More

    ಬೌದ್ಧ ಒಂದು ಧರ್ಮ ಅಲ್ಲ ಅದೊಂದು ತತ್ವ

    ಚಿಕ್ಕಮಗಳೂರು: ಬೌದ್ಧ ಒಂದು ಧರ್ಮ ಅಲ್ಲ ತತ್ವ. ಯಾವುದೇ ಧರ್ಮ ಅನುಸರಿಸುವ-ರಾಜಕೀಯ ಸಿದ್ಧಾಂತ ಹೊಂದಿರುವ ವ್ಯಕ್ತಿಯೂ ಬುದ್ಧನನ್ನು ಸ್ವೀಕರಿಸಬಹುದು ಎಂದು ಸಾಹಿತಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದರು.

    ನಗರದಲ್ಲಿ ಸುಗಮ ಸಂಗೀತಗಂಗಾ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಬುದ್ಧಚರಣ ಅವಲೋಕನ ಗಮಕವಾಚನ- ಗೀತಗಾಯನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹತ್ತು ವರ್ಷಗಳ ಕಾಲ ಸಿದ್ಧತೆ ಮಾಡಿಕೊಂಡು, ಬುದ್ಧನ ಕ್ಷೇತ್ರಗಳಲ್ಲೆಲ್ಲ ಓಡಾಡಿ, ಬುದ್ಧನ ಕುರಿತಂತೆ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಬಂದಿರುವ ಸಾಹಿತ್ಯವನ್ನು ಅಧ್ಯಯನಮಾಡಿದ ಫಲವಾಗಿ ಎರಡು ವರ್ಷಗಳಲ್ಲಿ ಬುದ್ಧಚರಣ ಮಹಾಕಾವ್ಯ ಪೂರ್ಣಗೊಂಡಿದೆ. ಬುದ್ಧನ ಬಗ್ಗೆ ಬರೆದಿದ್ದರೂ ಯಶೋಧೆಯ ಅಂತಃಸತ್ವ ಕುಗ್ಗಿಸಿಲ್ಲ. ಯುದ್ಧ ವಿಮುಕ್ತಿಯಾದ ಬುದ್ಧ ಎಲ್ಲವೂ ನಶ್ವರವೆಂದು ಸಾರಿದ. ಈ ಕ್ಷಣ ಚೆನ್ನಾಗಿ ಬದುಕು. ಬೇರೆಯವರಿಗಾಗಿ ಬದುಕಿ ಎಂಬ ಸಂದೇಶ ನೀಡಿದ ಬುದ್ಧನನ್ನು ಅನಾತ್ಮವಾದಿ ಎಂದು ಪರಿಗಣಿಸಲಾಗಿದೆ ಎಂದರು.

    ಆತ್ಮ ಎನ್ನುವುದು ಇಲ್ಲ. ಅದೊಂದು ಕಲ್ಪನೆ ಎಂದು ಮೊಟ್ಟಮೊದಲು ಹೇಳಿದ ಮಹಾನ್​ವ್ಯಕ್ತಿ ಬುದ್ಧ. ಚರಾಚರ ವಸ್ತುಗಳೆಲ್ಲ ನಶ್ವರ. ಚಾರಿತ್ರ್ಯ ಪುನರಾವರ್ತನೆ ಆಗುತ್ತದೆಯೇ ಹೊರತು ಆತ್ಮ ಎನ್ನುವುದು ಇಲ್ಲ ಎಂದು ಸಾರಿದವನು. ಸಾಯುವವರೆಗೂ ಬದುಕಿ, ಬದುಕು ಅನ್ನೋದು ಸರಣಿ, ಸ್ನೇಹ ಮತ್ತು ಕರುಣೆ ಬುದ್ಧನ ಪ್ರಮುಖ ಅಂಶಗಳು ಎಂದರು.

    ಸಾಹಿತಿ ಡಾ. ಎಚ್.ಎಸ್.ಸತ್ಯನಾರಾಯಣ ಅವರು ಮಹಾಕಾವ್ಯ ಕುರಿತಂತೆ ಉಪನ್ಯಾಸ ನೀಡಿ, ರಾಮಾಯಣ ದರ್ಶನಂ ನಂತರ ಕೆಲವೇ ಮಹಾ ಕಾವ್ಯಗಳು ಚರ್ಚೆಗೆ ಬಂದರೂ ಮಹಾಕಾವ್ಯ ಪರಂಪರೆ ಕನ್ನಡದಲ್ಲಿ ಮುಂದುವರಿದಿದೆ. ಕನ್ನಡ ಕಾವ್ಯ ಪರಂಪರೆಯ ಸಮರ್ಥ ಪ್ರತಿನಿಧಿ ಎಚ್ಚೆಸ್ವಿ ಕೃತಿ ವಿದ್ವತ್ ಜನರಿಂದ ಮೆಚ್ಚುಗೆಯ ಮಹಾಪೂರವನ್ನೇ ಪಡೆದಿದೆ. ಶ್ರೀಸಾಮಾನ್ಯರೂ ಓದಬಹುದಾದ ಮಹಾಕಾವ್ಯವಿದು. ಅವರೇ ಹೇಳಿರುವಂತೆ ಇದು ಬುದ್ಧನ ಚರಿತ್ರೆ ಅಲ್ಲ ಚರಣ. ಅವನು ನಡೆದುಬಂದ ದಾರಿ ವಿವರಿಸಲಾಗಿದೆ. ಸಿದ್ಧಾರ್ಥ ಬುದ್ಧನಾಗಿ ಮಾರ್ಗಪ್ರವರ್ತಕನಾಗುವ ಪ್ರಕ್ರಿಯೆ ಕಟ್ಟಿಕೊಟ್ಟಿದ್ದಾರೆ ಎಂದು ವಿಶ್ಲೇಷಿಸಿದರು.

    ಸಾಹಿತಿ ಎಂ.ಆರ್.ದತ್ತಾತ್ರಿ ಬುದ್ಧಚರಣದ ವಿವಿಧ ಕಾಂಡಗಳನ್ನು ಪರಿಚಯಿಸಿ, ಬುದ್ಧನ ಮಾನವತ್ವದ ಔನತ್ಯ ಕಥನವಿದು. ಬುದ್ಧ ಎಂದರೆ ಪಾಶ್ಚಾತ್ಯರಿಗೆ ಧರ್ಮಸಂಸ್ಥಾಪಕ ಅಷ್ಟೇ. ಸನಾತನ ನಂಬಿಕೆಗಳಲ್ಲಿ ಕರ್ಮಕಾಂಡವನ್ನು ಬುದ್ಧ ತಿರಸ್ಕರಿಸಿದನೇ ಹೊರತು ಜ್ಞಾನಕಾಂಡವನ್ನಲ್ಲ ಎಂಬುದು ಮಹತ್ವದ ಸಂಗತಿ ಎಂದರು.

    ರಾಮ ಮತ್ತು ಕೃಷ್ಣರಷ್ಟೇ ಬುದ್ಧನನ್ನು ಎಚ್ಚೆಸ್ವಿ ಪ್ರೀತಿಸಿದವರು. 500ಕ್ಕೂ ಹೆಚ್ಚು ಅವರ ಹಾಡುಗಳಲ್ಲಿ ಇದು ಗೊತ್ತಾಗುತ್ತದೆ. ಶ್ರದ್ಧೆಯಿಂದ ತಿಳಿಗನ್ನಡದಲ್ಲಿ ಬುದ್ಧನ ಬೋಧನೆಯ ಸಾರವನ್ನು ಕನ್ನಡಕ್ಕೆ ತಂದಿದ್ದಾರೆ ಎಂದು ಹೇಳಿದರು.

    ಸುಗಮ ಸಂಗೀತಗಂಗಾ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕನ್ನಡದ ಮೂವರು ಶ್ರೇಷ್ಠ ಕವಿಗಳ ಸಮಾಗಮ ಅವಿಸ್ಮರಣೀಯ ಎಂದರು. ಲಾಲಿತ್ಯ ಗೀತಗಾಯನ, ಶಶಿಕಲಾ ಅವರ ಗಮಕವಾಚನ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts