More

    ಬೇಸಿಗೆ ಉಲ್ಬಣ, ನೀರಿದ್ದರೂ ಬವಣೆ ತಪ್ಪಿಲ್ಲ

    ಕೋಲಾರ: ಬೇಸಿಗೆ ಹೆಚ್ಚಾಗುತ್ತಿರುವುದರಿಂದ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುವುದು ನಗರಸಭೆಯ ಜವಾವ್ದಾರಿಯಾಗಿದೆ.

    ಕೆಸಿ ವ್ಯಾಲಿ ನೀರು ಹಾಗೂ ಮಳೆಯಿಂದ ಅಂತರ್ಜಲ ವೃದ್ಧಿಸಿ ಬತ್ತಿರುವ ಕೊಳವೆಬಾವಿಗಳಲ್ಲಿ ಜಲಧಾರೆ ಹೆಚ್ಚಾಗಿರುವುದಲ್ಲದೆ, ಹೊಸ ಕೊಳವೆಬಾವಿಗಳಲ್ಲೂ ಯಥೇಚ್ಚವಾಗಿ ನೀರು ಸಿಕ್ಕಿರುವುದರಿಂದ ಜನರ ಬೇಡಿಕೆಗೆ ಅನುಸಾರವಾಗಿ ನೀರು ಕೊಡಲು ನಗರಸಭೆ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಲ್ಲಿ ಜನರನ್ನು ಬೇಸಿಗೆಯಿಂದ ಪಾರು ಮಾಡಿದಂತಾಗುತ್ತದೆ.

    ಬೇಡಿಕೆಗೆ ತಕ್ಕಷ್ಟು ನೀರಿಲ್ಲ: ಕೋಲಾರ ನಗರದ 35 ವಾರ್ಡ್​ಗಳ ಒಟ್ಟು ಜನಸಂಖ್ಯೆ ಪ್ರಸ್ತುತ 1.75ರಿಂದ 2 ಲಕ್ಷ ದಾಟಿದೆ. ಜತೆಗೆ ಸಾವಿರಾರು ಜಾನುವಾರುಗಳಿಗೆ ನೀರು ಒದಗಿಸಬೇಕಾಗಿದೆ, ಸರ್ಕಾರದ ಮಾನದಂಡದ ಪ್ರಕಾರ ಪ್ರತಿ ಮನುಷ್ಯನಿಗೆ ಕನಿಷ್ಠ ದಿನಕ್ಕೆ 55 ಲೀಟರ್​ ಕೊಡಬೇಕಾಗಿದೆಯಾದರೂ ನಿರ್ವಹಣೆ ಕೊರತೆ ಹಾಗೂ ತಾಂತ್ರಿಕ ಕಾರಣದಿಂದ ನಿಯಮಾನುಸಾರ ನೀರು ಒದಗಿಸಲು ಆಗುತ್ತಿಲ್ಲ.
    ನಗರದಲ್ಲಿ ಕಳೆದ 10 ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಹೋಟೆಲ್​, ಗ್ಯಾರೇಜ್​, ವಿವಿಧ ಉತ್ಪನ್ನ ತಯಾರಿಸುವ ಕೈಗಾರಿಕೆಗಳು ಹೆಚ್ಚಾಗಿರುವುದರಿಂದ ನೀರು ಒದಗಿಸುವುದು ಸವಾಲಾಗಿದೆ. ನಗರಸಭೆಯಿಂದ ಸರಬರಾಜು ಮಾಡುವ ನೀರು ಆನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎಂಬಂತಾಗಿದೆ, ನಗರಸಭೆಗೆ ಸೇರಿದ ಉದ್ಯಾನನವಕ್ಕೆ ನೀರು ಒದಗಿಸಲಾಗದೆ ಗಿಡ&ಮರಗಳು ಒಣಗುತ್ತಿದ್ದು, ಪಂಪ್​ಹೌಸ್​ಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ನೀರು ಕೊಡಲು ಬದ್ಧತೆ ತೋರದಿದ್ದರೆ ಕೃತಕ ಜಲಕ್ಷಾಮಕ್ಕೆ ಜನ ತತ್ತರಿಸುವ ಪರಿಸ್ಥಿತಿ ನಿಮಾರ್ಣವಾಗಬಹುದು.

    ಶೇ.50 ಕೊಳವೆಬಾವಿಗಳು ನಿಷ್ಕ್ರಿಯ: ಕೋಲಾರಮ್ಮ, ಅಮ್ಮೇರಹಳ್ಳಿ, ಕೋಡಿ ಕಣ್ಣೂರು ಹಾಗೂ ಗಾಂಧಿನಗರದ ತೊಟ್ಟಿಬಾವಿ ಪಂಪ್​ಹೌಸ್​ ನಗರಸಭೆ ಸುಪರ್ದಿಗೆ ಸೇರಿದ್ದು ಒಟ್ಟು 66ಕ್ಕೂ ಹೆಚ್ಚು ಕೊಳವೆಬಾವಿಗಳಿದ್ದರೂ ನಿರ್ವಹಣೆ ಇಲ್ಲದೆ ಶೇ.50ರಷ್ಟು ಕೊಳವೆ ಬಾವಿಗಳು ನಿಷ್ಕ್ರಿಯಗೊಂಡಿವೆ, ಹೊಸದಾಗಿ ಕೊರೆಸಿರುವ ಕೊಳವೆಬಾವಿಗಳಿಗಳಿಗೆ ಪಂಪ್​ ಮೋಟಾರ್​, ವಿದ್ಯುತ್​ ಸಂಪರ್ಕ ಕಲ್ಪಿಸಲು ಮೀನಮೇಷ ಎಣಿಸಲಾಗುತ್ತಿದೆ, ಇನ್ನಾದರು ಸಮರೋಪಾಧಿಯಲ್ಲಿ ಕಾರ್ಯ ನಿರ್ವಹಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ.

    ಒಂದು ಕೋಟಿ ರೂ. ಅನುದಾನ: ನಗರಸಭೆಗೆ ಎಸ್​ಎಫ್​ಸಿ ನಿದಿಯಡಿ 5 ಕೋಟಿ ರೂ. ಬಂದಿದ್ದು ಈ ಪೈಕಿ 1 ಕೋಟಿ ರೂ. ನೀರಿಗಾಗಿ ಮೀಸಲಿಡಲಾಗಿದೆ. ಈ ಹಣವನ್ನು ಪಂಪ್​ ಹೌಸ್​ಗಳ ದುರಸ್ತಿ, ಪೈಪ್​ಲೈನ್​ ಕಾಮಗಾರಿ, ಕೊಳವೆ ಬಾವಿಗಳಿಗೆ ಬೇಕಾದ ಪಂಪ್​ ಮೋಟಾರ್​ ಖರೀದಿಗೆ ಬಳಕೆ ಮಾಡಿದಲ್ಲಿ ನೀರಿನ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗಬಹುದು. ನಗರಸಭೆಯಿಂದ ಪ್ರಸ್ತುತ 9 ಟ್ಯಾಂಕರ್​ ಮೂಲಕ ಪೈಪ್​ಲೈನ್​ ಇಲ್ಲದ ವಾರ್ಡ್​ಗಳಿಗೆ ನೀರು ಒದಗಿಸಲಾಗುತ್ತದೆ, ಒಂದೊಂದು ಸಾರಿ ಟ್ಯಾಂಕರ್​ ಕೆಟ್ಟರೆ ಸಮಸ್ಯೆಯಾಗುವುದರಿಂದ ಅಧಿಕಾರಿಗಳು ನೀರಿನ ಟ್ಯಾಂಕರ್​ ಕೆಡದಂತೆ ಎಚ್ಚರಿಕೆ ವಹಿಸಬೇಕು.

    ಪಂಪ್​ ಹೌಸ್​ಗಳಿಗೆ ವಾಚ್​ಮನ್​ ನೇಮಕ, ಮೋಟರ್​ ಕೆಟ್ಟಲ್ಲಿ ದುರಸ್ತಿಗಾಗಿ ಬೇರೆ ಕಡೆಗೆ ಸಾಗಿಸುವ ಬದಲು ಸ್ಥಳಿಯ ನುರಿತ ಮೆಕಾನಿಕ್​ಗಳಿಂದ ದುರಸ್ತಿ ಮಾಡಿಸಲು ಸಿಬ್ಬಂದಿ ನೇಮಕ, ನಗರಸಭೆ ಟ್ಯಾಂಕರ್​ಗಳಿಗೆ ಜಿಪಿಎಸ್​ ಅಳವಡಿಸಿ ಅಕ್ರಮ ತಪ್ಪಿಸುವುದು, ಪಂಪ್​ಹೌಸ್​ಗಳಲ್ಲಿ ಸಿಸಿ ಟಿವಿ ಅಳವಡಿಕೆ ಮೂಲಕ ನೀರಿನ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬುದು ಜನರ ಒತ್ತಾಸೆಯಾಗಿದೆ.

    ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲಾಗಿದೆ, ಹಾಲಿ 9 ಟ್ಯಾಂಕರ್​ ಮೂಲಕ ಪೈಪ್​ಲೈನ್​ ಇಲ್ಲದ ಪ್ರದೇಶಗಳಿಗೆ ನೀರು ಒದಗಿಸಲಾಗುತ್ತಿದೆ. ಎಸ್​ಎಫ್​ಸಿ ನಿದಿಯಡಿ 1 ಕೋಟಿ ರೂ. ನೀರಿಗಾಗಿ ಮೀಸಲಿಡಲಾಗಿದೆ, ಈ ಬಾರಿಯ ನಗರಸಭೆ ಬಜೆಟ್​ನಲ್ಲಿ ನೀರಿನ ವ್ಯವಸ್ಥೆಗೆ ಹೆಚ್ಚಿನ ಅನುದಾನ ಮೀಸಲಿಡಲು ಚಿಂತನೆ ನಡೆದಿದೆ.-
    ಶ್ವೇತಾ ಶಬರೀಶ್​, ಅಧ್ಯೆ, ನಗರಸಭೆ, ಕೋಲಾರ

    ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು, ಪಂಪ್​ಹೌಸ್​ ನಿರ್ವಹಣೆ ಮಾಡಲು, ರಕ್ಷಣೆ ಒದಗಿಸಲು, ಕೊಳವೆಬಾವಿಗಳ ಸಮೀಕ್ಷೆ ನಡೆಸಿ ನೀರಿದ್ದರೂ ಸ್ಥಗಿತವಾಗಿರುವ ಕೊಳವೆಬಾವಿ ದುರಸ್ತಿಗೊಳಿಸಬೇಕು.-
    ರಾಕೇಶ್​, ವಾರ್ಡ್​ 12ರ ಸದಸ್ಯ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts