More

    ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ದಂಧೆಕೋರರ ಬಂಧನ

    ಹುಬ್ಬಳ್ಳಿ: ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಇಂಜೆಕ್ಷನ್​ಅನ್ನು ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಔಷಧ ವ್ಯಾಪಾರಿ ಹಾಗೂ ಖಾಸಗಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಯನ್ನು ಹುಬ್ಬಳ್ಳಿ- ಧಾರವಾಡ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿತರಿಂದ 30,340 ರೂ. ಮೌಲ್ಯದ 5 ವೈಯಲ್ಸ್ ಆಂಪೋಟೆರಿಸನ್ ಬಿ ಇಂಜೆಕ್ಷನ್ ವಶಪಡಿಸಿಕೊಂಡಿದ್ದಾರೆ.
    ಔಷಧ ವ್ಯಾಪಾರಿ ಕೇಶ್ವಾಪುರದ ನಾಸೀರ್ ಹುಸೇನ್ ಅತ್ತಾರ, ವಿದ್ಯಾನಗರದ ಖಾಸಗಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್​ಒ) ರಾಘವೇಂದ್ರ ಉಣಕಲ್ ಹಾಗೂ ಆಸ್ಪತ್ರೆ ವಾರ್ಡ್ ಬಾಯ್ ನಾಗರಾಜ ನಡವಲಕೇರಿ ಬಂಧಿತರು. ನಾಸೀರ್ ಹುಸೇನ ಅತ್ತಾರ ಇಲ್ಲಿಯ ಅಂಜುಮನ್ ಆಸ್ಪತ್ರೆ ಬಳಿ ಔಷಧ ಅಂಗಡಿ ಹೊಂದಿದ್ದಾರೆ. ವಿದ್ಯಾನಗರದ ಖಾಸಗಿ ಆಸ್ಪತ್ರೆಯ ಪಿಆರ್​ಒ ರಾಘವೇಂದ್ರ ಹಾಗೂ ವಾರ್ಡ್ ಬಾಯ್ ನಾಗರಾಜ ಅಕ್ರಮವಾಗಿ ಇಂಜೆಕ್ಷನ್ ಸಂಗ್ರಹಿಸುತ್ತಿದ್ದರು. ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಅಗತ್ಯ ಇರುವ ರೋಗಿಗಳನ್ನು ಹುಡುಕಿ ನಾಸೀರ್ ಮೂಲಕ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು.
    ಕಿಮ್್ಸ ಆಸ್ಪತ್ರೆ ಹಿಂದಿನ ಗೇಟ್ ಬಳಿ ನಾಸೀರ್ ಇಂಜೆಕ್ಷನ್ ತಂದು ರಾಘವೇಂದ್ರ ಹಾಗೂ ನಾಗರಾಜ ಅವರ ಮೂಲಕ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಇನ್​ಸ್ಪೆಕ್ಟರ್​ಗಳಾದ ಭರತ ರೆಡ್ಡಿ, ಅಲ್ತಾಫ ಮುಲ್ಲಾ, ಸಿಬ್ಬಂದಿಯಾದ ಅನಿಲ ಹುಗ್ಗಿ, ವಿಜಯ ಮರೆಮ್ಮನವರ, ಸಂತೋಷ ಇಚ್ಚಂಗಿ, ಅತ್ತಾರ, ರಾಜು ಬಿಷ್ಟೆಂದರ ತಂಡದಲ್ಲಿದ್ದರು.
    50 ಸಾವಿರಕ್ಕೆ ಮಾರಾಟ?: ಬಂಧಿತರಿಂದ ವಶಕ್ಕೆ ಪಡೆದ 5 ಇಂಜೆಕ್ಷನ್​ಗಳಲ್ಲಿ ಒಂದರ ಸರ್ಕಾರಿ ಬೆಲೆ 340 ರೂ. ಇದೆ. ಉಳಿದ ನಾಲ್ಕು ಆಂಪೋಟೆರಿಸನ್ ಬಿ ಇಂಜೆಕ್ಷನ್​ಗಳ ಬೆಲೆ ತಲಾ 7,500 ರೂ. ಇದೆ. 340 ರೂ.ಗಳ ಇಂಜೆಕ್ಷನ್​ಅನ್ನು 12 ಸಾವಿರ ರೂ.ಗೆ ಹಾಗೂ 7,500 ರೂ. ಬೆಲೆಯ ಇಂಜೆಕ್ಷನ್​ಅನ್ನು 15ರಿಂದ 50 ಸಾವಿರ ರೂ.ವರೆಗೆ ಮಾರಾಟ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
    ಸತ್ತವರ ಹೆಸರಲ್ಲಿ ಖರೀದಿ: ವಿದ್ಯಾನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಅವರ ಹೆಸರಲ್ಲಿ ಆಸ್ಪತ್ರೆಯವರು ಸರ್ಕಾರದಿಂದ ಇಂಜೆಕ್ಷನ್ ಖರೀದಿಸಿದ್ದರು. ಅದನ್ನು ರಾಘವೇಂದ್ರ ಹಾಗೂ ನಾಗರಾಜ, ಔಷಧ ವ್ಯಾಪಾರಿ ನಾಸೀರ್​ಗೆ ನೀಡಿದ್ದರು. ರಾಘವೇಂದ್ರ ಹಾಗೂ ನಾಗರಾಜ ಸೇರಿ, ಬ್ಲ್ಯಾಕ್ ಫಂಗಸ್ ರೋಗಿಗಳ ಸಂಬಂಧಿಕರಿಗೆ ಇಂಜೆಕ್ಷನ್ ಅನ್ನು ಅದೇ ನಾಸೀರ್​ನಿಂದ ಹೆಚ್ಚಿನ ದರಕ್ಕೆ ಕೊಡಿಸುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts