More

    ಬೆಳೆ ವಿಮೆ, ಪರಿಹಾರ ಪಾವತಿಸಿ

    ಕಾರವಾರ: ಯುನಿವರ್ಸಲ್ ಸೊಂಪೊ ಜನರಲ್ ಇನ್ಶ್ಶೂರೆನ್ಸ್ ಕಂಪನಿ ಇಬ್ಬರು ರೈತರಿಗೆ ಒಟ್ಟು 2.02 ಲಕ್ಷ ರೂ. ಬೆಳೆ ವಿಮೆಯನ್ನು ಬಡ್ಡಿಯೊಂದಿಗೆ ಪಾವತಿಸಬೇಕು ಹಾಗೂ ಅವರಿಗೆ 20 ಸಾವಿರ ರೂ. ಪರಿಹಾರ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ನ್ಯಾಯಮಂಡಳಿ ಆದೇಶ ನೀಡಿದೆ.

    ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಗ್ರಾಹಕರ ನ್ಯಾಯಮಂಡಳಿ ಬೆಳೆ ವಿಮೆ ನೀಡದ ಕಂಪನಿ ವಿರುದ್ಧ ಮಹತ್ವದ ತೀರ್ಪು ಪ್ರಕಟಿಸಿದ್ದು, ಕಂತು ತುಂಬಿಯೂ ಬೆಳೆ ವಿಮೆ ಪರಿಹಾರ ದೊರಕದ ಸಾವಿರಾರು ರೈತರಿಗೆ ಇದೊಂದು ಆಶಾಕಿರಣವಾಗಿದೆ.

    2016-17ನೇ ಸಾಲಿನ ಮುಂಗಾರಿನ ಅವಧಿಗೆ ಕೃಷಿಗಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ತೋಟಗಾರಿಕೆ ಬೆಳೆಗಳಿಗಾಗಿ ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆಯನ್ನು ಮಾಡಿಸುವ ಗುತ್ತಿಗೆಯನ್ನು ಯುನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿ ಪಡೆದು, ರೈತರಿಂದ ವಿಮಾ ಕಂತು ತುಂಬಿಸಿಕೊಂಡಿತ್ತು. ಆದರೆ, ಉಂಟಾದ ಬೆಳೆ ಹಾನಿಗೆ ಸರಿಯಾಗಿ ವಿಮಾ ಪರಿಹಾರ ಮೊತ್ತ ನೀಡದ ಹಿನ್ನೆಲೆಯಲ್ಲಿ ರೈತರು ಗ್ರಾಹಕರ ನ್ಯಾಯಮಂಡಳಿ ಮೊರೆ ಹೋಗಿದ್ದರು. ಅಧ್ಯಕ್ಷ ಪ್ರಕಾಶ ಕೆ. ಹಾಗೂ ಸದಸ್ಯ ನಜೀರ ಶೇಖ್ ವಿಚಾರಣೆ ನಡೆಸಿ ರೈತರ ಪರ ತೀರ್ಪು ಪ್ರಕಟಿಸಿದ್ದಾರೆ.

    ಪ್ರಕರಣ:1: ಅಂಕೋಲಾ ತಾಲೂಕಿನ ಅಚವೆ ಕುಂಟಗಣಿ ಗ್ರಾಮದ ರೈತ ರಾಮಚಂದ್ರ ಹೆಗಡೆ ಅವರು ತಮ್ಮ 1 ಎಕರೆ ತೋಟಗಾರಿಕೆ ಬೆಳೆಗೆ 2016ರ ಜುಲೈನಲ್ಲಿ 4,552 ರೂ. ವಿಮಾ ಕಂತನ್ನು ಅಚವೆ ವಿಜಯಾ ಬ್ಯಾಂಕ್ ಮೂಲಕ ತುಂಬಿ ಬೆಳೆ ವಿಮೆ ಮಾಡಿಸಿದ್ದರು. ಆದರೆ, ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಿತ್ತು. ವಿಮಾ ಪರಿಹಾರದ ವ್ಯಾಪ್ತಿಗೆ ಹೆಗಡೆ ಅವರ ತೋಟವನ್ನೂ ಸೇರಿಸಲಾಗಿತ್ತು. ಆದರೆ, ಯುನಿವರ್ಸಲ್ ಸೊಂಪೊ ಕಂಪನಿ ಮಾತ್ರ ವಿಮಾ ಪರಿಹಾರ ಪಾವತಿಸಿರಲಿಲ್ಲ. ಈ ಸಂಬಂಧ ಬ್ಯಾಂಕ್​ನಲ್ಲಿ ಕೇಳಿದರೆ, ಅಧಿಕಾರಿಗಳು ಇನ್ಶೂರೆನ್ಸ್ ಕಂಪನಿಯತ್ತ ಬೊಟ್ಟು ತೋರಿಸುತ್ತಿದ್ದರು. ಇದರಿಂದ ಅವರು ನ್ಯಾಯಮಂಡಳಿ ಮೊರೆ ಹೋಗಿದ್ದರು. ಬ್ಯಾಂಕ್, ಕಂಪನಿ ಮಾತ್ರವಲ್ಲದೆ, ಬೆಳೆ ವಿಮೆಯ ಜವಾಬ್ದಾರಿ ನಿಭಾಯಿಸುವ ಡಿಸಿಸಿ ಬ್ಯಾಂಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ಕುಮಟಾ ಉಪವಿಭಾಗಾಧಿಕಾರಿ ವಿರುದ್ಧವೂ ದಾವೆ ಹೂಡಿದ್ದರು. ಆದರೆ, ವಿಜಯಾ ಬ್ಯಾಂಕ್ ಹಾಗೂ ಇನ್ಶ್ಶೂರೆನ್ಸ್ ಕಂಪನಿ ಬಿಟ್ಟು ಉಳಿದವರನ್ನು ನ್ಯಾಯಮಂಡಳಿ ಆರೋಪ ಮುಕ್ತ ಮಾಡಿದೆ.

    ಇನ್ಶೂರೆನ್ಸ್ ಕಂಪನಿ ರೈತ ರಾಮಚಂದ್ರ ಹೆಗಡೆ ಅವರಿಗೆ 1,41,057 ರೂ. ವಿಮಾ ಕಂತನ್ನು ಶೇ. 7ರ ಬಡ್ಡಿಯೊಂದಿಗೆ 45 ದಿನಗಳಲ್ಲಿ ಪಾವತಿಸಬೇಕು. ಹಾಗೂ ಮಾನಸಿಕ ಹಿಂಸೆಯ ಕಾರಣಕ್ಕೆ ವಿಜಯಾ ಬ್ಯಾಂಕ್ ರೈತನಿಗೆ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಗ್ರಾಹಕರ ನ್ಯಾಯಾಲಯ ಸೂಚಿಸಿದೆ.

    ಧಾರವಾಡ ರೈತನಿಗೆ ಕಾರವಾರದಲ್ಲಿ ನ್ಯಾಯ: ಧಾರವಾಡ ಜಿಲ್ಲೆಯ ಕಲಘಟಗಿಯ ಹುಲಗಿನಕೊಪ್ಪದ ರೈತ ಯಲ್ಲಪ್ಪ ಶಿವಕಾಲಪ್ಪ ಚವರಗಿ ಅವರಿಗೆ 61,919 ರೂ.ಬೆಳೆ ವಿಮೆ ಪರಿಹಾರ ಮೊತ್ತವನ್ನು ಯುನಿವರ್ಸಲ್ ಸೊಂಪೊ ಇನ್ಶೂರೆನ್ಸ್ ಕಂಪನಿ ಶೇ. 8ರ ಬಡ್ಡಿಯೊಂದಿಗೆ ನೀಡಬೇಕು ಹಾಗೂ ದಾವೆಯ ಖರ್ಚು ಹಾಗೂ ಪರಿಹಾರ ಎಂದು ಒಟ್ಟು 20 ಸಾವಿರ ರೂ.ಗಳನ್ನು ರೈತನಿಗೆ 30 ದಿನಗಳ ಒಳಗೆ ನೀಡಬೇಕು ಎಂದು ಆದೇಶಿಸಲಾಗಿದೆ.

    ಕಲಘಟಗಿಯಲ್ಲಿ 3 ಎಕರೆ 16 ಗುಂಟೆ ಜಾಗ ಹೊಂದಿರುವ ಯಲ್ಲಪ್ಪ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕಿರವತ್ತಿಯ ಸಿಂಡಿಕೇಟ್ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದರು. 2016ರಲ್ಲಿ ಕಿರವತ್ತಿ ಬ್ಯಾಂಕ್​ನಿಂದ 80 ಸಾವಿರ ರೂ. ಬೆಳೆ ಸಾಲ ಪಡೆದಿದ್ದರು. ಅದಕ್ಕೆ ಕಡ್ಡಾಯವಾಗಿರುವ 1238 ರೂ. ಫಸಲ್ ಬಿಮಾ ಕಂತನ್ನು ಬ್ಯಾಂಕ್ ಅವರ ಖಾತೆಯಿಂದ ಮುರಿದುಕೊಂಡಿತ್ತು. ಆದರೆ, ಮಳೆಯಾಗದ ಕಾರಣ ಬೆಳೆ ಒಣಗಿತ್ತು. ಗ್ರಾಮ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಿದೆ. ಯಲ್ಲಪ್ಪ ಅವರ ಜಮೀನಿನಲ್ಲಿ ಶೇ.97.13ರಷ್ಟು ಬೆಳೆ ಹಾನಿ ಸಂಭವಿಸಿದೆ ಎಂದು ವರದಿಯನ್ನೂ ನೀಡಲಾಗಿತ್ತು. ಆದರೆ, ವಿಮಾ ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಅವರು ನ್ಯಾಯಮಂಡಳಿ ಮೊರೆ ಹೋಗಿದ್ದರು. ವಿಮಾ ಕಂಪನಿ ವಾದ ಮಂಡಿಸಿ, ಬೆಳೆ ವಿಮೆಯನ್ನು ಕರ್ನಾಟಕ ಸರ್ಕಾರದ ಸಂರಕ್ಷಣೆ ವೆಬ್​ಸೈಟ್​ನಲ್ಲಿ ಅಳವಡಿಸಬೇಕು. ಆದರೆ, ಯಲ್ಲಪ್ಪ ಅವರ ಹೆಸರು ಧಾರವಾಡ ಜಿಲ್ಲೆಯ ರೈತರ ಪಟ್ಟಿಯಲ್ಲಿ ಇಲ್ಲದ ಕಾರಣ ಅವರಿಗೆ ಪರಿಹಾರ ನೀಡಿಲ್ಲ ಎಂದು ವಾದಿಸಿತ್ತು. ಆದರೆ, ಅದಕ್ಕೆ ಮನ್ನಣೆ ನೀಡದ ನ್ಯಾಯಮಂಡಳಿ ಅವರು ಸಾಲ ಪಡೆದು, ಇನ್ಶೂರೆನ್ಸ್ ಕಂತು ಪಾವತಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಬ್ಯಾಂಕ್​ನಿಂದ ಆಗಿದ್ದರಿಂದ ಅವರು ಪರಿಹಾರಕ್ಕೆ ಅರ್ಹರು ಎಂದು ತೀರ್ಪು ಪ್ರಕಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts