More

    ಭಕ್ತರಿಗೆ ದೇವರ ದರುಶನ ಭಾಗ್ಯ

    ಗದಗ: ಗದಗ- ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯಲ್ಲಿ ಸೋಮವಾರದಿಂದ ದೇವಸ್ಥಾನಗಳ ಬಾಗಿಲು ತೆರೆಯಲಿದ್ದು, ಭಕ್ತರಿಗೆ ದೇವರ ದರುಶನ ಭಾಗ್ಯ ದೊರೆಯಲಿದೆ.

    ಸೋಮವಾರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಾನುವಾರ ಸ್ವಚ್ಛತೆ ಕಾರ್ಯ ಭರದಿಂದ ನಡೆಯಿತು ದೇವಸ್ಥಾನಗಳ ಕಮಿಟಿ ಸದಸ್ಯರು ಹಾಗೂ ಭಕ್ತರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ನಗರದ ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ, ಗಣೇಶ ದೇವಸ್ಥಾನ, ರಾಘವೇಂದ್ರ ರಾಯರ ದೇವಸ್ಥಾನ, ಬನಶಂಕರಿ ದೇವಸ್ಥಾನದಲ್ಲಿ ಸ್ವಚ್ಛತೆ ಕಾರ್ಯ ನಡೆಯಿತು. ಜೋಡ ಹನುಮಂತ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಅಭಿಷೇಕ ಹಾಗೂ ಬೆಳ್ಳಿ ಕವಚದ ಅಲಂಕಾರ ಸೇವೆಯ ವಿಶೇಷ ಪೂಜೆ ಆಯೋಜಿಸಲಾಗಿದೆ.

    ‘ದೇವಸ್ಥಾನದ ಸ್ವಚ್ಛತೆ ಕಾರ್ಯ ನಡೆದಿದೆ. ದೇವಸ್ಥಾನದಲ್ಲಿ ಸ್ಯಾನಿಟೈಸರ್ ಬಳಕೆ ಮಾಡಲಾಗುವುದು. ದೈಹಿಕ ಅಂತರ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗುವುದು. ಭಕ್ತರಿಗೆ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಲು ಅವಕಾಶವಿಲ್ಲ. ತೀರ್ಥ ಪ್ರಸಾದ ನೀಡುವುದಿಲ್ಲ. ಸೋಮವಾರ ಮೂರನೇ ಸಂಕಷ್ಟಿ ಚತುರ್ಥಿ ಇರುವುದರಿಂದ ಹೆಚ್ಚು ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಬರುವ ನಿರೀಕ್ಷೆ ಇದೆ. ಭಕ್ತರು ಕರೊನಾ ವೈರಸ್ ಹಿಮ್ಮೆಟ್ಟಿಸಲು ಸಹಕರಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸಹಕಾರ ನೀಡಬೇಕು’ ಎಂದು ಅರ್ಚಕರಾದ ವೆಂಕಟರಮಣ ಭಟ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    60 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನವರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ. ದೇಗುಲ ಪ್ರವೇಶಕ್ಕೂ ಮುನ್ನ ಕೈ ಕಾಲು ತೊಳೆದುಕೊಳ್ಳಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಸಾಮೂಹಿಕ ಭಜನೆ ನಿಷೇಧಿಸಲಾಗಿದೆ. ಪ್ರಸಾದ ತೀರ್ಥ ನೀಡಲು ಅವಕಾಶ ಇಲ್ಲ ಎಂದು ಸರ್ಕಾರದ ಮಾಗಸೂಚಿಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts