More

    ಭತ್ತದ ಬೆಂಬಲ ಬೆಲೆಯತ್ತ ನಿರಾಸಕ್ತಿ

    ಸುಭಾಸ ಧೂಪದಹೊಂಡ ಕಾರವಾರ

    ಸರ್ಕಾರದ ಬೆಂಬಲ ಬೆಲೆಯಲ್ಲಿ ಭತ್ತ ಮಾರಾಟಕ್ಕೆ ಜಿಲ್ಲೆಯ ರೈತರು ನಿರಾಸಕ್ತಿ ತೋರಿದ್ದಾರೆ. ಇದುವರೆಗೆ ಜಿಲ್ಲೆಯ 56 ರೈತರು ಮಾತ್ರ ತಮ್ಮ ಹೆಸರು ನೋಂದಾಯಿಸಿದ್ದಾರೆ.

    ಅಕ್ಕಿ ಗಿರಣಿಗಳು ಆಸಕ್ತಿ ತೋರುತ್ತಿಲ್ಲ ಎಂಬ ಕಾರಣಕ್ಕೆ ಕಳೆದ ಬಾರಿ ಜಿಲ್ಲೆಯಲ್ಲಿ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರವನ್ನೇ ತೆರೆದಿರಲಿಲ್ಲ. ಈ ಬಾರಿ ಕುಮಟಾ, ಕಾರವಾರ ಹಾಗೂ ಮುಂಡ ಗೋಡದಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿದ್ಧತೆ ನಡೆಸಿದೆ. ಭತ್ತವನ್ನು ದಾಸ್ತಾನು ಮಾಡಲು, ಅಕ್ಕಿ ಮಾಡಿಕೊಡಲು ಕುಮಟಾದ ಮಾಸೂರು, ಶಿರಸಿಯ ಇಸಳೂರು, ಹಾಗೂ ಮುಂಡಗೋಡ ತಾಲೂಕಿನ ಎರಡು ಅಕ್ಕಿ ಗಿರಣಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಉತ್ತಮ ಬೆಲೆ: ಜಿಲ್ಲೆಯ ಮಾರುಕಟ್ಟೆಯಲ್ಲಿ ಸದ್ಯ ಸಾಮಾನ್ಯ ಗುಣಮಟ್ಟದ ಭತ್ತ ಕ್ವಿಂಟಾಲ್​ಗೆ 1600 ರಿಂದ 1700 ರೂ.ಗೆ ಮಾರಾಟವಾಗುತ್ತಿದೆ. ಅದೇ ಭತ್ತಕ್ಕೆ 1815 ರೂ. ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಸಲಿದೆ. ಮೇಲಾಗಿ ರಾಜ್ಯ ಸರ್ಕಾರ 200 ರೂ. ಹೆಚ್ಚುವರಿ ಪ್ರೋತ್ಸಾಹ ಧನ ಘೊಷಿಸಿದೆ. ರೈತರು ಮೊದಲು ಭತ್ತವನ್ನು ತಂದು ಮಿಲ್​ಗಳಲ್ಲಿ ಇಟ್ಟು ಸರ್ಕಾರದ ಜತೆ ಒಪ್ಪಂದ ಮಾಡಿಕೊಳ್ಳಬೇಕು. ನಂತರ ಗ್ರೇಡ್ ನಿಗದಿ ಮಾಡಬೇಕು. ಸರ್ಕಾರ ತಿಳಿಸಿದಾಗ ಅದನ್ನು ಅಕ್ಕಿ ಮಾಡಿ ನೀಡಬೇಕಿದೆ. ಒಬ್ಬ ರೈತನಿಂದ ಒಂದು ಎಕರೆಗೆ ಗರಿಷ್ಠ 16 ಕ್ವಿಂಟಾಲ್ ಹಾಗೂ ಒಟ್ಟಾರೆ ಗರಿಷ್ಠ 40 ಕ್ವಿಂಟಾಲ್ ಭತ್ತವನ್ನು ಮಾತ್ರ ಖರೀದಿಸಲು ಅವಕಾಶವಿದೆ. ರೈತರು ಪ್ರತಿ ಕ್ವಿಂಟಾಲ್ ಭತ್ತಕ್ಕೆ 65 ಕೆಜಿ ಅಕ್ಕಿಯನ್ನು ನೀಡಬೇಕು ಎಂಬ ನಿಯಮವಿದೆ.

    ಫ್ರೋಟ್ಸ್ ತಂತ್ರಜ್ಞಾನ ಹಿಂದೆ ರೈತರು ಪಹಣಿ, ಬ್ಯಾಂಕ್ ವಿವರಗಳನ್ನು ಖರೀದಿ ಕೇಂದ್ರಗಳಲ್ಲಿ ನೀಡಬೇಕಿತ್ತು. ಒಂದೇ ಪಹಣಿಯನ್ನು ಹಲವರು ಬಳಸಿ ಭತ್ತ ಮಾರಾಟ ಮಾಡುತ್ತಿದ್ದರು. ದಲ್ಲಾಳಿಗಳ ಹಾವಳಿ ಇತ್ತು. ಇದರಿಂದ ಕಳೆದ ಸಾಲಿನಿಂದ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ದಾಖಲಿಸುವ ತಂತ್ರಾಂಶ (ಫ್ರೋಟ್ಸ್) ವ್ಯವಸ್ಥೆ ಜಾರಿಗೆ ತರಲಾಗಿದೆ. ರೈತರು ಇದರಲ್ಲಿ ಹೆಸರು, ವಿಳಾಸ, ಜಮೀನು, ಜಾತಿ, ವಯಸ್ಸು, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಮಾಹಿತಿಯನ್ನು ನೀಡಿ ಹೆಸರನ್ನು ಆನ್​ಲೈನ್​ನಲ್ಲಿ ನೋಂದಾಯಿಸಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ರೈತರು ಹೆಸರು ನೋಂದಾಯಿಸಿದ್ದಾರೆ. ಆದರೆ, ಉತ್ತರ ಕನ್ನಡಲ್ಲಿ ಮಾತ್ರ ಇದಕ್ಕೆ ನೀರಸ ಸ್ಪಂದನೆ ದೊರಕಿದೆ. ಕುಮಟಾದಲ್ಲಿ 7, ಶಿರಸಿಯಲ್ಲಿ 37, ಮುಂಡಗೋಡಿನಲ್ಲಿ 16 ರೈತರು ಮಾತ್ರ ಹೆಸರು ನೋಂದಾಯಿಸಿದ್ದಾರೆ.

    ನಿರಾಸಕ್ತಿ ಏಕೆ?: ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚುತ್ತಿದ್ದು, ಭತ್ತ ಬೆಳೆಯುವ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ನೆರೆ ಹಾವಳಿಯ ಪರಿಣಾಮ ಮಾರಾಟಕ್ಕೆ ಭತ್ತವೇ ಉಳಿದಿಲ್ಲ. ತಕ್ಷಣ ಹಣ ಸಿಗದು. ಭತ್ತವನ್ನು ಅಕ್ಕಿ ಗಿರಣಿಗಳಲ್ಲಿಟ್ಟು ಅಕ್ಕಿ ಮಾಡಿಸಿ ಮಾರಲು ಸರ್ಕಾರದ ಆದೇಶಕ್ಕಾಗಿ ಕಾಯಬೇಕು. ಭತ್ತಕ್ಕೆ ಸಾಕಷ್ಟು ಬೇಡಿಕೆ ಇರುವುದರಿಂದ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆ ಸಿಗಬಹುದು ಎಂಬ ನಿರೀಕ್ಷೆ. ಭತ್ತ ಖರೀದಿ ಕೇಂದ್ರದ ಬಗ್ಗೆ ಮಾಹಿತಿ ಕೊರತೆ. ನೋಂದಣಿಗಾಗಿ ಕೇಂದ್ರಕ್ಕೆ ಓಡಾಡಲು ಇಷ್ಟ ಇಲ್ಲದಿರುವುದು.

    ಅಕ್ಕಿ ಗಿರಣಿ ಮಾಲೀಕರ ಜತೆ ಜತೆ ಮಾತುಕತೆ ನಡೆಸಿ ಭತ್ತ ಖರೀದಿ ಕೇಂದ್ರಕ್ಕೆ ಎಲ್ಲ ಸಿದ್ಧತೆ ನಡೆಸಿದ್ದೇವೆ. ಫೆಬ್ರವರಿ ಅಂತ್ಯದವರೆಗೂ ರೈತರು ತಮ್ಮ ಹೆಸರು ನೋಂದಾಯಿಸಲು ಅವಕಾಶವಿದೆ. ಮಾರ್ಚ್ 31ರವರೆಗೆ ಭತ್ತವನ್ನು ತಂದಿಡಲು ಅವಕಾಶವಿದೆ. ಉತ್ತಮ ಬೆಲೆಯೂ ಸಿಗಲಿದೆ. ಜಿಲ್ಲೆಯ ಭತ್ತ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. | ಪುಟ್ಟಸ್ವಾಮಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಡಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts