More

    ಬೊಕ್ಕಸಕ್ಕೆ ಕೋಟ್ಯಂತರ ರೂ.ಖೋತಾ!

    ಬೆಳಗಾವಿ: ಬೇಸಾಯಕ್ಕೆ ಪೂರಕವಾದ ಚಟುವಟಿಕೆಗಳು ನಡೆಯಬೇಕಿದ್ದ ನಗರದ ಕೃಷಿ ಭವನವು ವಾಣಿಜ್ಯ ಚಟುವಟಿಕೆಗಳ ತಾಣವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚನೆಯಾಗುತ್ತಿರುವುದು ಬಹಿರಂಗವಾಗಿದೆ.

    ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿನ ಅರಣ್ಯ ಇಲಾಖೆ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಲೋಕೋಪಯೋಗಿ ಇಲಾಖೆಯ 34.24 ಗುಂಟೆ ಜಾಗದಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ಉದ್ದೇಶಿತ ಕೃಷಿ ಚಟುವಟಿಕೆಗಳು ನಡೆಯದೆ ಕಟ್ಟಡವು ಖಾಸಗಿ ವ್ಯಕ್ತಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಕೃಷಿ ಉತ್ಪನ್ನಗಳ ಶೇಖರಣೆಗಾಗಿ ಶಿತಲೀಕರಣ ಘಟಕ, ಮಣ್ಣು ಪರೀಕ್ಷಣಾ ಕೇಂದ್ರ, ಶುದ್ಧ ಬೀಜ-ಗೊಬ್ಬರ ಕೇಂದ್ರ, ರೈತ ವಿಶ್ರಾಂತಿ ಗೃಹ, ರೈತ ಸಮುದಾಯ ತರಬೇತಿ ಕೇಂದ್ರದ ಚಟುವಟಿಕೆಗಳಿಗಾಗಿ ಕೃಷಿ ಭವನದ ಕಟ್ಟಡವನ್ನು 1966ರಲ್ಲಿ ಲೋಕೋಪಯೋಗಿ ಇಲಾಖೆಯು 99 ವರ್ಷಗಳಿಗೆ ಲೀಸ್ ನೀಡಿತ್ತು. ಆದರೆ, ಉದ್ದೇಶಿತ ಚಟುವಟಿಕೆಗಳು ಅಲ್ಲಿ ನಡೆಯದಿರುವ ಕಾರಣಕ್ಕೆ ಲೀಸ್ ರದ್ದು ಮಾಡಿ ಇಲಾಖೆಯು ಆದೇಶಿಸಿದರೂ ಲೀಸ್‌ದಾರರು ಕಟ್ಟಡ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಪೂರಕವಾಗಬೇಕಿದ್ದ ಹಾಗೂ ಕೋಟ್ಯಂತರ ರೂ. ಬಾಡಿಗೆ ಬರಬೇಕಿದ್ದ ಕೃಷಿ ಭವನದ ಕಟ್ಟಡ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದ್ದು, ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

    ಷರತ್ತುಗಳನ್ನು ಗಾಳಿಗೆ ತೂರಿದ ಲೀಸ್‌ದಾರರು: ರೈತ ಸಮುದಾಯಕ್ಕೆ ಬಹುಪಯೋಗವಾಗಲಿ ಎಂಬ ಷರತ್ತಿನ ಮೇರೆಗೆ ಕೃಷಿ ಚಟುವಟಿಕೆಗಳ 6 ಅಂಶಗಳ ಆಧಾರದ ಮೇಲೆ ಡಿ. ದೇವರಾಜ ಅರಸು ಸರ್ಕಾರದ ಅವಧಿಯಲ್ಲಿ ಕೃಷಿ ಭವನ ಕಟ್ಟಡವನ್ನು ಲೀಸ್ ನೀಡಲಾಗಿತ್ತು. ಆದರೆ, ಲೀಸ್‌ದಾರರು ಷರತ್ತುಗಳನ್ನು ಉಲ್ಲಂಘಿಸಿ ಇತರೆ ಅಂಗಡಿಕಾರರಿಗೆ ಉಪ ಲೀಸ್ ನೀಡಿ ಲೋಕೋಪಯೋಗಿ ಇಲಾಖೆಯ ಆದೇಶ ಉಲ್ಲಂಘಿಸಿದ್ದರಿಂದ ಲೀಸ್ ಅವಧಿಯನ್ನು ಇಲಾಖೆ ರದ್ದುಪಡಿಸಿ, ಕಟ್ಟಡ ತೆರವುಗೊಳಿಸುವಂತೆ ಮೂರು ಬಾರಿ ಆದೇಶಿಸಿ ನೋಟಿಸ್ ನೀಡಿದರೂ ಲೀಸ್‌ದಾರರು ಕಟ್ಟಡ ತೆರವುಗೊಳಿಸುತ್ತಿಲ್ಲ. ಇದರಿಂದಾಗಿ ನಗರದ ಮಧ್ಯ ಭಾಗದಲ್ಲಿರುವ ಮಹತ್ವದ ಕೃಷಿ ಭವನ ಕಟ್ಟಡವು ಇತ್ತ ರೈತರಿಗೂ ಅನುಕೂಲ ಆಗುತ್ತಿಲ್ಲ. ಸರ್ಕಾರದ ಬೊಕ್ಕಸಕ್ಕೂ ಆದಾಯ ತರುತ್ತಿಲ್ಲ.

    ಇಲಾಖೆ ಕ್ರಮಕ್ಕೆ ಅಸಮಾಧಾನ: ಕೃಷಿ ಭವನ ಕಟ್ಟಡದಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಿ, ಕಟ್ಟಡ ತೆರುವು ಮಾಡಿಸುವುದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳದ ಲೋಕೋಪಯೋಗಿ ಇಲಾಖೆಯ ಕ್ರಮಕ್ಕೆ ರೈತ ಮುಖಂಡರು ಗರಂ ಆಗಿದ್ದಾರೆ. ತೆರವುಗೊಳಿಸುವಂತೆ ಇಲಾಖೆಯು ಆದೇಶ ಮಾಡಿ 10 ತಿಂಗಳು ಕಳೆದರೂ ಪ್ರಯೋಜನವಾಗಿಲ್ಲ. ಇತ್ತ ಷರತ್ತುಗಳನ್ನು ಉಲ್ಲಂಘಿಸಿ ಕೃಷಿ ಭವನದ ಕಟ್ಟಡವನ್ನು ವಾಣಿಜ್ಯ ಚಟುವಟಿಕೆಗಳಿಗೆ ಉಪ ಗುತ್ತಿಗೆ ನೀಡಿರುವುದರ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶಗೊಂಡಿದ್ದು, ಚಳಿಗಾಲ ಅಧಿವೇಶನದಲ್ಲಿ ಹೋರಾಟಕ್ಕೆ ಅಣಿಯಾಗಿದ್ದಾರೆ.

    ಕೃಷಿ ಭವನ ಕಟ್ಟಡದ ಲೀಸ್ ಷರತ್ತುಗಳನ್ನು ಉಲ್ಲಂಘಿಸಿದ ಕಾರಣ ಲೀಸ್‌ದಾರರ ಲೀಸ್ ರದ್ದುಪಡಿಸಿ ಆದೇಶಿಸಲಾಗಿದೆ. ಲೀಸ್‌ದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವುಗೊಳಿಸುವುದಕ್ಕೆ ಕಾನೂನು ಹೋರಾಟ ಮುಂದುವರಿಸಿದ್ದೇವೆ.
    | ಸುಭಾಸ ನಾಯಕ ಎಇಇ ಲೋಕೋಪಯೋಗಿ ಇಲಾಖೆ ಬೆಳಗಾವಿ

    ಕೃಷಿ ಭವನ ಕಟ್ಟಡದ ಲೀಸ್ ನೀಡಿರುವುದು ಹಾಗೂ ಲೀಸ್ ರದ್ದುಪಡಿಸಿ ಆದೇಶಿಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಇದೆ. ಅಧಿಕಾರಿಗಳೊಂದಿಗೆ ನಾನೂ ಚರ್ಚಿಸುವೆ.
    | ನಿತೇಶ ಪಾಟೀಲ ಜಿಲ್ಲಾಧಿಕಾರಿ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts