More

    ಪಿರಿಯಾಪಟ್ಟಣದಮ್ಮ ಹಬ್ಬ ಸಂಪನ್ನ


    ಮಂಡ್ಯ : ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಗ್ರಾಮದ ಪಿರಿಯಾಪಟ್ಟಣದಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.


    ಗುಡಿಯಲ್ಲಿರುವ ದೇವಿಗೆ ಮಹಿಳೆಯರು ನಿಂಬೆಹಣ್ಣಿನ ಆರತಿ ಎತ್ತಿ ದೀಪಾಪೂಜೆಯನ್ನು ಸಾಮೂಹಿಕವಾಗಿ ನೆರವೇರಿಸಿದರು. ನಂತರ ಹಬ್ಬಕ್ಕೆ ಚಾಲನೆ ದೊರೆಯಿತು. ಅರ್ಚಕರು ದೇವಿಯ ಗರ್ಭಗುಡಿಯ ಮುಂದೆ ಬಾಳೆಕಂದು ನೆಟ್ಟು ಛೇದಿಸಿ, ದೃಷ್ಟಿ ತೆಗೆದು ನಿರ್ವಿಘ್ನವಾಗಿ ಹಬ್ಬ ನಡೆಯಲು ದೇವಿಯಲ್ಲಿ ಪ್ರಾರ್ಥಿಸಿದರು.


    ವಾರದಿಂದ ಹಬ್ಬ ಆಚರಣೆಗಾಗಿ ಗ್ರಾಮದಲ್ಲಿ ಸಂಭ್ರಮ ಎಡೆಮಾಡಿತ್ತು. ಮಂಗಳವಾದ್ಯ, ತಮಟೆ ನಾದ, ಬಾಣ, ಬಿರುಸುಗಳು ಮೇಳೈಸಿದವು. ಇಡೀ ಗ್ರಾಮ ತಳಿರು ತೋರಣ, ರಂಗೋಲಿಯ ಚಿತ್ತಾರಗಳಿಂದ ಝಗಮಿಸುತ್ತಿತ್ತು. ದೇವಿಗೆ ಕೋಳಿ, ಕುರಿ, ಮೇಕೆ ಬಲಿ ನೀಡಿ ನೈವೇದ್ಯ ಅರ್ಪಿಸಿದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಸಮೃದ್ಧಿಗೆ ಕೋರಿದರು. ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.


    ಪೂಜಾ ಮಹೋತ್ಸವದ ಅಂಗವಾಗಿ ಹೋಮ ಹವನಾದಿ, ದೇವಿಗೆ ಪಂಚಾಮೃತ ಅಭಿಷೇಕ, ಧೂಪ ದೀಪಧಾರತಿ, ದೇವಿಯ ಸ್ತೋತ್ರಪಠಣೆ, ಜಾಗರಣೆಯಂತಹ ಹತ್ತು ಹಲವು ಕಾರ್ಯಕ್ರಮಗಳು ನಡೆದವು. ಗುರುವಾರ ಬೆಳಗಿನ ಜಾವ 3 ಗಂಟೆಗೆ ಕಿಕ್ಕೇರಮ್ಮ ದೇವರ ಗುಡಿಗೆ ತೆರಳಿದ ಗ್ರಾಮಸ್ಥರು ದೇವಿಗೆ ಮೊದಲು ಅಗ್ರಪೂಜೆ ಸಲ್ಲಿಸಿದರು. ತದನಂತರ ಅಮಾನಿಕೆರೆಯಲ್ಲಿ ಪವಿತ್ರ ಗಂಗೆ ತಂದು ಪೂರ್ಣಕುಂಭದೊಂದಿಗೆ ಅರ್ಚಕರು ದೇವಿ ಅವಾಹನೆ ಮಾಡಿಕೊಂಡು ಸಾಗಿದರು. ಮಹಿಳೆಯರು ದೇವಿಯ ಜತೆಗೂಡಿ ಪೂರ್ಣಕುಂಭ ಮೆರವಣಿಗೆಯಲ್ಲಿ ಭಾಗಿಯಾದರು.


    ಗಂಗಾಸ್ನಾನ, ಗಂಗಾಪೂಜೆ, ಪೂರ್ಣಕುಂಭ ಮೆರವಣಿಗೆ, ಮಡಿ ಪೂಜೆ, ಕೊಂಡೋತ್ಸವ, ಬಂಡಿ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು. ಗ್ರಾಮದ ಯುವಕರು ಹಿರಿಯರ ಮಾರ್ಗದರ್ಶನದೊಂದಿಗೆ ವಿಜೃಂಭಣೆಯಿಂದ ಹಬ್ಬ ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts