More

    ಬೆಳೆ ವಿಮೆ ಮಾರ್ಗಸೂಚಿ ಬದಲಾಗಲಿ

    ಧಾರವಾಡ: ಬೆಳೆ ವಿಮೆ ಪರಿಹಾರ ನೀಡುವಲ್ಲಿ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಪರಿಹಾರ ನೀಡುವ ಮಾರ್ಗಸೂಚಿ ಅವೈಜ್ಞಾನಿಕವಾಗಿದೆ. ಹೀಗಾಗಿ ಮಾರ್ಗಸೂಚಿಗಳ ಬದಲಾವಣೆಗೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ತಾಲೂಕು ಪಂಚಾಯಿತಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ರವಿವರ್ಮ ಪಾಟೀಲ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ, ಬೆಳೆವಿಮೆ ಹಾಗೂ ಬೆಳೆ ಪರಿಹಾರ ವಿಷಯವಾಗಿ ಚರ್ಚೆ ನಡೆಯಿತು.

    ಕೃಷಿ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಈರಪ್ಪ ಏಣಗಿ ಹಾಗೂ ಮಹಾವೀರ ಜೈನ್ ಮಾತನಾಡಿ, 2 ವರ್ಷ ಅತಿವೃಷ್ಟಿ ಸಂಭವಿಸಿದ್ದರೂ ಸರಿಯಾದ ಪ್ರಮಾಣದಲ್ಲಿ ಬೆಳೆ ವಿಮೆ ಬಂದಿಲ್ಲ. ಇದು ವಿಮೆ ಕಂಪನಿಗಳಿಗೆ ಲಾಭ ಮಾಡುವ ವ್ಯವಸ್ಥೆಯಾಗಿದೆ. ಹೀಗಾಗಿ ಮಾರ್ಗಸೂಚಿ ಬದಲಾವಣೆ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ಈ ವಿಷಯಕ್ಕೆ ಎಲ್ಲ ಸದಸ್ಯರು ಒಮ್ಮತದ ಒಪ್ಪಿಗೆ ನೀಡಿದ್ದರಿಂದ ಅಧ್ಯಕ್ಷರ ಸೂಚನೆಯಂತೆ ಠರಾವು ಪಾಸು ಮಾಡಲಾಯಿತು.

    ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ವಿಳಂಬವಾಗುತ್ತಿರುವುದಕ್ಕೆ ಜನ ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಜಿಲ್ಲಾ ಆಸ್ಪತ್ರೆ ವೈದ್ಯರೇ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದರು. ಈಗ ಘಟನೆ ನಡೆದ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪರೀಕ್ಷೆ ನಡೆಸಬೇಕು ಎಂಬ ಹೊಸ ನಿಯಮದಿಂದ ವಿಳಂಬವಾಗುತ್ತಿದೆ ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷ, ಈ ನಿಯಮ ಸಡಿಲಿಸಿ ಮರಣೋತ್ತರ ಪರೀಕ್ಷೆ ಬೇಗ ಆಗುವಂತೆ ಕ್ರಮ ಕೈಗೊಳ್ಳಲು ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ ಅವರಿಗೆ ಸೂಚಿಸಿದರು.

    ಉಪ್ಪಿನಬೆಟಗೇರಿ ಗ್ರಾಮದಲ್ಲಿ 11 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿದ್ದು, ಬೇಸಿಗೆ ಕಾಲದಲ್ಲಿ ಇನ್ನೂ ದುಸ್ತರವಾಗಲಿದೆ. ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ತಿಮ್ಮಾಪುರ ಗ್ರಾಮದಿಂದ ಉಪ್ಪಿನಬೆಟಗೇರಿಗೆ ಪ್ರತ್ಯೇಕ ಪೈಪ್​ಲೈನ್ ಅಳವಡಿಸಬೇಕು ಎಂದು ಶಾಂತವ್ವ ಸಂಕಣ್ಣವರ ಆಗ್ರಹಿಸಿದರು.

    ಇದಕ್ಕೆ ಸ್ಪಂದಿಸಿದ ಅಧಿಕಾರಿ, ಒಂದು ತಿಂಗಳಲ್ಲಿ ಕಾಮಗಾರಿ ನಡೆಸುವ ಭರವಸೆ ನೀಡಿದರು. ಈ ಮಧ್ಯೆ ಹೆಬ್ಬಳ್ಳಿ ಗ್ರಾಮಕ್ಕೆ ಶುದ್ಧ ನೀರು ಪೂರೈಸುತ್ತಿಲ್ಲ ಎಂಬ ಸದಸ್ಯರ ಮನವಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ, 2-3 ದಿನಗಳಲ್ಲಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ, ಸರಿಯಾದ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.

    ಹಾರೋಬೆಳವಡಿ ಗ್ರಾಮದಿಂದ ಉಪ್ಪಿನಬೆಟಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಸಸಿ ನೆಟ್ಟು ನಿರ್ವಹಿಸುವ ಬಗ್ಗೆ ಮಾಹಿತಿ ಪಡೆದ ಈರಪ್ಪ ಏಣಗಿ, ಈ ರಸ್ತೆ ಬದಿಯಲ್ಲಿ ಸಸಿಗಳನ್ನೇ ನೆಟ್ಟಿಲ್ಲ. ಆದಾಗ್ಯೂ ಅನುದಾನ ದುರ್ಬಳಕೆ ಮಾಡಿದ್ದಲ್ಲದೆ, ನಿರ್ವಹಣೆ ಹೆಸರಲ್ಲೂ ಅನುದಾನ ಬಳಸಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ, ಈ ಬಗ್ಗೆ ಸರ್ವೆ ನಡೆಸಿ ಸಸಿ ನೆಟ್ಟಿರುವ ಹಾಗೂ ನಿರ್ವಹಣೆ ಕುರಿತು ವರದಿ ಸಲ್ಲಿಸಲು ಸೂಚಿಸಿದರು. ಉಪಾಧ್ಯಕ್ಷೆ ಫಕೀರವ್ವ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ ಬುಡ್ಡಿಕಾಯಿ, ತಾಪಂ ಇಒ ಎಸ್.ಎಸ್. ಖಾದ್ರೋಳಿ, ಅಧಿಕಾರಿಗಳು, ಇತರರು ಇದ್ದರು.

    ಹಕ್ಕಿಜ್ವರದ ಆತಂಕ ಬೇಡ
    ತಾಲೂಕಿನ ಯಾವುದೇ ಗ್ರಾಮದಲ್ಲಿ ಹಕ್ಕಿ ಜ್ವರ ಕಂಡು ಬಂದಿಲ್ಲ. ಈ ವಿಷಯದಲ್ಲಿ ಜನ ಆತಂಕ ಪಡುವುದು ಬೇಡ. ಆದರೆ, ಹಕ್ಕಿಗಳ ಅಸಹಜ ಸಾವು ಕಂಡು ಬಂದರೆ ತಕ್ಷಣ ಪಶು ಸಂಗೋಪನೆ ಇಲಾಖೆಗೆ ಮಾಹಿತಿ ನೀಡಿ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ಸೇವಿಸಬಹುದು ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts