More

    ಭಗವಾನ್ ಮಹಾವೀರರ ಭಾವಚಿತ್ರ ಮೆರವಣಿಗೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಭಗವಾನ್ ಮಹಾವೀರರ ಜನ್ಮಕಲ್ಯಾಣ ಮಹೋತ್ಸವ ನಿಮಿತ್ತ ಹುಬ್ಬಳ್ಳಿ ದಿಗಂಬರ ಜೈನ ಸಮಾಜ ವತಿಯಿಂದ ಭಗವಾನ್ ಮಹಾವೀರರ ಜಿನಬಿಂಬ, ಭಾವಚಿತ್ರಗಳನ್ನೊಳಗೊಂಡ ರಥ ಹಾಗೂ ಸಮಾಧಿಸ್ಥ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ಭಾವಚಿತ್ರದ ಮೆರವಣಿಗೆ ಮಂಗಳವಾರ ನಗರದಲ್ಲಿ ಜರುಗಿತು.

    ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜೈನ್ ಸಮಾಜದವರು ಪಾಲ್ಗೊಂಡಿದ್ದರು. ಸಮಾಧಿಸ್ಥ ಭಟ್ಟಾರಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಹಿತ ವಿನಯಾಂಜಲಿ ಸಮರ್ಪಿಸಿದರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಗೌರವಾರ್ಥ ನಿಯೋಜಿತ ಸಭೆ, ಸಮಾರಂಭ, ಸನ್ಮಾನ, ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. ಪ್ರಾತಃಕಾಲದಲ್ಲಿ ನಗರದ ಎಲ್ಲ ಬಸದಿಗಳಲ್ಲಿ ವಿಶೇಷ ಪೂಜೆ, ನಾಮಕರಣೋತ್ಸವಗಳು ಜರುಗಿದವು.

    ನವನಗರ: ಅಲ್ಪ ಸಂಖ್ಯಾತ ಜೈನ ಸೇವಾ ಸಂಘ ಹಾಗೂ ಬಹುರೂಪಿಣಿ ಮಹಿಳಾ ಮಂಡಳ ಆಶ್ರಯದಲ್ಲಿ ನವನಗರದ ಜೈನ ಮಂದಿರದಲ್ಲಿ ಮಂಗಳವಾರ ಭಗವಾನ್ ಮಹಾವೀರ ತೀರ್ಥಂಕರರ ಜಯಂತಿ ಆಚರಿಸಲಾಯಿತು.

    ಬೆಳಗ್ಗೆ ನವನಗರದ ಜೈನ ಮಂದಿರದಲ್ಲಿ ಭಗವಾನ ಮಹಾವೀರರಿಗೆ ಪಂಚಾಮೃತ ಅಭಿಷೇಕ, ವಿಶೇಷ ಶಾಂತಿ, ಪೂಜೆ ಜರುಗಿತು. ನಂತರ ಭಗವಾನ್ ಮಹಾವೀರರ ಭಾವ ಚಿತ್ರದ ಮೆರವಣಿಗೆಯನ್ನು ಜಯಧರ ಪಾಟೀಲ ಉದ್ಘಾಟಿಸಿದರು.

    ನಂತರ ನಡೆದ ಧರ್ಮಸಭೆಯಲ್ಲಿ ವಿಜಯಕುಮಾರ ಅಪ್ಪಾಜಿ, ಸುನೀತಾ ಕಳಸೂರ ಇತರರು ಆಗಮಿಸಿದ್ದರು.

    ಜೈನ ಭಾರತ ಪುಸ್ತಕ ಬಿಡುಗಡೆ: ಉತ್ತರ ಕರ್ನಾಟಕ ಜೈನ ಮಹಾಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಅವರು ಬರೆದ ಜೈನ ಭಾರತ ಪುಸ್ತಕವನ್ನು ನ್ಯಾಯವಾದಿ ಸುನೀತಾ ಕಳಸೂರ ಬಿಡುಗಡೆ ಮಾಡಿದರು.

    ಭಗವಾನ ಮಹಾವೀರ ಸಂದೇಶ ಸಾರುವ ವಿಶೇಷ ಸಂಚಿಕೆಯನ್ನು ಅತಿಥಿ ವಿಜಯಕುಮಾರ ಅಪ್ಪಾಜಿ ಬಿಡುಗಡೆ ಮಾಡಿದರು. ಜೈನ ಯುವಕ ಮಂಡಳದವರು ಏರ್ಪಡಿಸಿದ್ದ ಜೈನ ರಸ ಪ್ರಶ್ನೆ ಕಾರ್ಯಕ್ರಮವನ್ನು ಕೀರ್ತಿ ಅವಲಕ್ಕಿ ನೆರವೇರಿಸಿಕೊಟ್ಟರು. ಜೈನ ಗೀತೆ, ಹಾಡು ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿದರು.

    ಸಂಘದ ಅಧ್ಯಕ್ಷ ಶಾಂತರಾಜ ಮಲ್ಲಸಮುದ್ರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಖಜಾಂಚಿ ರವಿ ರಾಮಪ್ಪನವರ ವಂದಿಸಿದರು. ಸುಖೇತಾ ಹೊಂಡದ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts