More

    ಭದ್ರೆಗೆ ಅನುದಾನ ಖಂಡಿತ ತರುತ್ತೇನೆ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಮಾತ್ರವಲ್ಲ, ನನ್ನ ಅವಧಿಯಲ್ಲಿ ಕೈಗೆತ್ತಿಕೊಂಡ ಎಲ್ಲ ಯೋಜನೆಗಳು ಪೂರ್ಣಗೊಳ್ಳಲು ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವ ಜವಾಬ್ದಾರಿ ನನ್ನದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬುಧವಾರ ಭರವಸೆ ನೀಡಿದರು.

    ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಜಿಪಂನ ಸಂಸದರ ಕಚೇರಿ ಮುಂಭಾಗ 31 ದಿನಗಳಿಂದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸೇರಿ ವಿವಿಧ ಸಂಘಟನೆಗಳ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.

    ಕ್ಷೇತ್ರದ ಸಂಸದನಾದ ನಂತರ ಈ ಯೋಜನೆಗಾಗಿ 20ಸಾವಿರ ಕೋಟಿ ರೂ.ಗೆ ಕ್ರಿಯಾಯೋಜನೆ ರೂಪಿಸಿ, ಪ್ರತಿ ಹಂತದಲ್ಲೂ ಸಾಕಷ್ಟು ಬಾರಿ ಪ್ರಯತ್ನಿಸಿದ್ದೇನೆ. ರಾಜ್ಯದಿಂದ ಕಡತ ಕೂಡ ಕಳಿಸಿದ್ದೇವೆ. ರಾಷ್ಟ್ರೀಯ ಯೋಜನೆ ಸ್ಥಗಿತಗೊಳಿಸಿ 15 ವರ್ಷವಾಗಿದ್ದು, ಆ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ಹೀಗಾಗಿ ಹನಿ ನೀರಾವರಿಗೆ ಸೇರಿಸಿದ್ದರಿಂದ ಕೃಷಿ ಸಿಂಚಾಯಿನಿ ಯೋಜನೆಯಡಿ 5,300 ಕೋಟಿ ರೂ. ಪಿಎಂ ಘೋಷಿಸಿದ್ದರು. ಅದರಲ್ಲಿ 500 ಕೋಟಿ ರೂ. ಬಿಡುಗಡೆಗಾಗಿ ಈಚೆಗೆ ಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೆ. ರಾಜ್ಯ ಸರ್ಕಾರ ಎಸ್ಕೋ ಅಕೌಂಟ್ ತೆರೆಯದಿದ್ದರೆ, ಅನುದಾನ ಬಿಡುಗಡೆ ಸಾಧ್ಯವಿಲ್ಲವೆಂದು ಹೇಳಿದ್ದರು. ರಾಜ್ಯದಲ್ಲಿ ಬರವಿರುವ ಕಾರಣ ಪ್ರಯತ್ನ ಮುಂದುವರೆಸಿದ್ದೇವೆ ಎಂದು ತಿಳಿಸಿದರು.

    ರಾಜ್ಯದ ಡಿಸಿಎಂ ಅವರೊಂದಿಗೆ ಚರ್ಚಿಸಿದ್ದೇನೆ. ವಿಶ್ವೇಶ್ವರಯ್ಯ ಜಲನಿಗಮದಲ್ಲಿ ದುಡ್ಡಿಲ್ಲದಿದ್ದರೂ ನಾಲ್ಕೈದು ಪಟ್ಟು ಹೆಚ್ಚಿಗೆ ಅಂದರೆ, ಕೋಟಿ ರೂ. ಪರಿಹಾರ ನೀಡಲು ಸಿದ್ಧರಿದ್ದೇವೆ. ಆದರೆ, ಅಬ್ಬಿನಹೊಳಲು ಸಮೀಪ ಕೆಲ ರೈತರು ಒಪ್ಪುತ್ತಿಲ್ಲ. ಎಕರೆಗೆ 20 ಪಟ್ಟು ಹೆಚ್ಚು ಕೇಳಿದರೆ ಕೊಡಲು ಹೇಗೆ ಸಾಧ್ಯ. ಲಕ್ಷಾಂತರ ರೈತರಿಗೆ ಅನುಕೂಲವಾಗುವ ಈ ಯೋಜನೆಯಿಂದ ನಾಲ್ಕೈದು ರೈತರಿಗೆ ನೋವಾದರೂ ಕಾನೂನು ಚೌಕಟ್ಟಿನೊಳಗೆ ಪರಿಹರಿಸುವುದಾಗಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದು, ಮೊನ್ನೆಯಷ್ಟೇ ಸ್ಥಳಕ್ಕೂ ಭೇಟಿ ನೀಡಿದ್ದರು. ಕಾಮಗಾರಿ ಮಾ. 7ರಿಂದ ಆರಂಭವಾಗಲಿದೆ ಎಂದರು.

    ಸಂಘದ ರಾಜ್ಯ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಸಂಘದ ಗೌರವಾಧ್ಯಕ್ಷ ಕುರುವ ಗಣೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ್, ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಎಂಎಲ್ಸಿ ಕೆ.ಎಸ್.ನವೀನ್, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ, ಹೆಚ್ಚುವರಿ ಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ಕೆ.ದಿನಕರ್, ಎಸ್.ಚೈತ್ರಾ, ಗಣೇಶ್ ಇನ್ನಿತರೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts