More

    ಭದ್ರಾಉಪ ಕಣಿವೆ ಯೋಜನೆಗೆ ಸರ್ಕಾರದ ಅನುಮೊದನೆ

    ಕಡೂರು: ಬರದ ನಾಡಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ 1281.80 ಕೋಟಿ ರೂ. ಮೊತ್ತದ ಭದ್ರಾಉಪ ಕಣಿವೆ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅನುಮೋದನೆ ನೀಡುವ ಮೂಲಕ ತಾಲೂಕಿನ ರೈತರಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಉಪಕಣಿವೆಯಂದ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕು ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ 197 ಕೆರೆಗಳಿಗೆ ಕೆರೆಯ ಶೇಖರಣಾ ಸಾಮರ್ಥ್ಯದ ಶೇ.50 ರಷ್ಟು ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.

    ಈ ಯೋಜನೆಯಲ್ಲಿ ಕಡೂರು ತಾಲೂಕಿನ 114 ಕೆರೆಗಳು, ತರೀಕೆರೆಯ 31, ಚಿಕ್ಕಮಗಳೂರಿನ 48, ಆರಸೀಕೆರೆ ತಾಲೂಕಿನ 4 ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ 4 ಹಂತಗಳಲ್ಲಿ 1281.80 ಕೋಟಿ ರೂ. ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದರು.

    ಮೊದಲ ಹಂತದಲ್ಲಿ ಲಿಫ್ಟ ಅಳವಡಿಕೆ ಮತ್ತು 32 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ 406.5 ಕೋಟಿ ರೂ. ಎರಡನೇ ಹಂತದಲ್ಲಿ ಹೆಡ್​ವರ್ಕ ಮತ್ತು 66 ಕೆರೆತುಂಬಿಸಲು 298.7 ಕೋಟಿ. ರೂ. ಮೂರನೇ ಹಂತದಲ್ಲಿ ಹೆಡ್​ವರ್ಕ್ ಮತ್ತು 99 ಕೆರೆ ತುಂಬಿಸಲು 476.70 ಕೋಟಿ ರೂ. ಹಾಗೂ ನಾಲ್ಕನೇ ಹಂತದಲ್ಲಿ ಯೋಜನಗೆ ಒಳಪಡುವ ಆಯ್ದ ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ 100 ಕೋಟಿ ರೂ. ನೀಡಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದರು.

    ಪ್ರಸಕ್ತ ಸಾಲಿನಲ್ಲಿ ಮೊದಲ ಹಂತದ ಕಾಮಗಾರಿ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಹಂತ ಹಂತವಾಗಿ ಕಾಮಗಾರಿ ನಡೆದು 2025ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಸರ್ಕಾರ ಈ ಯೋಜನೆಗೆ ದೀಪಾವಳಿ ಸಂದರ್ಭದಲ್ಲಿ ಅನುಮೋದನೆ ನೀಡಿರುವುದು ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಿದೆ ಎಂದು ತಿಳಿಸಿದರು.

    ಜಿಪಂ ಸದಸ್ಯ ಕೆ.ಆರ್.ಮಹೇಶ್​ಒಡೆಯರ್, ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಪಿ.ದೇವಾನಂದ್, ಶೆಟ್ಟಿಹಳ್ಳಿ ರಾಮಜ್ಜ, ಬೀರೂರು ಪುರಸಭೆ ಅಧ್ಯಕ್ಷ ಸುದರ್ಶನ್, ಕಡೂರು ಪುರಸಭೆ ಉಪಾಧ್ಯಕ್ಷೆ ವಿಜಯಾ ಚಿನ್ನರಾಜು, ಎಚ್.ಎಂ .ರೇವಣ್ಣಯ್ಯ, ನಿರಂಜನಮೂರ್ತಿ, ಕೆ.ಎನ್.ಬೊಮ್ಮಣ್ಣ ಕೆ.ಬಿ.ಸೋಮೇಶ್, ಜಯಣ್ಣ, ಕೆ.ಎಚ್.ಶಂಕರ್, ಸಿಗೇಹಡ್ಲು ಹರೀಶ್, ಜೀಗಣೇಹಳ್ಳಿ ನೀಲಕಂಠಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts