More

    ಬ್ಯಾಂಕ್ ಗ್ರಾಹಕ ಮಿತ್ರ ರೋಬಾಟ್

    ಹುಬ್ಬಳ್ಳಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕ ಮಿತ್ರನಾಗಿ ಕಾರ್ಯ ನಿರ್ವಹಿಸುವ ಹ್ಯೂಮನೈಡ್(ಮನುಷ್ಯ ಸಂಭಾಷಣೆ ಅನುಕರಿಸಬಲ್ಲ) ರೋಬಾಟ್ ಅನ್ನು ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ ವಿಶ್ವ ವಿದ್ಯಾಲಯದ ಅಟೋಮೇಷನ್ ಅಂಡ್ ರೋಬೋಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

    ಅಗ್ರಣೀಯ ಬ್ಯಾಂಕ್​ವೊಂದರ ಪ್ರಾಯೋಜಕತ್ವ ಹಾಗೂ ಬೇಡಿಕೆಯ ಮೇರೆಗೆ ರೋಬೋಟ್ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಪ್ರೊ. ಅರುಣ ಗಿರಿಯಾಪುರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಡಂಬಡಿಕೆಯ ಪ್ರಕಾರ ಬ್ಯಾಂಕ್ ಹೆಸರು ಬಹಿರಂಗಪಡಿಸುತ್ತಿಲ್ಲ ಎಂದರು.

    ‘ಮಾಯಾ’ ಎಂಬ ಪ್ರಾಜೆಕ್ಟ್​ನಡಿ 8 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಬ್ಯಾಂಕಿಗೆ ಆಗಮಿಸುವ ಗ್ರಾಹಕನೊಂದಿಗೆ ಭಾರತದ ಯಾವುದೇ ಭಾಷೆಯಲ್ಲಿ ಸಂಭಾಷಣೆ ನಡೆಸಬಲ್ಲದು. ಬ್ಯಾಂಕಿನ ಸಾಲ ಸೌಲಭ್ಯ, ಬಡ್ಡಿದರ, ಇತ್ಯಾದಿ ಮಾಹಿತಿಗಳನ್ನು ನೀಡಬಲ್ಲದು. ಖಾತೆ ತೆರೆಯುವಿಕೆ, ವಹಿವಾಟು, ಇತ್ಯಾದಿ ಕೌಂಟರ್​ಗಳಿಗೆ ತೆರಳಲು ಗ್ರಾಹಕರಿಗೆ ಮಾರ್ಗದರ್ಶನ ಮಾಡುತ್ತದೆ. ಗಣ್ಯ ಮತ್ತು ಅತಿ ಗಣ್ಯ ಗ್ರಾಹಕರನ್ನು ಗುರುತಿಸಬಲ್ಲದು. ಚಹರೆಯಿಂದಲೇ ಗ್ರಾಹಕರನ್ನು ಗುರುತಿಸುವಿಕೆ, ಚಾಟ್ ಬೂಟ್ ವ್ಯವಸ್ಥೆಯನ್ನು ಹೊಂದಿದೆ ಎಂದು ವಿವರಿಸಿದರು.

    ಇದು ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 8-10 ತಾಸು ಬಳಕೆಯಲ್ಲಿ ಇರುತ್ತದೆ. ಚಾರ್ಜಿಂಗ್ ಕಡಿಮೆಯಾದರೆ ಸ್ವಯಂಚಾಲಿತವಾಗಿ ಡಾಕಿಂಗ್ ಪಾಯಿಂಟ್​ಗೆ ತೆರಳಿ ಚಾರ್ಜ್ ಮಾಡಿಕೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಇದು ವಿಶಿಷ್ಟ ಅನುಭವ. ಸಂಶೋಧನೆ ಸಹಾಯಕರಾದ ಅಭಿಜಿತ್ ಸಂಪತ್​ಕೃಷ್ಣ, ಕಾರ್ತಿಕ ಲಕಮನಹಳ್ಳಿ, ವಿದ್ಯಾರ್ಥಿಗಳಾದ ಪೃಥ್ವಿ ದೇಶಪಾಂಡೆ ಹಾಗೂ ಆಲ್ವಿನ್ ಎಂ. ಈ ಪ್ರಾಜೆಕ್ಟ್​ನಲ್ಲಿ ಭಾಗಿಯಾಗಿದ್ದಾರೆ. ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಜಿ.ಕೆ. ಹಾಗೂ ಶ್ರೀಧರ ದೊಡಮನಿ ನೆರವಾಗಿದ್ದಾರೆ ಎಂದು ಹೇಳಿದರು.

    ಬ್ಯಾಂಕಿನ 5 ಲಕ್ಷ ರೂ. ಪ್ರಾಯೋಜಕತ್ವದಲ್ಲಿ ರೋಬಾಟ್ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಬ್ಯಾಂಕ್​ನವರು ಈ ಪ್ರಾಜೆಕ್ಟ್​ಗಾಗಿ ಮೊದಲಿಗೆ ಮುಂಬೈ ಐಐಟಿಯನ್ನು ಸಂರ್ಪಸಿದ್ದರು. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕ (ಈ ಹಿಂದೆ ನಮ್ಮಲ್ಲಿ ಪ್ರಾಧ್ಯಾಪಕರಾಗಿದ್ದರು)ರೊಬ್ಬರ ಶಿಫಾರಸಿನ ಮೇರೆಗೆ ಈ ಪ್ರಾಜೆಕ್ಟ್ ನಮಗೆ ಲಭ್ಯವಾಗಿತ್ತು. ಅದನ್ನು ನಾವು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಸದ್ಯದಲ್ಲೇ ಬ್ಯಾಂಕಿಗೆ ರೋಬಾಟ್ ಹಸ್ತಾಂತರಿಸಲಿದ್ದೇವೆ ಎಂದು ತಿಳಿಸಿದರು.

    ಈ ಹಿಂದೆ ವಿಆರ್​ಎಲ್ ಸಮೂಹ ಸಂಸ್ಥೆಗೆ 4 ಪೇಂಟಿಂಗ್ ರೋಬಾಟ್ ಹಾಗೂ 1 ವೆಲ್ಡಿಂಗ್ ರೋಬಾಟ್ ಅಭಿವೃದ್ಧಿ ಪಡಿಸಿಕೊಟ್ಟಿದ್ದೆವು ಎಂದು ಅರುಣ ಗಿರಿಯಾಪುರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts