More

    ಬೇಸಿಗೆ ಆರಂಭದಲ್ಲೇ ನೀರಿಗಾಗಿ ಪರದಾಟ

    ಕೆ.ಎಸ್.ಪ್ರಣವಕುಮಾರ್
    ಚಿತ್ರದುರ್ಗ: ಬರದಿಂದಲೇ ಸದಾ ತತ್ತರಿಸುವ ನಾಡು ಚಿತ್ರದುರ್ಗ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆ ತಲೆದೋರಿದೆ. ಬೇಸಿಗೆ ಆರಂಭದಲ್ಲೇ ಹಾಹಾಕಾರ ಉಂಟಾಗಿದೆ. ಹೀಗೆ ಮುಂದುವರೆದರೆ, ಮುಂದಿನ ಮೂರು ತಿಂಗಳ ಅವಧಿ ಕಳೆಯುವುದು ಹೇಗೆ ಎಂಬ ಚಿಂತೆ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ.

    ಬಿಸಿಲಿನ ಝಳ ದಿನೇ ದಿನೆ ಹೆಚ್ಚುತ್ತಿದ್ದು, ತಾಪಮಾನ ಏರಿಕೆಯಾದಂತೆಲ್ಲ ನೀರಿನ ಅಗತ್ಯತೆಯೂ ಹೆಚ್ಚಾಗಲಿದೆ. ಸಕಲ ಜೀವರಾಶಿಗಳು ಇದನ್ನೇ ಅವಲಂಬಿಸಿವೆ. ಆದರೆ, ಕುಡಿಯುವ ನೀರು ಪೂರೈಕೆ ಅಸಮರ್ಪಕ ಎಂಬುದನ್ನು ಪ್ರತಿ ಬೇಸಿಗೆಯಲ್ಲೂ ಸ್ಥಳೀಯ ಸಂಸ್ಥೆಗಳು ಸಾಬೀತು ಪಡಿಸಿದ್ದು, ಪ್ರಸಕ್ತ ಬಾರಿಯೂ ಇದಕ್ಕೆ ಹೊರತಾಗಿಲ್ಲ.

    ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಶಾಂತಿಸಾಗರ ಇವೆರಡು ಚಿತ್ರದುರ್ಗ ನಗರ ಹಾಗೂ ತಾಲೂಕಿನ ವಿವಿಧ ಭಾಗಗಳಿಗೆ ನೀರು ಪೂರೈಕೆ ಮಾಡುವ ಜಲಮೂಲಗಳಾಗಿವೆ. ಆದರೂ ಬೇಸಿಗೆ ಕಾಲದಲ್ಲಿ ತೊಂದರೆ ತಪ್ಪಿದ್ದಲ್ಲ ಎಂಬ ಪರಿಸ್ಥಿತಿ ಮುಂದುವರೆದಿದೆ.

    2023ರ ಡಿಸೆಂಬರ್ ತಿಂಗಳಿನಿಂದಲೇ ನಿಧಾನವಾಗಿ ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ 2024ರ ಜನವರಿ, ಫೆಬ್ರವರಿ ವೇಳೆಗೆ ಬಿಗಡಾಯಿಸುತ್ತಿದೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶ, ಜಿಲ್ಲೆಯ ಕುಗ್ರಾಮಗಳು ಒಳಗೊಂಡು ದಿನೇ ದಿನೆ ವಿಸ್ತರಿಸುತ್ತಿದೆ.

    ಐತಿಹಾಸಿಕ ಕೋಟೆನಗರಿಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ನಿತ್ಯ 22 ಎಂಎಲ್‌ಡಿಗೂ ಅಧಿಕ ನೀರಿನ ಬೇಡಿಕೆ ಇದೆ. ಶಾಂತಿ-ವಿ.ವಿ.ಸಾಗರದಿಂದ 40 ಎಂಎಲ್‌ಡಿಗೂ ಹೆಚ್ಚು ಲಭ್ಯವಾಗುತ್ತಿದೆ. ಆದರೂ ಪ್ರತಿ ಮನೆಗಳಿಗೂ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಆಗಿಂದಾಗ್ಗೆ ಅಲ್ಲಲ್ಲಿ ಪೈಪ್‌ಲೈನ್ ದುಸ್ಥಿತಿಯ ಕಾರಣಕ್ಕೆ ಮಾರ್ಗ ಮಧ್ಯೆಯೇ ಅರ್ಧದಷ್ಟು ನೀರು ಪೋಲಾದ ನಿದರ್ಶನ ಸಾಕಷ್ಟಿವೆ. ಕಳೆದ 15 ವರ್ಷದಿಂದಲೂ ಇದಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ.

    ಚಿತ್ರದುರ್ಗ ನಗರ ವ್ಯಾಪ್ತಿಯ ಹಲವು ಬಡಾವಣೆಗಳಿಗೆ ಸತತ 10, 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಶಾಂತಿಸಾಗರದ ನೀರು ಪೂರೈಕೆ ಮಾರ್ಗದಲ್ಲಿ ದುರಸ್ತಿ ಕಾರಣ ಹೇಳಿ ಈಚೆಗೆ ಮೂರು ದಿನ ವ್ಯತ್ಯಯ ಎಂದು ತಿಳಿಸಿದ್ದ ನಗರಸಭೆ ವಾರವಾದರೂ ನೀರು ಪೂರೈಸಿಲ್ಲ. ನಲ್ಲಿಯಲ್ಲಿ ನೀರು ಜಿನುಗದ ಕಾರಣ ಹಲವರು ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ.

    ಕಳೆದ ವರ್ಷ ಮುಂಗಾರು ಪೂರ್ವ, ನಂತರ ಹಾಗೂ ಹಿಂಗಾರು ಅವಧಿಯಲ್ಲಿ ಮಳೆಯಾಗದೆ ವರುಣ ಅವಕೃಪೆ ತೋರಿದ ಪರಿಣಾಮ ಬರಗಾಲ ಜಿಲ್ಲೆಯನ್ನು ಆವರಿಸಿದೆ. ಕೆರೆ-ಕಟ್ಟೆ, ಹೊಂಡ-ಪುಷ್ಕರಣಿ, ಬಾವಿ-ಒಡ್ಡುಗಳು ಸೇರಿ ಇನ್ನಿತರೆ ಜಲಮೂಲಗಳಲ್ಲೂ ನೀರಿನ ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ ಅಂತರ್ಜಲ ಮಟ್ಟ ಕೂಡ ಕುಸಿಯುತ್ತಿದ್ದು, ಜಾನುವಾರು, ಕೃಷಿ ಚಟುವಟಿಕೆಗಳಿಗೂ ತೊಂದರೆ ಉಂಟಾಗಿದೆ.

    ವಿ.ವಿ.ಸಾಗರದಲ್ಲಿ ನೀರಿನ ಲಭ್ಯತೆ ಇದ್ದು, ಅಲ್ಲಿಂದ ಸರಬರಾಜು ಆಗುವ ಭಾಗಗಳಲ್ಲಿ ಸಮಸ್ಯೆ ಕಂಡುಬಂದಿಲ್ಲ. ಗಮನಕ್ಕೆ ಬಂದರೆ ಪೂರೈಕೆಗೆ ಸೂಕ್ತ ಕ್ರಮ ವಹಿಸಲಾಗುವುದು ಎನ್ನುತ್ತಾರೆ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳು.

    ಸಿದ್ಧ ಉತ್ತರ ಜನ ತತ್ತರ: ಕೊಳವೆ ಮಾರ್ಗ ಹೊಡೆದು ಹೋಗಿದೆ, ನೀರೆತ್ತುವ ಮೋಟಾರು ದುರಸ್ತಿಯಲ್ಲಿದೆ, ಪರಿವರ್ತಕ ಸುಟ್ಟು ಹೋಗಿದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ, ಯಂತ್ರಗಳು ತುಂಬಾ ಹಳೆಯದ್ದಾಗಿದ್ದು ಬದಲಿಸಬೇಕಿದೆ, ಓವರ್ ಹೆಡ್ ಟ್ಯಾಂಕ್‌ಗಳನ್ನು ಶುಚಿಗೊಳಿಸಬೇಕಿದೆ ಹೀಗೆ.. ಸಿದ್ಧ ಉತ್ತರ ನೀಡುವ ಅಧಿಕಾರಿಗಳಿಂದಾಗಿ ಜನ ತತ್ತರಿಸಿದ್ದಾರೆ.

    ಸಮಸ್ಯಾತ್ಮಕ 278 ಗ್ರಾಮಗಳ ಗುರುತು: ಜಿಲ್ಲೆಯಲ್ಲಿ ಬೇಸಿಗೆ ವೇಳೆ ಹೊಸದುರ್ಗ ತಾಲೂಕಿನಲ್ಲಿ 36, ಚಳ್ಳಕೆರೆ-32, ಚಿತ್ರದುರ್ಗ-43, ಮೊಳಕಾಲ್ಮ್ಮುರು-67, ಹಿರಿಯೂರು-57 ಹಾಗೂ ಹೊಳಲ್ಕೆರೆ-43 ಸೇರಿ ಒಟ್ಟು 278 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುವ ಸಾಧ್ಯತೆ ಇದೆ ಎಂದು ಜ. 15ರೊಳಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪಟ್ಟಿ ಸಿದ್ಧಪಡಿಸಿಕೊಂಡಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಲು ಈಗಾಗಲೇ ಯೋಜನೆ ರೂಪಿಸಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯುವುದು, ಟ್ಯಾಂಕರ್ ಮೂಲಕ ನೀರು ಸರಬರಾಜು, ಅನಿವಾರ್ಯವಿದ್ದಲ್ಲಿ ಕೊಳವೆಬಾವಿ ಕೊರೆಸುವುದು, ತುರ್ತು ಪೈಪ್‌ಲೈನ್ ಕಾಮಗಾರಿಗಳಿಗೆ 9 ಕೋಟಿ ರೂ. ಅನುದಾನವನ್ನು ಜಿಲ್ಲಾಡಳಿತದ ಕಾಯ್ದಿರಿಸಿದೆ. ಇದರಲ್ಲಿ ಮೇವು ಪೂರೈಕೆಯೂ ಸೇರಿಕೊಂಡಿದೆ.

    ನೀರಿನ ಸೌಲಭ್ಯವಿಲ್ಲದ ಎಣ್ಣೆಗೆರೆ: ದೊಡ್ಡಸಿದ್ದವ್ವನಹಳ್ಳಿ ಗ್ರಾಪಂ ವ್ಯಾಪ್ತಿಯ 6 ಗ್ರಾಮಗಳಿಗೆ ಯಾವುದೇ ನೀರಿನ ಸೌಕರ್ಯವಿಲ್ಲ. ನಿತ್ಯವೂ ನೀರಿಗೆ ಹಾಹಾಕಾರ ಉಂಟಾಗಿದೆ. ಎಣ್ಣೆಗೆರೆ ಗ್ರಾಮದಲ್ಲೇ 270 ಕುಟುಂಬಗಳು ಜೀವಿಸುತ್ತಿದ್ದು, ಶಾಶ್ವತ ಪರಿಹಾರ ಸಿಗದೆ, ಜನರ ಪರದಾಟ ತಪ್ಪಿಲ್ಲ. ಶಾಸಕರು, ಡಿಸಿ, ಜಿಪಂ ಸಿಇಒ, ತಾಪಂ ಇಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೊಳವೆಬಾವಿ ಕೊರೆಸುವುದಾಗಿ ಭರವಸೆ ನೀಡಿ 6 ತಿಂಗಳಾದರೂ ಈಡೇರಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಸಂಪರ್ಕ ಈಗಷ್ಟೇ ಕಲ್ಪಿಸಲಾಗುತ್ತಿದೆ. ನೀರು ಯಾವಾಗ ಬರುತ್ತದೋ ಗೊತ್ತಿಲ್ಲ. 2 ಸಾವಿರ ಅಡಿಕೆ ಗಿಡಗಳು ಬತ್ತು ಹೋಗಿವೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಪಂ ಸದಸ್ಯ ರೆಹಮಾನ್.

    ನೀರು ಬಿಟ್ಟು 15 ದಿನವಾಯ್ತು: ನಮ್ಮ ಭಾಗದಲ್ಲಿ 15 ದಿನವಾಯ್ತು ನೀರು ಬಿಟ್ಟು. ಕೇಳಿದರೆ ನಗರಸಭೆ ಸಿಬ್ಬಂದಿ ಯಾವಾಗಲೂ ಪೈಪ್ ಹೊಡೆದಿದೆ ಎನ್ನುತ್ತಾರೆ. ನೀರಿಲ್ಲದೆ, ಜೀವಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಸಮಸ್ಯೆ ಉಲ್ಭಣಿಸಲಿದ್ದು, ಅದಕ್ಕೂ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಾರಣ ಹೇಳದೆ, ನಗರಸಭೆ ಅಧಿಕಾರಿಗಳು ಪೂರೈಕೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸುತ್ತಾರೆ ಬುರುಜನಹಟ್ಟಿ ನಿವಾಸಿ ಮಂಜು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts