More

    ಹೊಸ ಬೆಳಕು ತೋರಿದ ಭಗವಾನ್ ಮಹಾವೀರರು: ಇಂದು ಜಯಂತಿ

    ಹೊಸ ಬೆಳಕು ತೋರಿದ ಭಗವಾನ್ ಮಹಾವೀರರು: ಇಂದು ಜಯಂತಿಸರ್ವ ಜೀವಿಗಳಿಗೂ ಹಿತವನ್ನು ಬಯಸುವ ಸವೋದಯ ಧರ್ಮವನ್ನು ಸಾರಿದ ಭಗವಾನ್ ಮಹಾವೀರರ ಮಧುರವಾಣಿಯು ಅವರ ಅನುಯಾಯಿಗಳಾದ ಜೈನರಿಗಷ್ಟೇ ಅಲ್ಲ ಇಡೀ ಜೀವಕೋಟಿಗೆ ಸಾಂತ್ವನ ನೀಡಬಲ್ಲುದು. ಗೊಂದಲಮಯವಾದ ಇಂದಿನ ದಿನಗಳಲ್ಲಿ ಬಾಳಿಗೆ ಶಾಂತಿಪಥವನ್ನು ತೋರಬಲ್ಲದು.

    ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿದ ಎಲ್ಲ ಮಹನೀಯರು ಮಾನವ ಜೀವನದ ವರ್ತಮಾನ, ಭೂತ, ಭವಿಷ್ಯತ್​ಗಳ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದರು. ಎಲ್ಲದಕ್ಕಿಂತ ಪ್ರಮುಖವಾಗಿ ಶರೀರ, ಜೀವಾತ್ಮ, ಪುನರ್ಜನ್ಮ, ಕರ್ಮ ಸಿದ್ಧಾಂತಗಳ ಬಗ್ಗೆ ವಿಶ್ಲೇಷಣೆ ಮತ್ತು ನಿರೂಪಣೆ ಮೂಲಕ ದಾರಿ ತೋರಿಸಿದ ಮಹಾತ್ಮರಿವರು. ಇಂದಿಗೆ ಸುಮಾರು 2600 ವರ್ಷಗಳ ಹಿಂದೆ ಭಾರತದಾದ್ಯಂತ ಹೊಸತೊಂದು ಬೆಳಕನ್ನು ತೋರಿದ ಅಂತಹ ಮಹಾನುಭಾವರೆಂದರೆ ತೀರ್ಥಂಕರ ಭಗವಾನ್ ಮಹಾವೀರರು.

    ಶ್ರೀಮಂತಿಕೆಯ ಸಕಲ ವೈಭವ ಸಂಪನ್ನವಾದ ರಾಜಕುಲದಲ್ಲಿ ಜನಿಸಿಯೂ ಕೂಡಾ ಜನಸಮೂಹದ ಸಂಕಷ್ಟ, ದುಃಖ ದಾರಿದ್ರ್ಯ ತಾಪತ್ರಯಗಳನ್ನು ಕಂಡು ವಿರಕ್ತರಾಗಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದ ಮಹಾವೀರರು ಸುದೀರ್ಘ ಕಾಲ ತಪಸ್ಸನ್ನಾಚರಿಸಿದಾಗ ವಿವಿಧ ಪ್ರಕಾರವಾದ ಕರ್ಮಗಳು ನಾಶವಾದುವು ಹಾಗೂ ಪರಿಶುದ್ಧ ಆತ್ಮನಿಗೆ ಜ್ಞಾನೋದಯವಾಯಿತು. ಇದನ್ನೇ ಅತ್ಯುತ್ಕೃ್ಟವಾದ ‘ಕೇವಲಜ್ಞಾನ’ ಎಂದು ಕರೆಯುತ್ತಾರೆ. ಈ ಕೇವಲಜ್ಞಾನವುಂಟಾದವರು ಜಗತ್ತಿನ ಜೀವ ಸಮುದಾಯಕ್ಕೆಲ್ಲ ಸೂಕ್ತ ಮಾರ್ಗದರ್ಶನ ನೀಡಲೆಂದು ಧರ್ಮದ ಬೆಳಕನ್ನು ಪ್ರಸಾರ ಮಾಡುತ್ತಾರೆ. ಅಂಥ ಧರ್ಮಪ್ರಸಾರಕ್ಕೆಂದೇ ‘ಸಮವಸರಣ’ ಸಭೆಯೆಂಬ ವಿಶೇಷ ಸಭಾಭವನವು ನಿರ್ವಿುತವಾಗುತ್ತದೆ. ಈ ಧರ್ಮಸಭೆಯಲ್ಲಿ ದೇವತೆಗಳೂ, ಮನುಷ್ಯರೂ, ಪಶು- ಪಕ್ಷಿಗಳೂ ಹೋಗಿ ಧರ್ಮ ಪ್ರವಚನವನ್ನು ಆಲಿಸಬಹುದಾಗಿತ್ತು. ಈ ಧರ್ಮಸಭೆಯ ವೈಶಿಷ್ಟ್ಯೆಂದರೆ ಎಲ್ಲ ವರ್ಗದ ಜೀವಿಗಳಿಗೂ ಅವರವರ ಭಾಷೆಯಲ್ಲಿ ಅರ್ಥವಾಗುವಂತೆ ಉಪದೇಶದ ಪ್ರಸಾರ ಆಗುತ್ತಿತ್ತು. ಈ ಧರ್ಮದ ತತ್ವಗಳನ್ನು ಜೈನಧರ್ಮದ ತತ್ವಗಳೆಂದು ಗುರುತಿಸಿದರೂ ಮೂಲತಃ ಅವು ಮಾನವಧರ್ಮದ ಉದಾತ್ತ ಆಶಯಗಳನ್ನೇ ನಿರೂಪಿಸುತ್ತಿದ್ದುವು.

    ಸಮ್ಯಕ್​ದರ್ಶನ; ಜ್ಞಾನಚಾರಿತ್ರಾಣಿ ಮೋಕ್ಷ ಮಾರ್ಗ ಎಂದು ಹೇಳಿದ ಭಗವಾನ್ ಶ್ರೀ ಮಹಾವೀರರು ದೃಢವಾದ ನಂಬಿಕೆ, ಪ್ರಬಲವಾದ ಜ್ಞಾನ ಮತ್ತು ಅದಕ್ಕನುಸಾರವಾದ ಚಾರಿತ್ರ್ಯ ಇವು ಮೂರೂ ಅಗತ್ಯವೆಂದು ಸಾರಿದರು. ಈ ಸಂಸಾರದಿಂದ ಬಿಡುಗಡೆ ಅಂದರೆ ಮುಕ್ತಿಯ ದಾರಿಯನ್ನೂ ತೋರಿಸುವ ಇವುಗಳನ್ನೆ ‘ರತ್ನತ್ರಯ’ಗಳೆಂದು ಕರೆದರು. ಈ ಪ್ರಪಂಚದ ಜೀವಿಗಳನ್ನು ಲೌಕಿಕ ದುಃಖಗಳ ಬಂಧನದಿಂದ ಬಿಡಿಸಿ ಯಾವುದು ಉತ್ತಮವಾದ ಸುಖದಲ್ಲಿ ಸ್ಥಾಪಿಸಬಲ್ಲುದೋ ಅದನ್ನೇ ‘ಧರ್ಮ’ವೆಂದು ಕರೆಯುತ್ತಾರೆ. ಕೋಮು ಸಂಘರ್ಷಗಳಿಗೆ ಮತ್ತು ಭಿನ್ನಾಭಿಪ್ರಾಯಗಳಿಗೆ ಕಾರಣವಾಗುವ ಸಂಕುಚಿತ ಅರ್ಥದ ಶಾಸ್ತ್ರ, ಪುರಾಣ ಮೂಢನಂಬಿಕೆಗಳಿಂದ ಭಿನ್ನವಾದ ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ಉದಾತ್ತ ಕಲ್ಪನೆಯೇ ಧರ್ಮವಾಗಿದೆ. ಭಗವಾನ್ ಮಹಾವೀರರು ಉಪದೇಶಿಸಿದ ಧರ್ಮವು ವಾಸ್ತವವಾಗಿ ಮಾನವಧರ್ಮವೇ ಆಗಿದೆ.

    ಮಹಾವೀರರ ಉಪದೇಶ ಜಾತಿ ಮತ ಪಂಥಗಳಿಗೆ ಮೀರಿದುದು. ಸರ್ವ ಜೀವಿಗಳು ಸಮಾನರು. ಪ್ರತಿಜೀವಿಗೂ ಬದುಕುವ ಹಕ್ಕಿದೆ. ‘ಬದುಕು ಮತ್ತು ಬದುಕಗೊಡು’-‘ಜೀವೊ ಔರ್ ಜೀವೋದೋ’ ‘ನೀನೂ ಬದುಕು ಇತರರನ್ನೂ ಬದುಕಲು ಬಿಡು’ ಎಂಬ ಮಹಾವೀರ ವಾಣಿಯೂ ವಿಶ್ವಶಾಂತಿಗೆ ಅಪೂರ್ವ ಕೊಡುಗೆ. ‘ನೀನು ಬದುಕುವುದು ನಿನ್ನ ಹಕ್ಕು. ಆದರೆ ಇತರರ ಬದುಕನ್ನು ಕಿತ್ತುಕೊಂಡು ಅವರ ಶಾಂತಿ, ನೆಮ್ಮದಿಯನ್ನು ಹಾಳುಮಾಡುವ ಅಧಿಕಾರ ನಿನಗಿಲ್ಲ’ ಎಂಬುದು ಮಹಾವೀರರ ಅತಿದೊಡ್ಡ ಸಂದೇಶ. ಚೈತನ್ಯರೂಪಿಯಾದ ನಿತ್ಯಾನಂದಮಯವಾದ ಜೀವ ಅಜ್ಞಾನದಿಂದ ತನ್ನ ನಿಜವನ್ನು ತಿಳಿಯದೆ ತನ್ನ ಸಾಮರ್ಥ್ಯವನ್ನು ಅರಿತು ಗುರುತಿಸದೆ ದುಃಖಿಯಾಗಿದ್ದಾನೆ. ಕ್ಷಣಿಕವಾದ ಮೋಹ-ಮಾಯೆಗಳ ಸಂಕ್ಷೇಪದಿಂದ ಭ್ರಮಾಧೀನನಾಗಿ ಹುಟ್ಟು ಸಾವುಗಳ ತಿರುಗಣೆಯಲ್ಲಿ ಬಿದ್ದಿದ್ದಾನೆ. ಒಮ್ಮೆ ತನ್ನತನದ ಅರಿವು ಅವನಿಗಾದರೆ ಸಾಕು. ಶಾಶ್ವತ ಸುಖದ ಒಡೆತನ ಅವನಿಗೆ ದೊರೆಯುತ್ತದೆ’ ಎಂಬುದೇ ಮಹಾವೀರರ ಸಂದೇಶ. ಈ ಸಾಧನೆಯಲ್ಲಿ ಕ್ರಮಿಸುವಾಗ ಜೀವಿಯ ದಾರಿದೀಪಗಳೆಂದರೆ- ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಈ ಪಂಚಾಣುವ್ರತಗಳು (ಪಂಚ ಅಣು ವ್ರತಗಳು)ಅತ್ಯಂತ ಸರಳ ಮತ್ತು ಪಾರದರ್ಶಕವಾದುವುಗಳು. ಧಾರ್ವಿುಕ ವಲಯದಂತೆ ಸಾಮಾಜಿಕ ಸುಖ- ಶಾಂತಿಗೆ ಬುನಾದಿಯಾಗಬಲ್ಲುವು. ತನ್ನಂತೆಯೇ ಪ್ರತಿಯೊಂದು ಜೀವಿಗೂ ಬದುಕುವ ಅವಕಾಶವಿದೆ. ಸುಖದ ಅಪೇಕ್ಷೆಯಿದೆ. ನಾವು ಅವುಗಳನ್ನು ನಮ್ಮ ಸ್ವಾರ್ಥಕ್ಕಾಗಿ ಕಸಿಯಬಾರದು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯೂ ಅರಿಯಬೇಕು. ‘ಪರಸ್ಪರ ಉಪಗ್ರಹೋಜೀವಾಣಾಂ’ ಎಂಬ ಉದಾತ್ತತತ್ವವನ್ನು ಮಹಾವೀರರು ಬೋಧಿಸಿದರು. ಸರ್ವರಿಗೆ ಸಮಬಾಳು ಎಂಬುದೇ ಮಹಾವೀರರ ದಿವ್ಯ ಸಂದೇಶವಾಗಿದೆ.

    ನಮ್ಮ ಕರ್ಮ ಫಲಗಳು ಪಾಪ-ಪುಣ್ಯ, ಸುಖ-ದುಃಖಗಳನ್ನು ನಿರ್ಧರಿಸುತ್ತವೆ ಎಂಬ ಕರ್ಮ ಸಿದ್ಧಾಂತವನ್ನು ಮಹಾವೀರರು ಬೋಧಿಸಿದರು. ಅಹಿಂಸೆ ಮತ್ತು ಅಪರಿಗ್ರಹಗಳ ಜತೆಗೆ ‘ಅನೇಕಾಂತವಾದ’ ಎಂದರೆ ಸತ್ಯವನ್ನು ಅನೇಕ ಮುಖಗಳಿಂದ ನೋಡಿ ತೀರ್ವನಿಸುವ ತತ್ವವನ್ನು ಬೋಧಿಸಿದರು. ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆಯನ್ನು ಸಾರಿದರು. ಜೀವಿಸಲು ಸಸ್ಯಾಹಾರವೇ ಸಾಕು; ಮಾಂಸಾಹಾರ ಬೇಡ ಎಂದರು. ‘ಅಹಿಂಸಾ ಪರಮೋಧರ್ಮಃ’ ಎಂದು ಬೋಧಿಸಿದರು. ಮದ್ಯಪಾನ, ಮಾದಕ ವಸ್ತುಗಳನ್ನು ತ್ಯಜಿಸಬೇಕು ಎಂದರು. ರಾತ್ರಿ ಭೋಜನ ತ್ಯಾಗ, ನೀರನ್ನು ಸೋಸಿ ಕುಡಿಯುವುದೇ ಮುಂತಾದವು ಅಹಿಂಸಾ ಧರ್ಮದ ಸಂಸ್ಕೃತಿ ಎಂದರು. ಕೈ ಬಾಯಿ, ಮನ ಮಾತುಗಳು ಸಂಯಮದಿಂದ ಕೂಡಿರಬೇಕು. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ಸಾರಿದರು. ಪಂಚಾಣು ವ್ರತಗಳ ಪಾಲನೆಯಿಂದ ವಿಶ್ವಶಾಂತಿ ಸಾಧ್ಯ ಎಂದು ಭಗವಾನ್ ಮಹಾವೀರರು ಬೋಧಿಸಿದರು.

    ಸರ್ವ ಜೀವಿಗಳಿಗೂ ಹಿತವನ್ನು ಬಯಸುವ ಸವೋದಯ ಧರ್ಮವನ್ನು ಸಾರಿದ ಭಗವಾನ್ ಮಹಾವೀರರ ಮಧುರವಾಣಿಯು ಅವರ ಅನುಯಾಯಿಗಳಾದ ಜೈನರಿಗಷ್ಟೇ ಅಲ್ಲ ಇಡೀ ಜೀವಕೋಟಿಗೆ ಸಾಂತ್ವನವನ್ನು ನೀಡಬಲ್ಲುದು. ಗೊಂದಲಮಯವಾದ ಇಂದಿನ ದಿನಗಳಲ್ಲಿ ಬಾಳಿಗೆ ಶಾಂತಿಪಥವನ್ನು ತೋರುವ ಭಗವಾನ್ ಮಹಾವೀರ ವಾಣಿಯು ನಮ್ಮನ್ನು ಮುನ್ನಡೆಸಲಿ-‘ಕ್ಷೇಮಂ ಸರ್ವಪ್ರಜಾನಾಂ’ ಎಂಬಂತೆ ಸರ್ವರಿಗೂ ಕ್ಷೇಮವುಂಟಾಗಲಿ. ದುರ್ಭಿಕ್ಷ, ಚೋರಮಾರಿ, ಇಂದು ನಮ್ಮನ್ನು ಕಾಡುತ್ತಿರುವ ಕರೊನಾದಂತಹ ಮಾರಿಗಳು ದೂರವಾಗಲಿ ಎಂದು ಮಹಾವೀರ ಜಯಂತಿಯ ಈ ಶುಭ ದಿನದಂದು ಆಶಿಸೋಣ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts