More

    ಭಕ್ತಿ, ಸಮರ್ಪಣೆ ಭಾವವಿದ್ದರೆ ದೇವಿ ಕೃಪೆ

    ಶಿಗ್ಗಾಂವಿ: ಭಕ್ತಿ ಸಮರ್ಪಣೆ ಭಾವ, ಉತ್ಕೃಷ್ಟವಾದ ಪ್ರೀತಿ, ಕಠಿಣ ಪರಿಶ್ರಮ ಇದ್ದಾಗ ಮಾತ್ರ ದೇವಿಯ ಆಶೀರ್ವಾದ ಸಿಗಲು ಸಾಧ್ಯ. ದೇವಿ ಪ್ರಸನ್ನ ಸ್ವರೂಪಿಯ ಅವತಾರ, ದೇವಿಯ ಆರಾಧನೆಯಲ್ಲಿ ಯಾರು ಪಾಲ್ಗೊಳ್ಳುತ್ತಾರೋ ಅವರಿಗೆ ದೇವಿಯ ಆಶೀರ್ವಾದ ಸದಾ ಇರುತ್ತದೆ. ಅದಕ್ಕೆ ಉದಾಹರಣೆ ನಾನೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಏರ್ಪಡಿಸಿದ್ದ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ 16 ವರ್ಷಗಳಿಂದ ಜಾತ್ರೆಯಲ್ಲಿ ಭಾಗವಹಿಸುತ್ತ ಬಂದಿದ್ದೇನೆ. ದೇವಿ ಕೃಪೆಯಿಂದ ಶಿಗ್ಗಾಂವಿ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ದಿಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡುವ ಹಂಬಲವಿದೆ. ಅದಕ್ಕೆ ದೇವಿಯ ಆಶೀರ್ವಾದ ಕೇಳುತ್ತೇನೆ ಎಂದರು. ಶಿಗ್ಗಾಂವಿ ದ್ಯಾಮವ್ವ ಶಾಂತ ಸ್ವರೂಪದ ಪ್ರಸನ್ನ ದೇವಿಯಾಗಿದ್ದು, ನಿತ್ಯದ ಪೂಜೆಯಲ್ಲಿ ಅವಳನ್ನು ಆರಾಧಿಸುತ್ತೇನೆ. ಅವಳು ನೆಲೆಸಿರುವ ಫಲವತ್ತಾದ ಭೂಮಿ ಇದಾಗಿದೆ. ರೈತರು ಅತ್ಯಂತ ಶ್ರಮಜೀವಿಗಳಾಗಿದ್ದಾರೆ, ಕಷ್ಟಪಟ್ಟು ದುಡಿದು ಹೊನ್ನು ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದರು. ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ 94 ಕೋಟಿ ರೂ. ಬೆಳೆ ವಿಮೆ ಬಂದಿದೆ. ಇದು ಈವರೆಗೆ ಬಂದ ಅತ್ಯಧಿಕ ವಿಮಾ ಮೊತ್ತವಾಗಿದೆ. ರೈತರಿಗೆ ನಮ್ಮ ಸರ್ಕಾರ ಬೆನ್ನೆಲುಬಾಗಿ ನಿಂತು ರೈತ ಶಕ್ತಿ ಯೋಜನೆ, ರೈತ ವಿಮಾ ಯೋಜನೆಯಂಥ ಹಲವಾರು ಯೋಜನೆ ನೀಡಿದೆ ಎಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಕುನ್ನೂರ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜನ, ಸಿದ್ದಾರ್ಥಗೌಡ್ರು ಪಾಟೀಲ, ಜಯಣ್ಣ ಹೆಸರೂರ, ಶಿವಾನಂದ ಮ್ಯಾಗೇರಿ, ದತ್ತಣ್ಣ ವೆರ್ನೆಕರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts