More

    ಭಯ ಬಿಡಿ, ಎಚ್ಚರಿಕೆ ವಹಿಸಿ

    ಗದಗ: ಜಿಲ್ಲೆಯಲ್ಲಿ ಕರೊನಾ ಪಿಡುಗು ತಡೆಗೆ ರಾಜ್ಯ ಸರ್ಕಾರ ನೀಡಿರುವ ಆದೇಶದನ್ವಯ ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶಿಸಿದ್ದಾರೆ.

    ಜಿಲ್ಲಾದ್ಯಂತ ಅಂಗನವಾಡಿ, ಶಾಲಾ, ಕಾಲೇಜ್ ಹಾಗೂ ಕೋಚಿಂಗ್ ಸೆಂಟರ್, ಎಲ್ಲಾ ತರಹದ ಶಿಕ್ಷಣ ಸಂಸ್ಥೆಗಳಿಗೆ (ಪರೀಕ್ಷೆ ಹೊರತುಪಡಿಸಿ) ಮಾ. 14ರಿಂದ ಜಾರಿಗೆ ಬರುವಂತೆ ಒಂದು ವಾರದವರೆಗೆ ರಜೆ ಘೊಷಿಸಲಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಹ ಸ್ಥಳಗಳಾದ ಸಂತೆ, ಮೈದಾನ, ಕ್ರೀಡಾಕೂಟ, ಜಾತ್ರಾ ಸ್ಥಳ, ರಥೋತ್ಸವ, ಉತ್ಸವ ಇತ್ಯಾದಿ ಧಾರ್ವಿುಕ ಸಮಾರಂಭಗಳು ಹಾಗೂ ಅದ್ದೂರಿ ಮದುವೆ ಕಾರ್ಯಕ್ರಮಗಳನ್ನು ನಡೆಸಬಾರದು. ಜನಸಂದಣಿ ಸ್ಥಳಗಳಲ್ಲಿ ಖಾಸಗಿ, ಸರ್ಕಾರಿ ಯಾವುದೇ ಕಾರ್ಯಕ್ರಮಗಳ ಆಚರಣೆಯನ್ನು ಒಂದು ವಾರದವರೆಗೆ ನಿಷೇಧಿಸಲಾಗಿದೆ.

    ಚಿತ್ರಮಂದಿರ, ಉದ್ಯಾನಗಳು, ರಂಗಮಂದಿರಗಳಲ್ಲಿ ನಾಟಕ ಪ್ರದರ್ಶನ, ಸಂಗೀತ ಪ್ರದರ್ಶನ, ವಸ್ತು ಪ್ರದರ್ಶನ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್​ಗಳು, ರೆಸಾರ್ಟ್​ಗಳನ್ನು ಮುಚ್ಚಬೇಕು. ಜನರು ಬಳಸುವ ಈಜುಕೊಳ, ಜಿಮ್ ಯಾವುದೇ ಬೇಸಿಗೆ ಶಿಬಿರಗಳು ಮುಂತಾದವುಗಳನ್ನು ನಡೆಸಬಾರದು. ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚುವರಿ ಸ್ವಚ್ಛತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

    ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಳಲ್ಲಿ ಕರೊನಾ ರೋಗ ಲಕ್ಷಣಗಳಿರುವ ರೋಗಿಗಳು ಕಂಡುಬಂದಲ್ಲಿ ಕೂಡಲೆ ಸಂಬಂಧಿತ ತಾಲೂಕಿನ ನೋಡಲ್ ವೈದ್ಯಾಧಿಕಾರಿಗೆ ಅಥವಾ ಆರೋಗ್ಯ ಸಹಾಯವಾಣಿ 104ಕ್ಕೆ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸ್ವಚ್ಛತೆಯಿಂದ ರೋಗ ದೂರ

    ನರಗುಂದ: ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶೀತ, ಕೆಮ್ಮು, ನೆಗಡಿ, ಜ್ವರದ ಲಕ್ಷಣ ಕಂಡು ಬಂದ್ಕಉ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಸಿ. ಕೊರವನವರ ಹೇಳಿದರು.

    ಕರೊನಾ ವೈರಸ್ ಹಿನ್ನೆಲೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಅವರು ಮಾತನಾಡಿದರು.

    ಆರೋಗ್ಯ ಇಲಾಖೆಯ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ರವಿ ಕಡಗಾವಿ ಮಾತನಾಡಿ, ಕರೊನಾ ರೋಗ ಭಾರತದಲ್ಲಿ 62ಕ್ಕೂ ಹೆಚ್ಚು ಹಾಗೂ ರಾಜ್ಯದಲ್ಲಿ ನಾಲ್ಕು ಪ್ರಕರಣಗಳು ಕಂಡು ಬಂದಿದ್ದು, ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಖಚಿತವಾಗಿಲ್ಲ. ವಿದೇಶ ಪ್ರವಾಸದಿಂದ ಬಂದವರ ಮೇಲೆ ನಿಗಾ ಇರಿಸಲಾಗಿದೆ ಎಂದರು.

    ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಯಾರಿಗಾದರೂ ಕರೊನಾ ಸೋಂಕು ತಗುಲಿರುವ ಲಕ್ಷಣ ಕಂಡು ಬಂದಲ್ಲಿ ಅಂಥವರು ತಾಲೂಕು ಆಸ್ಪತ್ರೆಗೆ ದಾಖಲಾಗಬೇಕು. ಇದಕ್ಕಾಗಿ ನರಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ ಎಂದರು.

    ತಹಸೀಲ್ದಾರ್ ಎ.ಎಚ್. ಮಹೇಂದ್ರ, ಪಶು ಸಂಗೋಪನೆ ಇಲಾಖೆಯ ಡಾ. ವೆಂಕಟೇಶ ಸಣ್ಣಬಿದರಿ ಮಾತನಾಡಿದರು. ಆರೋಗ್ಯ ಇಲಾಖೆಯ ಎಂ.ಆರ್. ಕುಲಕರ್ಣಿ, ಜಿ.ವಿ. ಕೊಣ್ಣೂರ, ಎನ್.ಬಿ. ಜೋಶಿ, ಭರತ ಇಟ್ಟಿಗಟ್ಟಿ, ಬಿ.ಎಂ. ಕೌಜಗೇರಿ, ಶಿವಾನಂದ ಕುರಹಟ್ಟಿ, ಎಂ.ಎಂ. ಮಸೂತಿಮನಿ, ಇತರರು ಇದ್ದರು.

    ನರಗುಂದ, ತಹಸೀಲ್ದಾರ್ ಕಚೇರಿ, ಲಕ್ಷ್ಮೇಶ್ವರ,

    ಧಾರ್ವಿುಕ ಕಾರ್ಯಕ್ರಮ ಮೂಂದೂಡಿಕೆ

    ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರೀಯ ಸಮಾಜದವರ ಪಾಂಡುರಂಗ ದೇವಸ್ಥಾನದಲ್ಲಿ ಮಾ. 14ರಿಂದ 18 ರವರೆಗೆ ಹಮ್ಮಿಕೊಳ್ಳಲಾಗಿದ್ದ ಮಂಚರಿ ಗಾಥಾ ಭಜನ ರಾಯಣ, ವಿಠಲ ಸಮುದಾಯ ಭವನ ಉದ್ಘಾಟನೆ ಸಮಾರಂಭ ಮತ್ತು ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಕರೊನಾ ವೈರಸ್ ಭೀತಿಯ ಹಿನ್ನೆಲೆೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಎಲ್ಲ ಧಾರ್ವಿುಕ ಸಭೆ ಸಮಾರಂಭಗಳನ್ನು ರದ್ದುಪಡಿಸಿ ಮುಂದೂಡುವಂತೆ ಸರ್ಕಾರ ನಿರ್ದೇಶಿಸಿದ್ದು, ತಹಸೀಲ್ದಾರರ ಸೂಚನೆ ಮೆರೆಗೆ ಕಾರ್ಯಕ್ರಮ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು. ಕಾರಣ ಎಲ್ಲರೂ ಸಹಕರಿಸಬೇಕು ಎಂದು ಪಾಂಡುರಂಗ ದೇವಸ್ಥಾನ ಕಟ್ಟಡ ಸಮಿತಿ ಅಧ್ಯಕ್ಷ ಕಿರಣ ನವಲೆ ಮತ್ತು ಉಪಾಧ್ಯಕ್ಷ ಸತೀಶ ಮಾಂಡ್ರೆ ಕೋರಿದ್ದಾರೆ.

    ಲಕ್ಕುಂಡಿ ಉತ್ಸವ ಮುಂದೂಡಿಕೆ ಸ್ವಾಗತಾರ್ಹ

    ಗದಗ: ಪರೀಕ್ಷೆಗಳ ಒತ್ತಡ ಹಾಗೂ ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇದೇ ತಿಂಗಳು ಗದಗದಲ್ಲಿ ನಡೆಸಲು ಉದ್ದೇಶಿಸಿದ್ದ ಲಕ್ಕುಂಡಿ ಉತ್ಸವ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಿದ ಸರ್ಕಾರದ ಕ್ರಮವನ್ನು ಸಾಹಿತಿ ಡಿ.ವಿ. ಬಡಿಗೇರ ಹಾಗೂ ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಸ್ವಾಗತಿಸಿದ್ದಾರೆ. ಜನಹಿತದ ದೃಷ್ಟಿಯಿಂದ ಸಮಾರಂಭ ಮುಂದೂಡಲು ಕ್ರಮ ಕೈಗೊಳ್ಳಲಾಗಿದ್ದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಠಕ್ಕೆ ಬಿದ್ದು ಕಾರ್ಯಕ್ರಮ ಸಂಯೋಜಿಸಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದವು. ರಾಜ್ಯದಲ್ಲಿ ಕರೊನಾ ಭೀತಿಯಿಂದ ಭಯಾನಕ ವಾತಾವರಣವಿದ್ದರೂ ಇದೇ ಆರ್ಥಿಕ ವರ್ಷದಲ್ಲಿ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂಬ ಏಕಮೇವ ಉದ್ದೇಶದಿಂದ ಜನಹಿತ ಕಡೆಗಣಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸರ್ಕಾರವೇ ರಾಜ್ಯಾದ್ಯಂತ ಎಲ್ಲ ಸಾಮಾಜಿಕ ಕಾರ್ಯಕ್ರಮಗಳನ್ನು ರದ್ದು ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts