More

    ಭಾದ್ರಪದ ಮಾಸವೇ ಮೋಕ್ಷ ಸಾಧನೆಗೆ ಸೋಪಾನ: ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ

    ರಿಪ್ಪನ್‌ಪೇಟೆ: ಭಾದ್ರಪದ ಶುಕ್ಲ ಪಂಚಮಿಯಿಂದ ಚತುರ್ದಶಿಯವರೆಗೆ ಬರುವಂತಹ ಎಲ್ಲ ಪರ್ವದಿನಗಳೂ ಉಳಿದೆಲ್ಲ ದಿನಗಳಿಗಿಂತ ಶ್ರೇಷ್ಠವಾಗಿರುವಂತಹದ್ದು. ಭಾದ್ರಪದ ಮಾಸವೇ ಭದ್ರ (ಮೋಕ್ಷ) ಪದವಿಗೆ ಸೋಪಾನ ಎಂದು ಹೊಂಬುಜದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
    ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರ ಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಏರ್ಪಡಿಸಿದ್ದ ದಶಲಕ್ಷಣ ಮಹಾಪರ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಭಾದ್ರಪದವೆಂಬ ಈ ಪವಿತ್ರ ಮಾಸದಲ್ಲಿ ಷೋಡಶ ಕಾರಣ ಭಾವನೆಗಳಲ್ಲದೆ ದಶಲಕ್ಷಣ ಪರ್ವ, ಅನಂತವ್ರತ, ಸುಗಂಧ ದಶಮಿ ವ್ರತ, ರತ್ನತ್ರಯ ವ್ರತ ಇತ್ಯಾದಿ ಅನೇಕ ಆತ್ಮವಿಶುದ್ಧಿಗೆ ಕಾರಣವಾಗುವ ವ್ರತಗಳನ್ನು ಆಚರಿಸಲಾಗುತ್ತದೆ ಎಂದರು.
    ಶಕ್ತಿಗನುಸಾರವಾಗಿ ಉಪವಾಸ, ನಿತ್ಯ ನಿಯಮಗಳನ್ನು ಪಾಲಿಸಬೇಕು. ಮುಕ್ತಿ ಬಯಸುವ ಭವ್ಯ ಜೀವಿಯೂ ಚಾಚೂ ತಪ್ಪದೇ ಸಂಯಮ ಜೀವನವನ್ನು ಪಾಲಿಸುತ್ತ ಸದ್ಗತಿಯನ್ನು ಹೊಂದುತ್ತಾನೆ. ಆತ್ಮನ ಪ್ರತಿಕೂಲ ಪರಿಸ್ಥಿತಿಯನ್ನು ತಿಳಿಗೊಳಿಸುವ ಕಾರ್ಯ ಈ ಪರ್ವದಿನಗಳಲ್ಲಿ ಮಾಡಲಾಗುತ್ತದೆ. ಸಾಂಸಾರಿಕ ವ್ಯಾಕುಲತೆಗಳಿಂದ ದೂರವಿರಲು ಪರಮ ಸುಖವನ್ನು ಹೊಂದಲು ಅಂಕಿಚನ ಭಾವದಿಂದ ಆತ್ಮ ಸಾಧನೆಯನ್ನು ಮಾಡಿಕೊಳ್ಳಲು ಈ ಪರ್ವ ಸಹಕಾರಿಯಾಗುತ್ತದೆ. ಉಪವಾಸ, ವ್ರತ-ನಿಯಮಗಳ ಮೂಲಕ ದೃಢಚಿತ್ತರಾಗಿ ಧರ್ಮಧ್ಯಾನ ಮಾಡುತ್ತ ಕಾಲಯಾಪನೆ ಮಾಡಬೇಕು. ಸ್ವಾಧ್ಯಾಯ, ತತ್ತ್ವ ಚಿಂತನ ಅಭ್ಯಾಸ ಮಾಡಲು ಉತ್ತಮ ಸಮಯ, ಜಿನಧರ್ಮದ ಪ್ರಭಾವನೆಯ ಜತೆಗೆ ನಿಜಧರ್ಮದ ಪ್ರಭಾವನೆಯು ಆಗಲಿ ಎಂದು ಹೇಳಿದರು.
    ಭಾದ್ರಪದ ಶುಕ್ಲ ಪಂಚಮಿಯಿಂದ ಚತುರ್ದಶಿಯವರೆಗೆ ಆಚರಿಸಲಾಗುವ ಹತ್ತು ದಿನಗಳ ಅವಧಿಯಲ್ಲಿ ಉತ್ತಮ ಕ್ಷಮಾ, ಮಾರ್ಧವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯಗಳೆಂಬ ಹತ್ತು ಧರ್ಮಗಳ ಆಚರಣೆ, ವ್ರತ-ನಿಯಮಗಳು, ಸ್ತೋತ್ರ, ಉಪವಾಸ, ಸ್ವಾಧ್ಯಾಯ ಮೊದಲಾದ ಕಾರ್ಯಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts