More

    ಭತ್ತ ನಾಟಿಗಾಗಿ ಕಾಲುವೆಗೆ ನೀರು

    ಹಾನಗಲ್ಲ: ವಾಡಿಕೆ ಮಳೆ ಬಾರದ್ದರಿಂದ ರೈತ ಸಮುದಾಯ ಆತಂಕದಲ್ಲಿದ್ದು, ಭತ್ತದ ನಾಟಿ ಕಾರ್ಯಕ್ಕೆ ಸಮಸ್ಯೆಯಾಗದಂತೆ ಧರ್ವ ಜಲಾಶಯದಿಂದ 2 ಅಡಿ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಡಗೋಡ ತಾಲೂಕಿನಲ್ಲಿರುವ ಧರ್ವ ಜಲಾಶಯದಿಂದ ಜುಲೈನಲ್ಲಿ ಕಾಲುವೆಯಿಂದ 1 ಅಡಿ ನೀರು ಹರಿಸಲಾಗಿತ್ತು. ಪ್ರಸಕ್ತ ವರ್ಷದ ಮುಂಗಾರು ಗೋವಿನಜೋಳಕ್ಕೆ ಸಹಕಾರಿಯಾಗಿದ್ದರೂ ಭತ್ತದ ನಾಟಿಗೆ ಸಾಲುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿ, ನೀರು ಹರಿಸುವಂತೆ ಬೇಡಿಕೆ ಇಟ್ಟಿದ್ದರು. ಇದೀಗ ನೀರು ಹರಿಸಲು ತೀರ್ವನಿಸಲಾಗಿದೆ ಎಂದರು.

    ನೀರಾವರಿ ಇಲಾಖೆ ಎಇಇ ಜಿ.ಸಿ. ಶಿವಮೂರ್ತಿ ವಿವರ ನೀಡಿ, ಜಲಾಶಯದ ಪಾತಳಿಯ 29 ಅಡಿಗಳಲ್ಲಿ ಈಗ 20 ಅಡಿ ನೀರಿನ ಸಂಗ್ರಹವಿದೆ. ಇದರಲ್ಲಿ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 15 ಅಡಿ ನೀರು ಕಾಯ್ದಿರಿಸಬೇಕಿದೆ. ಉಳಿದ 5 ಅಡಿಗಳಲ್ಲಿ ಈಗ ಕೃಷಿ ಕಾರ್ಯಕ್ಕೆ ನೀರು ಹರಿಸಬೇಕಿದೆ. ಕೆರೆ-ಕಟ್ಟೆಗಳಿಗೆ ತುಂಬಿಸಲು 3000 ಕ್ಯುಸೆಕ್ ನೀರು ಬೇಕು. ಆದರೆ, ಸದ್ಯ 2000 ಕ್ಯುಸೆಕ್ ನೀರು ಸಂಗ್ರಹವಿದ್ದು, ನಾಟಿಗೆ ಮಾತ್ರ ನೀಡಬಹುದಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಂದರೆ ಮಾತ್ರ ನೀರೊದಗಿಸಲು ಸಾಧ್ಯವಿದೆ. ಬುಧವಾರದಿಂದ 5 ದಿನಗಳವರೆಗೆ ನೀರನ್ನು ಕಾಲುವೆಗೆ ಹರಿಸಲಾಗುವುದು ಎಂದರು.

    ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಜಲಾಶಯದಿಂದ ಕಾಲುವೆಯ ಕೊನೆಯ ಗ್ರಾಮದ ಕೃಷಿ ಭೂಮಿಗೂ ನೀರು ತಲುಪುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ತೂಬುಗಳೆಲ್ಲ ಜಾಮ್ ಆಗಿರುವುದರಿಂದ ಅವುಗಳನ್ನು ಕೂಡಲೆ ದುರಸ್ತಿಗೊಳಿಸಬೇಕು. ರೈತರು ತಮ್ಮ ಅವಶ್ಯಕತೆ ಇದ್ದಷ್ಟೇ ನೀರು ಬಳಸಿ ಮುಂದಿನವರಿಗೆ ನೀರು ಕೊಡಬೇಕು. ಇತರ ರೈತರೊಂದಿಗೆ ಸಹಕಾರದಿಂದ ವರ್ತಿಸಬೇಕು. ಭತ್ತ ಬಿತ್ತನೆ ಮಾಡಿರುವ ಕಾಲುವೆ ವ್ಯಾಪ್ತಿಯ ಕೊನೆಯ ಭಾಗದ ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಮಳೆಗಾಲದಲ್ಲಾದರೂ ಅವರಿಗೆ ನೀರು ತಲುಪಿಸುವ ವ್ಯವಸ್ಥೆಯಾಗಬೇಕು. ಪ್ರತಿ ಬಾರಿಯೂ ಕೊನೆಯಲ್ಲಿರುವ ರೈತರು ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

    ಅಕ್ಕಿಆಲೂರಿನ ರೈತ ರಾಜಣ್ಣ ಗೌಳಿ ಮಾತನಾಡಿ, ನೀರು ಎಲ್ಲರ ಹೊಲಗಳಿಗೆ ಸಮರ್ಪಕವಾಗಿ ತಲುಪುವುದಕ್ಕಾಗಿ ನೀರಾವರಿ ಇಲಾಖೆ ಪ್ರತಿ 3 ಕಿ.ಮೀ.ಗೊಬ್ಬರಂತೆ ತಾತ್ಕಾಲಿಕ ಸಿಬ್ಬಂದಿ ನೇಮಿಸಬೇಕು ಎಂದು ಹೇಳಿದರು.

    ಸಭೆಯಲ್ಲಿ ನೀರಾವರಿ ಇಲಾಖೆ ಇಂಜಿನಿಯರ್​ಗಳಾದ ಜಾವೇದ್ ಮುಲ್ಲಾ, ಎಲ್. ರಾಕೇಶ, ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಕಡ್ಲೇರ, ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಕೆ.ಟಿ. ಕಲಗೌಡ್ರ, ಶ್ರೀಕಾಂತ ದುಂಡಣ್ಣನವರ, ನಾಗನಗೌಡ ಪಾಟೀಲ, ಚಂದ್ರಣ್ಣ ಕಾರೇರ, ಬಿ.ಸಿ. ಪಾಟೀಲ, ರವಿ ದೇಶಪಾಂಡೆ, ಸೋಮಣ್ಣ ಜಡೆಗೊಂಡರ, ಅಜ್ಜನಗೌಡ ಕರೇಗೌಡ್ರ ಇತರರು ಉಪಸ್ಥಿತರಿದ್ದರು.

    ಕಳೆದ ವರ್ಷದ ಅತಿವೃಷ್ಟಿ ಸಂದರ್ಭದಲ್ಲಿ ಕಾಲುವೆಯ ಒಡ್ಡು ಹಾಗೂ ತೂಬುಗಳಿಗೆ ಹಾನಿಯಾಗಿದೆ. ಅವುಗಳು ದುರಸ್ತಿಯಾದರೆ ನೀರು ಪೋಲಾಗುವುದಿಲ್ಲ. ನೀರು ಹರಿಸುವ ಮುನ್ನ ತೂಬುಗಳನ್ನು ಪರಿಶೀಲಿಸಿ, ಸರಿಪಡಿಸಲು ಸೂಚಿಸಲಾಗುವುದು. ಕಳೆದ ವರ್ಷವೂ ಆಗಸ್ಟ್​ನಲ್ಲಿ ಹೆಚ್ಚು ಮಳೆ ಬಿದ್ದಿತ್ತು. ಸೆಪ್ಟೆಂಬರ್​ವರೆಗೂ ಇನ್ನೂ ಮಳೆಗಾಲವಿದೆ. ರೈತರು ಆತಂಕಪಡುವ ಅಗತ್ಯವಿಲ್ಲ.
    | ಪಿ.ಎಸ್. ಯರ್ರಿಸ್ವಾಮಿ, ತಹಸೀಲ್ದಾರ್ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts