More

    ಬೆಳ್ಳುಳ್ಳಿ ಇಳುವರಿ ಕುಂಠಿತ ಸಾಧ್ಯತೆ

    ರಾಣೆಬೆನ್ನೂರ: ನಿರಂತರ ಮಳೆಯಿಂದಾಗಿ ಪ್ರಸಕ್ತ ವರ್ಷವೂ ತಾಲೂಕಿನಲ್ಲಿ ಬೆಳ್ಳುಳ್ಳಿ ಬೆಳೆ ಇಳುವರಿ ಕುಂಠಿತವಾಗುವ ಸಾಧ್ಯತೆ ಅಧಿಕವಾಗಿದೆ. ಆದರೂ ಹಿಂದಿನಂತೆ ಈ ಬಾರಿಯೂ ಬೆಳ್ಳುಳ್ಳಿಗೆ ಬಂಪರ್ ಬೆಲೆ ಸಿಗುವ ಮೂಲಕ ನಷ್ಟ ನೀಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

    ಕಳೆದ ವರ್ಷ ನೆರೆ ಹಾವಳಿಯಿಂದಾಗಿ ಇಳುವರಿ ಕುಂಠಿತವಾಗಿ 1 ಕ್ವಿಂಟಾಲ್ ಬೆಳ್ಳುಳ್ಳಿ ಬೆಲೆ 24 ಸಾವಿರ ರೂಪಾಯಿವರೆಗೆ ತಲುಪಿ ದಾಖಲೆ ನಿರ್ವಿುಸಿತ್ತು. ಈ ಬಾರಿಯೂ ಇಳುವರಿ ಕುಂಠಿತವಾಗಬಹುದಾದರೂ, ಉತ್ತಮ ಬೆಲೆ ಬಂದರೆ ಮಾತ್ರ ರೈತರಿಗೆ ವರದಾನವಾಗಲಿದೆ.

    ತಾಲೂಕಿನ ಯರೇಕುಪ್ಪಿ, ಹಲಗೇರಿ, ಉಕ್ಕುಂದ, ಸರ್ವಂದ, ಗುಡ್ಡದ ಆನ್ವೇರಿ, ಕುಪ್ಪೇಲೂರ ಸೇರಿ 4 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ನಿರಂತರ ಮಳೆಯಿಂದಾಗಿ ಕೆಲವೆಡೆ ಬೆಳ್ಳುಳ್ಳಿ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನು ಕೆಲವೆಡೆ ತೇವಾಂಶ ಹೆಚ್ಚಳದಿಂದ ಬೆಳೆ ಸರಿಯಾಗಿ ಬೆಳೆದಿಲ್ಲ. ಹೀಗಾಗಿ, ಇಳುವರಿ ಕುಂಠಿತವಾಗಲಿದೆ ಎಂಬುದು ರೈತರ ಅಭಿಪ್ರಾಯ.

    ಸದ್ಯ 11 ಸಾವಿರ ರೂ. ಬೆಲೆ: ಸದ್ಯ ಸ್ಥಳೀಯ ಎಪಿಎಂಸಿ ಮಾರುಕಟ್ಟೆಗೆ ತಾಲೂಕು ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಯಿಂದ ಬೆಳ್ಳುಳ್ಳಿ ಆವಕವಾಗುತ್ತಿದೆ. ಒಂದು ಕ್ವಿಂಟಾಲ್ ಬೆಳ್ಳುಳ್ಳಿಗೆ 11 ಸಾವಿರ ರೂ. ದರವಿದೆ. ಸ್ಥಳೀಯ ರೈತರ ಬೆಳ್ಳುಳ್ಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಮಾರಾಟಕ್ಕೆ ಬರುವ ಸಮಯದಲ್ಲಿ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂಬುದು ಎಪಿಎಂಸಿ ಅಧಿಕಾರಿಗಳ ಅಭಿಪ್ರಾಯ.

    ಹೆಚ್ಚಳವಾದರೆ ಮಾತ್ರ ಲಾಭ: ಒಂದು ಎಕರೆ ಬೆಳ್ಳುಳ್ಳಿ ಬೆಳೆಯಲು 50 ಸಾವಿರ ರೂ.ವರೆಗೂ ಖರ್ಚು ಬರುತ್ತದೆ. ಬೆಳೆ ಉತ್ತಮವಾಗಿದ್ದರೆ ಎಕರೆಗೆ 10ರಿಂದ 15 ಕ್ವಿಂಟಾಲ್ ಬೆಳ್ಳುಳ್ಳಿ ದೊರೆಯುತ್ತದೆ. ಆದರೆ, ಈ ಬಾರಿ ಮಳೆಯಿಂದಾಗಿ 5ರಿಂದ 10 ಕ್ವಿಂಟಾಲ್​ನಷ್ಟು ಬರಬಹುದು ಎಂಬ ಅಂದಾಜಿದೆ. ಹೀಗಾಗಿ, ಕಳೆದ ವರ್ಷದಂತೆ ಈ ಬಾರಿಯೂ ದರ 20 ಸಾವಿರ ರೂ. ದಾಟಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ಬೆಳ್ಳುಳ್ಳಿ ಬೆಳೆಗಾರ ಮಲ್ಲೇಶ ಕರಿಗಾರ.

    ಕಳೆದ ವರ್ಷ ಆರಂಭದಲ್ಲಿ ರೈತರಿಗೆ ಉತ್ತಮ ಬೆಲೆ ಸಿಕ್ಕಿತ್ತು. ಆದರೆ, ಕೊನೆಗಳಿಗೆಯಲ್ಲಿ ದಲ್ಲಾಳಿಗಳು ಬೇರೆ ಬೇರೆ ಕಡೆಯಿಂದ ಬೆಳ್ಳುಳ್ಳಿ ತರಿಸಿದ್ದರಿಂದ ಸ್ಥಳೀಯ ಬೆಳ್ಳುಳ್ಳಿ ದರ ಸಂಪೂರ್ಣ ಕುಸಿತ ಕಂಡಿತ್ತು. ಈ ಬಾರಿ ಉತ್ತಮ ಬೆಲೆ ಬರುವ ನಿರೀಕ್ಷೆಯಿದೆ. ಆದ್ದರಿಂದ ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ತಡೆಯಬೇಕು.
    | ಶರಣಪ್ಪ ನಾಯ್ಕರ ಬೆಳ್ಳುಳ್ಳಿ ಬೆಳೆಗಾರ

    ಕಳೆದ ವರ್ಷ ಬೆಲೆ ನಾಗಾಲೋಟ
    ಕಳೆದ ವರ್ಷ ನೆರೆ ಹಾವಳಿಯಿಂದಾಗಿ ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿ 1 ಕ್ವಿಂಟಾಲ್ ಬೆಳ್ಳುಳ್ಳಿಗೆ 24 ಸಾವಿರ ರೂ.ವರೆಗೆ ಬೆಲೆ ಏರಿಕೆಯಾಗಿತ್ತು. ಇದರಿಂದಾಗಿ ಬೆಳ್ಳುಳ್ಳಿ ಕಳವು ಪ್ರಕರಣಗಳೂ ಹೆಚ್ಚಾಗಿದ್ದವು. ರೈತರ ಒತ್ತಾಯಕ್ಕೆ ಮಣಿದು ಪೊಲೀಸರು ಬೆಳ್ಳುಳ್ಳಿ ಗುಡ್ಡೆಗಳಿಗೆ ಕಾವಲು ನಿಂತಿದ್ದರು. ಆದರೆ, ಡಿಸೆಂಬರ್ ಕೊನೆಯಲ್ಲಿ ಕ್ವಿಂಟಾಲ್​ಗೆ 3 ಸಾವಿರ ರೂ.ವರೆಗೆ ದರ ಕುಸಿದಿತ್ತು. ಇದರಿಂದ ರೈತರು ಬೆಳ್ಳುಳ್ಳಿಯನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts