More

    ಭತ್ತದ ಬೆಲೆ ಏರಿಕೆ ರೈತರ ಮುಗುಳುನಗೆ  – ಎಪಿಎಂಸಿಯಲ್ಲಿ ವಹಿವಾಟು ಜೋರು – ಖರೀದಿ ಕೇಂದ್ರಗಳಲ್ಲಿ ಬರೀ ಬೋರು! 

    ಡಿ.ಎಂ.ಮಹೇಶ್, ದಾವಣಗೆರೆ : ಭತ್ತದ ಸೀಸನ್ ಶುರುವಾಗಿದ್ದು, ಅದರ ಬೆಲೆಯಲ್ಲೂ ಉತ್ತಮ ಓಪನಿಂಗ್ ಆಗಿದೆ. ಹೀಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯತ್ತ ರೈತರು ಮುಖ ಮಾಡಿದ್ದಾರೆ. ಖರೀದಿ ದರ ಏರಿಕೆಯಿಂದಾಗಿ, ಬರಗಾಲದ ನಡುವೆಯೂ ಅನ್ನದಾತರ ಮುಖದಲ್ಲಿ ಮುಗುಳುನಗೆ ಮೂಡಿದೆ.
    ದಾವಣಗೆರೆ ಎಪಿಎಂಸಿಯಲ್ಲಿ 15 ದಿನದಿಂದ ಭತ್ತದ ವಹಿವಾಟು ಹಿಗ್ಗಿದೆ. ನ.1ರಿಂದ ಇದುವರೆಗೆ 3904 ಕ್ವಿಂ. ಭತ್ತ ಆವಕವಾಗಿದೆ. ಸರ್ಕಾರ ಘೋಷಿತ ಬೆಂಬಲ ಬೆಲೆ, ಮಾರುಕಟ್ಟೆಗಿಂತಲೂ ಕಡಿಮೆ ಇರುವ ಕಾರಣಕ್ಕೆ ಜಿಲ್ಲೆಯ ಭತ್ತ ಖರೀದಿ ಕೇಂದ್ರಗಳು ಖಾಲಿ ಹೊಡೆಯುತ್ತಿವೆ. ನ. 15ರಿಂದ ಶುರುವಾದ ನೋಂದಣಿಗೆ ಸ್ಪಂದನೆ ಮಾತ್ರ ಶೂನ್ಯ!
    ಕಳೆದ ವರ್ಷ, ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ನವೆಂಬರ್ ಹೊತ್ತಿಗೆ 15507 ಕ್ವಿಂ. ಭತ್ತ ಆವಕವಾಗಿತ್ತು. ಆಗ ಕ್ವಿಂಟಾಲ್ ಒಂದಕ್ಕೆ 1855ರೂ. ಕನಿಷ್ಠ ಹಾಗೂ 2415 ರೂ.ಗಳ ಗರಿಷ್ಠ ದರವಿತ್ತು. ಈಗ 2520 ರೂ. ನಿಂದ 2910 ರೂ.ಗಳವರೆಗೆ ಗರಿಷ್ಠ ಬೆಲೆ ಸಿಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 300ರಿಂದ 700 ರೂ.ಗಳ ಅಂತರ, ರೈತರಲ್ಲಿ ಖರೀದಿಯ ಜೋಷ್ ಹೆಚ್ಚಿಸಿದೆ.
    ಜಿಲ್ಲೆಯಲ್ಲಿ 54 ಸಾವಿರ ಹೆಕ್ಟೇರ್ ನಾಟಿ ಮಾಡಲಾಗಿತ್ತು. ಎಕರೆಗೆ 40 ಚೀಲ ಇಳುವರಿಯಾಗಿರುವ ಅಂದಾಜಿದೆ. ಈ ಬಾರಿ ಶುಷ್ಕ ವಾತಾವರಣವಿದ್ದರಿಂದ ಎಕರೆಗೆ 5ರಿಂದ 10 ಚೀಲ ಹೆಚ್ಚುವರಿ ಇಳುವರಿಯಾಗಿದೆ. ತಡವಾಗಿ ನಾಟಿ ಮಾಡಿರುವ ರೈತರು ಬರುವ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.
    ಆರ್‌ಎನ್‌ಆರ್ ಭತ್ತಕ್ಕೆ ಗರಿಷ್ಠ 2700 ರೂ, ಶ್ರೀರಾಮ/ಜಯಶ್ರೀ ತಳಿಗೆ 3200 ರೂ. ಹಾಗೂ ಐಆರ್-64 ಭತ್ತಕ್ಕೆ ಗರಿಷ್ಠ 2300 ರೂ. ಬೆಲೆ ಇದೆ. ಸಾಲದ ನೆರವು ದಲ್ಲಾಲರ ಮೂಲಕವೇ ಕೆಲವು ಅನ್ನದಾತರು ಭತ್ತ ಮಾರಾಟ ಪ್ರಕ್ರಿಯೆ ನಡೆಸುವುದರಿಂದ ದಲ್ಲಾಲರಲ್ಲೂ ಉತ್ತಮ ಆದಾಯದ ನಿರೀಕ್ಷೆಯೂ ಹೆಚ್ಚಿದೆ. ಕೆಲ ರೈತರು ಒಪ್ಪಂದದಂತೆ ಗದ್ದೆ ಹಂತದಲ್ಲೇ ಖರೀದುದಾರರಿಗೆ ಮಾರಾಟ ಮಾಡುವ ಮೂಲಕ ಸಾಗಣೆ, ಚೀಲ ಹಾಗೂ ಇನ್ನಿತರೆ ವೆಚ್ಚಕ್ಕೆ ಗುಡ್‌ಬೈ ಹೇಳುತ್ತಿದ್ದಾರೆ.
    ಬೆಂಬಲ ಬೆಲೆ ಯೋಜನೆಯಡಿ ದಾವಣಗೆರೆ, ಹರಿಹರ, ಹೊನ್ನಾಳಿ ಮತ್ತು ಚನ್ನಗಿರಿಯ ಖರೀದಿ ಕೇಂದ್ರಗಳನ್ನು ಆರಂಭಿಸುವ ಸಿದ್ಧತೆ ನಡೆದಿದೆ. ಸಾಮಾನ್ಯ ಭತ್ತಕ್ಕೆ 2183 ರೂ., ಎ ಗ್ರೇಡ್ ಭತ್ತಕ್ಕೆ 2203 ರೂ. ನಿಗದಿಪಡಿಸಿದ್ದರೂ ಲಾಭ ನೀಡಿಲ್ಲ. ಹೀಗಾಗಿ ಈ ಕೇಂದ್ರಗಳು ನಾಮ್‌ಕೇವಾಸ್ತೆ ಎಂಬಂತಾಗಿವೆ.

    ಒಂದೂವರೆ ಎಕರೆಯಲ್ಲಿ ಭತ್ತ ಬೆಳೆದಿದ್ದೆ. 60 ಚೀಲ ಇಳುವರಿ ಬಂದಿದ್ದು, ಕ್ವಿಂಟಾಲ್‌ಗೆ 2900 ರೂ. ಬೆಲೆ ಸಿಕ್ಕಿದೆ. ಎಕರೆಗೆ 35 ಸಾವಿರ ರೂ.ಗಳಷ್ಟು ವೆಚ್ಚ ಮಾಡಿರುವ ರೈತರಿಗೆ ಇದರಿಂದ ಅನುಕೂಲವಾಗಲಿದೆ.
    ಬೇತೂರು ಮುರುಗೇಶ್
    ಭತ್ತ ಬೆಳೆಗಾರ.

    ಆರು ಎಕರೆಯಲ್ಲಿ ಬೆಳೆದ ಏಳು ಲೋಡ್ ಭತ್ತವನ್ನು ಎಪಿಎಂಸಿಗೆ ತಂದಿದ್ದೇನೆ. ಕಳೆದ ಸಾಲಿಗಿಂತ 700-800 ರೂ. ದರ ಹೆಚ್ಚಿದೆ. ಇವತ್ತು 2900 ರೂ. ದರವಿತ್ತು. ನಾಳೆ ಯಾವ ದರ ಸಿಗುತ್ತದೆಂದು ಕಾದು ನೋಡಬೇಕು.
    ಎಸ್.ಜಿ. ಕಲ್ಲೇಶಪ್ಪ
    ಎಚ್. ಕಲಪನಹಳ್ಳಿ ರೈತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts