತೆ ಜನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

    ನಗರದಲ್ಲಿನ ಪೆಟ್ರೋಲ್ ಬಂಕ್, ಹಾಲು, ಔಷಧ ಅಂಗಡಿಗಳು, ಆಸ್ಪತ್ರೆಗಳು ತೆರೆದಿದ್ದವು. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಅಗತ್ಯವಿದ್ದ ಹೊರರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಯಿತು. ಪೆಟ್ರೋಲ್ ಬಂಕ್​ಗಳು ತೆರೆದಿದ್ದರೂ ವಾಹನಗಳ ಸಂಖ್ಯೆ ಹೆಚ್ಚಾಗಿ ಇರಲಿಲ್ಲ. ನಗರ ಮಾತ್ರವಲ್ಲದೆ, ರಾಷ್ಟ್ರೀಯ ಹೆದ್ದಾರಿಯಲ್ಲೂ ಲಾರಿ, ಕಾರು ಮೊದಲಾದ ವಾಹನಗಳ ಸಂಚಾರ ಗಣನೀಯವಾಗಿ ಕಡಿಮೆಯಿತ್ತು.

    ಹೊರಬರದ ಬಸ್​ಗಳು: ಜಿಲ್ಲೆಯ ಎಲ್ಲ ಡಿಪೋಗಳಿಂದಲೂ ಮೇ 19ರಿಂದ 141 ಬಸ್​ಗಳು ಸಂಚಾರ ಆರಂಭಿಸಿದ್ದವು. ಭಾನುವಾರ ಒಂದೇ ಒಂದು ಬಸ್ ಹೊರಕ್ಕೆ ಬರಲಿಲ್ಲ. ಭಾನುವಾರ ಸರ್ಕಾರಿ ರಜೆಯೂ ಇದ್ದುದರಿಂದ ಕಚೇರಿ ಕೆಲಸವೂ ಇರಲಿಲ್ಲ. ಎಲ್ಲರೂ ಕುಟುಂಬ ಸಮೇತರಾಗಿ ಮನೆಯಲ್ಲಿಯೇ ಕುಳಿತು ಟಿವಿ ನೋಡಿ, ಪತ್ರಿಕೆ ಓದುತ್ತ ಕಾಲ ಕಳೆದರು. ಸ್ವಯಂ ಪ್ರೇರಿತರಾಗಿ ಎಲ್ಲರೂ ಮನೆಯಲ್ಲೇ ಇದ್ದುದರಿಂದ ಓಣಿಗಳಲ್ಲೂ ಜನ ಕಾಣುತ್ತಿರಲಿಲ್ಲ. ಮಕ್ಕಳು ಆಟವಾಡಲು ರಸ್ತೆಗಿಳಿಯಲಿಲ್ಲ.

    ಹೆಚ್ಚಾಗಿ ಕಾಣದ ಪೊಲೀಸ್ ಸಿಬ್ಬಂದಿ

    ಕರ್ಫ್ಯೂಗೆ ಜನರು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ್ದರಿಂದ ನಗರದಲ್ಲಿ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಂಡುಬರಲಿಲ್ಲ. ಆಗೊಮ್ಮೆ, ಈಗೊಮ್ಮೆ ಪೊಲೀಸ್ ವಾಹನಗಳ ಸಂಚಾರ ಮಾತ್ರ ಇತ್ತು. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಮೂರ್ನಾಲ್ಕು ಪೊಲೀಸರನ್ನು ನಿಯೋಜಿಸಲಾಗಿತ್ತು. ಇನ್ನುಳಿದಂತೆ ಎಲ್ಲಿಯೂ ಪೊಲೀಸರು ಕಂಡುಬರಲಿಲ್ಲ. ಬಸ್ ನಿಲ್ದಾಣ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿರಲಿಲ್ಲ.

    ತರಕಾರಿಗೆ ಪರದಾಟ

    ಲಾಕ್​ಡೌನ್ ಘೊಷಣೆಯಾದಾಗಿನಿಂದ ತರಕಾರಿಯನ್ನು ಒಂದೆಡೆಯಿಟ್ಟು ಬೆಳಗ್ಗೆಯಿಂದ ಸಂಜೆಯವರೆಗೆ ಮಾರಲು ಅಧಿಕಾರಿಗಳು ಅವಕಾಶ ನೀಡುತ್ತಿದ್ದರು. ಭಾನುವಾರ ಅವಕಾಶವಿದ್ದರೂ ಬೆರಳೆಣಿಕೆಯಷ್ಟು ಜನರು ಮಾತ್ರ ತಳ್ಳುವ ಗಾಡಿಗಳಲ್ಲಿ ಮಾರಾಟಕ್ಕೆ ಸಂಚರಿಸಿದರು. ದಿನದಷ್ಟು ಜನರು ವ್ಯಾಪಾರಕ್ಕೆ ಬರಲಿಲ್ಲ. ಮಾರುಕಟ್ಟೆಯಲ್ಲಿಯೂ ತರಕಾರಿ ಅಂಗಡಿ ತೆರೆಯಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಕೆಲವರು ತರಕಾರಿಗಾಗಿ ಪರದಾಡುವಂತಾಯಿತು. ಭಾನುವಾರ ಕರ್ಫ್ಯೂ ಇರುವುದು ಮೊದಲೇ ಗೊತ್ತಿದ್ದರಿಂದ ಬಹುತೇಕ ಜನರು ಶನಿವಾರವೇ ಅವಶ್ಯಕ ವಸ್ತುಗಳನ್ನು ಹೆಚ್ಚಾಗಿ ಖರೀದಿಸಿ ಮನೆಯಿಂದ ಹೊರಬರುವ ಪ್ರಯತ್ನ ಮಾಡಲಿಲ್ಲ.

    ಮನೆ ಮುಂದೆಯೇ ಮದುವೆ

    ಭಾನುವಾರ ಕರ್ಫ್ಯೂ ಇದ್ದರೂ ಮೊದಲೇ ನಿಗದಿಯಾಗಿದ್ದಂತೆ ಜಿಲ್ಲೆಯಾದ್ಯಂತ 50ಕ್ಕೂ ಅಧಿಕ ಮದುವೆಗಳು ಯಾವುದೇ ಅಡೆತಡೆಯಿಲ್ಲದೆ ಸರಳವಾಗಿ ತಮ್ಮತಮ್ಮ ಮನೆಗಳ ಮುಂದೆ ನಡೆದವು. ಮದುವೆಯ ಆಮಂತ್ರಣ ಪತ್ರಿಕೆ ತೋರಿಸಿದರೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಮದುವೆಗಳಲ್ಲಿ ಜನರ ಸಂಖ್ಯೆ ಮಾತ್ರ ತೀರಾ ಕಮ್ಮಿಯಿತ್ತು.

    ಓಡಾಡುತ್ತಿದ್ದವರ ತಡೆದು ವಿಚಾರಣೆ

    ಕರ್ಫ್ಯೂಗೆ ಇಡೀ ರಾಣೆಬೆನ್ನೂರ ನಗರವೇ ಸ್ತಬ್ಧವಾಗಿದ್ದು, ಜನತೆಯಿಂದ ಉತ್ತಮ ಸ್ಪಂದನೆ ದೊರೆಯಿತು.

    ಲಾಕ್​ಡೌನ್ ಸಡಿಲಿಕೆ ಮಧ್ಯೆಯೂ ರಾಜ್ಯ ಸರ್ಕಾರ ಕೆಲ ನಿಯಮಗಳಿಗೆ ಸಡಿಕೆ ನೀಡಿದ್ದರಿಂದ ಸದಾ ಜನರಿಂದ ಕೂಡಿರುತ್ತಿದ್ದ ನಗರವೇ ಖಾಲಿ ಖಾಲಿಯಾಗಿತ್ತು. ನಗರ ಸಾರಿಗೆ ಸೇರಿ ಯಾವುದೇ ವಾಹನಗಳು ರಸ್ತೆಗಿಳಿದಿರಲಿಲ್ಲ. ಅಲ್ಲಲ್ಲಿ ಬೈಕ್, ಆಟೋ ಸೇರಿ ಕೆಲ ವಾಹನಗಳು ಕಾಣಿಸುತ್ತಿದ್ದವು ಹೊರತು, ಜನನಿಬಿಡ ಪ್ರದೇಶಗಳಾದ ಎಂ.ಜಿ. ರಸ್ತೆ, ಪಿ.ಬಿ. ರಸ್ತೆ, ಪೋಸ್ಟ್ ವೃತ್ತ, ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು.

    ಜನರ ನಿತ್ಯ ಜೀವನಕ್ಕೆ ಅಗತ್ಯವಾಗಿರುವ ಹಾಲು, ಔಷಧಗಳು, ಪೆಟ್ರೋಲ್ ಬಂಕ್, ತರಕಾರಿ, ಹೋಟೆಲ್​ನಲ್ಲಿ ಪಾರ್ಸಲ್, ಮಾಂಸ ಮಾರಾಟಕ್ಕೆ ವಿನಾಯಿತಿ ನೀಡಲಾಗಿತ್ತಾದರೂ ಜನರು ಶನಿವಾರ ವಸ್ತುಗಳನ್ನು ಖರೀದಿ ಮಾಡಿದ್ದರಿಂದ ಭಾನುವಾರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕಾಣಲಿಲ್ಲ.

    ಸಂಪೂರ್ಣ ಲಾಕ್​ಡೌನ್ ವಿಧಿಸಿದ್ದ ಸಂದರ್ಭದಲ್ಲಿ ಜನರು ಏನಾದರೂ ನೆಪ ಹೇಳಿ ಓಡಾಟ ನಡೆಸಿದ್ದರು. ಆದರೆ ಭಾನುವಾರ ಮಾತ್ರ ಸುಖಾಸುಮ್ಮನೆ ಓಡಾಟ ನಡೆಸುವವರೂ ಮನೆಯಲ್ಲೇ ಇದ್ದರು.

    ಪೊಲೀಸರಿಂದ ಜಾಗೃತಿ…

    ಇಡೀ ನಗರ ಸ್ತಬ್ಧವಾಗಿದ್ದರೂ ಕೆಲವೇ ಕೆಲವರು ಬೈಕ್​ಗಳ ಮೇಲೆ ಓಡಾಟ ನಡೆಸಿದ್ದರು. ಇಂತಹವರನ್ನು ಕೆಲ ಕಡೆಗಳಲ್ಲಿ ಪೊಲೀಸರು ತಡೆದು ವಿಚಾರಣೆ ನಡೆಸುತ್ತಿದ್ದರು. ಅಗತ್ಯ ಕಾರ್ಯಗಳಿಗೆ ತೆರಳುತ್ತಿದ್ದರೆ ಸುಮ್ಮನೆ ಬಿಡುತ್ತಿದ್ದ ಪೊಲೀಸರು, ಉಳಿದವರಿಗೆ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ. ಇದರ ಗಂಭೀರತೆ ಅರೆತು ಮನೆಯಲ್ಲೇ ಇರಿ ಎಂದು ತಿಳಿವಳಿಕೆ ಹೇಳಿ ಕಳುಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts