More

    ಬೆಳೆ ಸರ್ವೇ ಕೇಂದ್ರ ಸರ್ಕಾರ ಮೆಚ್ಚುಗೆ; ದೇಶಕ್ಕೆ ವಿಸ್ತರಿಸುವ ಸಾಧ್ಯತೆ?

    ಚಿಂತಾಮಣಿ: ರಾಜ್ಯ ಸರ್ಕಾರ ಆರಂಭಿಸಿರುವ ಬೆಳೆ ಸಮೀಕ್ಷೆ ನೋಂದಣಿ ವಿಧಾನವನ್ನು ಕೇಂದ್ರ ಕೃಷಿ ಸಚಿವರು ಮೆಚ್ಚಿಕೊಂಡಿದ್ದು ಇಡೀ ದೇಶಕ್ಕೆ ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಕುರುಬೂರಿನಲ್ಲಿ ಶುಕ್ರವಾರ ರೇಷ್ಮೆ ಕೃಷಿ ಮಹಾವಿದ್ಯಾಲಯದ ಚಂದ್ರಕಳಶ ಸಭಾಂಗಣ ಮತ್ತು ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಆಗಸ್ಟ್ 16ರಿಂದ ಸರ್ವೇ ಪ್ರಾರಂಭಿಸಿದ್ದು ಇದುವರೆಗೂ 1,01,31,997 (ಶೇ.47.58) ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ದೇಶದಲ್ಲಿ ಸಾಫ್ಟವೇರ್ ಕಂಪನಿಗಳು ಬಾಗಿಲು ಮುಚ್ಚಬಹುದು, ಆದರೆ ಕೃಷಿ ಕೇಂದ್ರಗಳು ಬಂದ್ ಆಗುವುದಿಲ್ಲ ಎಂದ ಸಚಿವರು, ರಾಜ್ಯದಲ್ಲಿ ಮೊಟ್ಟಮೊದಲು ಆರಂಭವಾದ ಕುರುಬೂರು ರೇಷ್ಮೆ ಕೃಷಿ ಮಹಾವಿದ್ಯಾಲಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತರು.

    ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿದೆ, ಇತ್ತ ಮಳೆ ಪ್ರಮಾಣವೂ ಕಡಿಮೆಯಾಗಿದೆ, ಇಂತಹ ಕಡುಕಷ್ಟದಲ್ಲೂ ರೈತರು ಬೆಳೆ ಬೆಳೆಯುತ್ತಿದ್ದಾರೆ, ಶಾಶ್ವತ ನೀರಾವರಿ ಯೋಜನೆಯಾದ ಕೆ.ಸಿ.ವ್ಯಾಲಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

    ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್, ಕುರುಬೂರು ರೇಷ್ಮೆ ಕೃಷಿ ಮಹಾವಿದ್ಯಾಲಯ ಡೀನ್ ಡಾ.ವೆಂಕಟರವಣ,ಡಾ.ರಾಮಾಂಜಿಗೌಡ, ಡಾ.ದಯಾನಂದ, ಅರವಿಂದ್, ಸುರೇಶ್ ಇತರರಿದ್ದರು.

    ವಿವಿಧ ತಳಿಗಳ ಬಿಡುಗಡೆ : ಕುರುಬೂರು ಮಹಾವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಅವಿಷ್ಕಾರ ಮಾಡಿರುವ ಗೋಡಂಬಿ ತಳಿಗಳಾದ ಚಿಂತಾಮಣಿ-1 ಮತ್ತು ಚಿಂತಾಮಣಿ-2 ಹಾಗೂ ಜಂಬುನೇರಳೆ, ಜಿಕೆವಿಕೆ ಹುಣಸೆ, ನೆಲಗಡಲೆ ತಳಿಗಳನ್ನು ಸಚಿವರು ಬಿಡುಗಡೆ ಮಾಡಿದರು.

    ರೇಷ್ಮೆ ಸೀರೆ ಖರೀದಿ: ಕೃಷಿ ಸಚಿವರು ಮತ್ತು ಶಾಸಕರನ್ನು ಕಾಲೇಜಿನ ಪ್ರವೇಶ ದ್ವಾರದಲ್ಲಿ ನಾದಸ್ವರ ಮತ್ತು ಪೂರ್ಣಕುಂಭದ ಕಳಶಗಳೊಂದಿಗೆ ಸ್ವಾಗತಿಸಲಾಯಿತು. ವಿಶ್ವವಿದ್ಯಾಲಯದಲ್ಲಿ ಗಿಡ ನೆಡಲು ಹಾಗೂ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಪ್ರದರ್ಶನ ಮತ್ತು ಮಾರಾಟಕ್ಕೆ ಸಚಿವರು ಚಾಲನೆ ನೀಡಿ ರೇಷ್ಮೆ ಸೀರೆಯೊಂದನ್ನು ಖರೀದಿಸಿದರು.

    ಅಂಗಡಿ ಮಾಲೀಕರನ್ನು ಕಟ್ಟಿ ಹಾಕಿ: ವ್ಯಾಪಾರಸ್ಥರು ಯೂರಿಯಾ ದಾಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ತಾಲೂಕು ರೈತಸಂಘ, ಹಸಿರುಸೇನೆ ಅಧ್ಯಕ್ಷ ಸೀಕಲ್ ರವಣಾರೆಡ್ಡಿ ಸಚಿವರ ಗಮನಕ್ಕೆ ತಂದರು, ಅಂತಹ ವ್ಯಾಪಾರಸ್ಥರನ್ನು ಕಟ್ಟಿಹಾಕಿ, ನಿಮ್ಮ ರಕ್ಷಣೆಗೆ ನಾವು ಇರುತ್ತೇವೆ ಎಂದು ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿದ್ದ 117 ಅಂಗಡಿಗಳ ಪರವಾನಗಿ ರದ್ದು ಮಾಡಿ, ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದರು.

    ಎಲ್ಲ ಬರೀ ಊಹಾಪೋಹಗಳಷ್ಟೇ: ರಾಜ್ಯ ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಇಲ್ಲ,ನಾಲ್ಕು ಸಚಿವರು ಒಂದೆಡೆ ಸೇರಿದಾಕ್ಷಣ ಗುಂಪುಗಾರಿಕೆ ಎನ್ನುತ್ತಾರೆ, ಎಲ್ಲ ಊಹಾಪೋಹಗಳಷ್ಟೇ, ಅವಧಿ ಪೂರ್ಣಗೊಳ್ಳುವವರೆಗೂ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts