More

    ಬೇಂದ್ರೆಗೆ ವರವಾದ ಬಿಆರ್​ಟಿಎಸ್

    ಹುಬ್ಬಳ್ಳಿ: ಹು-ಧಾ ನಡುವೆ ಪ್ರತ್ಯೇಕ ಮಾರ್ಗದಲ್ಲಿ ಸಂಚರಿಸುವ ಚಿಗರಿ ಬಸ್ ಪಾಸ್ ಮಾಸಿಕ ಪ್ರಯಾಣ ದರವನ್ನು ಮಾರ್ಚ್ 1ರಿಂದ ಬಿಆರ್​ಟಿಎಸ್ ಏರಿಕೆ ಮಾಡಿರುವುದು ಖಾಸಗಿ ಒಡೆತನದ ಬೇಂದ್ರೆ ನಗರ ಸಾರಿಗೆಗೆ ವರವಾಗಿ ಪರಿಣಮಿಸಿದೆ.

    ಬಿಆರ್​ಟಿಎಸ್ ಬಸ್ ಪಾಸ್ ಮಾಸಿಕ ಪ್ರಯಾಣ ದರ 600 ರಿಂದ 1280 ರೂ.ಗೆ ಏರಿಕೆಯಾಗಿದೆ. ಇದೇ ವೇಳೆ ಬೇಂದ್ರೆ ಬಸ್ ಪಾಸ್ ದರ 600 ರೂ. ಇದೆ. ಮೊದಲು 500 ರೂ. ಇತ್ತು. ಬಿಆರ್​ಟಿಎಸ್ ಏರಿಕೆ ಮಾಡಿದ ಮೇಲೆ 100 ರೂ. ಹೆಚ್ಚಿಸಿದೆ. ಬಿಆರ್​ಟಿಎಸ್ ಹಠಾತ್ತನೇ ಮಾಸಿಕ ಬಸ್ ಪಾಸ್ ದರವನ್ನು ದುಪ್ಪಟ್ಟು ಮಾಡಿದ್ದು, ಬೇಂದ್ರೆಗೆ ಅನುಕೂಲವಾಗಿದೆ. ಇದೀಗ ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸಲು ಬೇಂದ್ರೆ ಬಸ್ ಪಾಸ್​ಗೆ ಬೇಡಿಕೆ ಹೆಚ್ಚಿದೆ. ಬಿಆರ್​ಟಿಎಸ್ ಎಡವಟ್ಟು ಬೇಂದ್ರೆಗೆ ಸುಗ್ಗಿಯಾಗಿದೆ.

    ಹು-ಧಾ ನಡುವೆ ಇದೀಗ ವಾಕರಸಾ ಸಂಸ್ಥೆಯ ನಗರ ಸಾರಿಗೆ ಬಸ್ ಸಂಚಾರ ಸಂಪೂರ್ಣ ರದ್ದುಗೊಂಡಿದೆ. ಈಗೇನಿದ್ದರೂ ಬಿಆರ್​ಟಿಎಸ್ ಚಿಗರಿ ಬಸ್​ನಲ್ಲಿಯೇ ಸಂಚರಿಸಬೇಕು. ಹುಬ್ಬಳ್ಳಿಯಿಂದ ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ, ವಿಜಯನಗರ, ಭವಾನಿನಗರ, ಇತ್ಯಾದಿ ಕಡೆ ನಿತ್ಯ ಪ್ರಯಾಣಿಸುವವರು ಪ್ರತ್ಯೇಕ ಪಾಸ್ ಪಡೆಯಬೇಕು. ಹೀಗೆ ಬಿಆರ್​ಟಿಎಸ್, ವಾಕರಸಾ ಸಂಸ್ಥೆಯ ಬಸ್​ನಲ್ಲಿ ಪ್ರಯಾಣಿಸಲು ಪ್ರತ್ಯೇಕ ಪಾಸ್ ಪಡೆಯುವ ಸ್ಥಿತಿ ನಿರ್ವಣವಾಗಿದೆ.

    ಇದರಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವವರು ದುಡಿಯುವ ವರ್ಗದವರು. ಹುಬ್ಬಳ್ಳಿ ಮತ್ತು ಧಾರವಾಡದ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಕೆಲಸ ಮಾಡುವವರು ತತ್ತರಿಸಿ ಹೋಗಿದ್ದಾರೆ. ಧಾರವಾಡ ಗ್ರಾಮೀಣ ಪ್ರದೇಶದಿಂದ ಸಾರಿಗೆ ಸಂಸ್ಥೆ ಬಸ್​ನಲ್ಲಿ ಬಂದು ಧಾರವಾಡದಿಂದ ಹುಬ್ಬಳ್ಳಿಗೆ ಚಿಗರಿ ಬಸ್​ನಲ್ಲಿ ಸಂಚರಿಸಿ ಹುಬ್ಬಳ್ಳಿ ಗೋಕುಲ ರಸ್ತೆಯ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರು 3 ಪ್ರತ್ಯೇಕ ಪಾಸ್​ಗಳನ್ನು ಪಡೆಯಬೇಕು. ಇದೇ ರೀತಿ ಹುಬ್ಬಳ್ಳಿಯಿಂದ ಧಾರವಾಡದ ಬೇಲೂರ, ಮುಮ್ಮಿಗಟ್ಟಿ ಇತ್ಯಾದಿ ಕಡೆ ನೌಕರಿ ಮಾಡುವವರ ಪರಿಸ್ಥಿತಿ ಇದೆ. ಕಳೆದ ತಿಂಗಳು 1170 ರಿಂದ 1270 ರೂ. ಖರ್ಚು ಮಾಡಿ ಒಂದು ಮಾಸಿಕ ಬಸ್ ಪಾಸ್ ಪಡೆದರೆ ಸಾಕಿತ್ತು. ಇದೀಗ 2800ರಿಂದ 3280 ರೂ. ವರೆಗೆ ಪಾವತಿಸಿ 3 ಪ್ರತ್ಯೇಕ ಬಸ್ ಪಾಸ್ ಪಡೆಯಬೇಕು. ತಿಂಗಳಿಗೆ 7-8 ಸಾವಿರ ರೂ. ಮಾಸಿಕ ವೇತನ ಪಡೆಯುವ ಕೆಲಸಗಾರರು ಅರ್ಧದಷ್ಟು ಹಣ ಬಸ್ ಪಾಸ್​ಗೆ ವ್ಯಯಿಸಬೇಕಾಗಿದೆ.

    ಕಳೆದ 17 ದಿನಗಳಿಂದ ಈ ಗೋಳು ಇದ್ದರೂ ಚುನಾಯಿತ ಪ್ರತಿನಿಧಿಗಳು ಗೊತ್ತಿಲ್ಲದಂತೆ ಇದ್ದಾರೆ. ಬಡ ನೌಕರರು ಎಸಿ ಬಸ್ ಕೇಳಿರಲಿಲ್ಲ. ಬಿಆರ್​ಟಿಎಸ್ ಎಂಡಿ ರಾಜೇಂದ್ರ ಚೋಳನ್ ಪ್ರತಿಕ್ರಿಯೆಗೆ ಸಿಕ್ಕಿಲ್ಲ.

    ಹುಬ್ಬಳ್ಳಿ ನಗರ ಮತ್ತು ಉಪನಗರದಲ್ಲಿ ಸಂಚರಿಸಲು 1000 ರೂ., ಹು-ಧಾ ನಡುವೆ ಬಿಆರ್​ಟಿಎಸ್ ಬಸ್ ಪಾಸ್​ಗೆ 1280 ರೂ. ಹಾಗೂ ಧಾರವಾಡ ನಗರ ಮತ್ತು ಉಪ ನಗರದಲ್ಲಿ ಪ್ರಯಾಣಿಸಲು 1000 ರೂ. ಪಾವತಿಸಬೇಕಿದೆ. ಮೊದಲು 1200 ರೂ. ನಲ್ಲಿ ಮುಗಿಯುತ್ತಿತ್ತು. ಪ್ರತ್ಯೇಕ ಬಸ್ ಪಾಸ್ ಪಡೆಯಲು ಒಂದೊಂದು ದಿನ ವ್ಯಯಿಸಬೇಕಾಗುತ್ತಿದೆ. ಇದರಿಂದ ಕಡಿಮೆ ಸಂಬಳದ ನೌಕರರು ಜೀವನ ನಡೆಸುವುದೇ ಕಷ್ಟಕರವಾಗಿದೆ.| ಸಂತೋಷಕುಮಾರ, ಪ್ರಯಾಣಿಕ

    ನಿಗದಿಯಿಂದ ಧಾರವಾಡಕ್ಕೆ ಬರಲು 800 ರೂ., ಧಾರವಾಡದಿಂದ ಹುಬ್ಬಳ್ಳಿಗೆ ಬಿಆರ್​ಟಿಎಸ್ ಚಿಗರಿ ಬಸ್​ಗೆ 1280 ರೂ. ಹಾಗೂ ಹುಬ್ಬಳ್ಳಿಯಿಂದ ಗೋಕುಲ ರಸ್ತೆಗೆ 700 ರೂ. ಹೀಗೆ ಮೂರು ಪ್ರತ್ಯೇಕ ಮಾಸಿಕ ಪಾಸ್ ಪಡೆದು ಪ್ರಯಾಣಿಸಬೇಕಿದೆ. ಇದೇ ಮಾರ್ಗಕ್ಕೆ ಮೊದಲು 1170 ರೂ. ಇತ್ತು. |ವೀರಣ್ಣ ನಿಡಗುಂದಿ, ಪ್ರಯಾಣಿಕ

    ==========

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts