More

    ಬೆಳೆ ವಿಮೆ ತುಂಬಲು ಎರಡೇ ದಿನ ಬಾಕಿ!

    ಹಾವೇರಿ: ತೋಟಗಾರಿಕೆ ಬೆಳೆಗೆ ವಿಮೆ ಮಾಡಿಸಲು ಸರ್ಕಾರ ಸಾಕಷ್ಟು ಕಾಲಾವಕಾಶ ನೀಡದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಕೆ, ಶುಂಠಿ ಮತ್ತು ಹಸಿಮೆಣಸಿನಕಾಯಿ ಬೆಳೆ ವಿಮೆ ಕಂತು ತುಂಬಲು ಜೂ. 30ಕ್ಕೆ ಕೊನೆಯ ದಿನ ನಿಗದಿಪಡಿಸಲಾಗಿದೆ. ಆದರೆ, ಇದರ ಪ್ರಕಟಣೆ ಹೊರಡಿಸಿದ್ದು ಜೂ. 26ರಂದು. ಅದು ರೈತರಿಗೆ ತಲುಪಿದ್ದು ಜೂ. 27ರಂದು. ಅಂದು ಬ್ಯಾಂಕ್ ರಜೆ ದಿನ. ಜೂ. 28ರಂದು ಭಾನುವಾರ, ಜೂ. 29 ಹಾಗೂ 30 ಈ ಎರಡು ದಿನ ಮಾತ್ರ ವಿಮೆ ಕಂತು ತುಂಬಲು ಅವಕಾಶವಿದೆ. ಇಷ್ಟು ಕಡಿಮೆ ಅವಧಿಯೊಳಗೆ ಹೇಗೆ ವಿಮೆ ಕಂತು ತುಂಬಬೇಕು. ವಿಮೆಗೆ ಹಣ ಹೊಂದಿಸಿ ಅರ್ಜಿ ತುಂಬಿ ಬ್ಯಾಂಕ್​ಗೆ ಹೋಗಲು ಆಗದಂತೆ ಸಮಯ ನಿಗದಿಗೊಳಿಸಿರುವುದು ಸರಿಯಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ವಿಮೆ ಅರ್ಜಿ ತುಂಬಿ ಘೊಷಣಾ ಪತ್ರ ಸಲ್ಲಿಸಲು ರೈತರು ಪಹಣಿ, ಕಂದಾಯ ರಸೀದಿ ಹಾಗೂ ಆಧಾರ್ ಸಂಖ್ಯೆಯನ್ನು ಬ್ಯಾಂಕ್​ಗೆ ಸಲ್ಲಿಸಬೇಕು. ಇವುಗಳನ್ನೆಲ್ಲ ಅಲ್ಪ ಅವಧಿಯಲ್ಲಿ ಹೊಂದಿಸಿಕೊಂಡು ಬ್ಯಾಂಕ್​ಗೆ ಹೋಗುವುದು ಅಸಾಧ್ಯ. ಕರೊನಾ ಹರಡುತ್ತಿರುವ ಈ ಸಮಯದಲ್ಲಿ ಬ್ಯಾಂಕ್​ಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮೆಗೊಳ್ಳಲು ಆಗದು. ಇಂಥ ಸಮಯದಲ್ಲಿ ಸರ್ಕಾರ ಅನೇಕ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿದೆ. ಬೆಳೆ ವಿಮೆ ಕಂತು ತುಂಬಲು ಮಾತ್ರ ಯಾಕಿಷ್ಟು ತರಾತುರಿ ಎಂಬುದು ರೈತರ ಪ್ರಶ್ನೆಯಾಗಿದೆ.

    ಹವಾಮಾನಾಧರಿತ ವಿಮೆ ಯೋಜನೆ: ಹವಾಮಾನಾಧರಿತ ಬೆಳೆ ವಿಮೆ ಯೋಜನೆಯಲ್ಲಿ ರೈತರ ಬೆಳೆ ಹಾನಿಯ ಸಮೀಕ್ಷೆ ನಡೆಯುವುದಿಲ್ಲ. ಆಯಾ ಹಂಗಾಮಿನಲ್ಲಿ ಆಯಾ ಪ್ರದೇಶದ ಹವಾಮಾನ ಆಧರಿಸಿ ವಿಮೆ ನಿಗದಿಗೊಳಿಸಲಾಗುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿಯಾಗಿದ್ದರಿಂದ ಜಿಲ್ಲೆಯನ್ನು ನೆರೆಪೀಡಿತ ಎಂದು ಘೊಷಿಸಲಾಗಿತ್ತು. ಇಂತಹ ಸಮಯದಲ್ಲಿ ಎಲ್ಲ ರೈತರಿಗೂ ವಿಮೆಯ ಲಾಭ ಸಿಗಲಿದೆ. ಹೀಗಾಗಿ ಈ ಬಾರಿ ವಿಮಾ ಕಂಪನಿಯವರು ಸರ್ಕಾರದೊಂದಿಗೆ ಲಾಬಿ ಮಾಡಿ ಬಹಳಷ್ಟು ರೈತರು ವಿಮೆ ಕಂತು ತುಂಬಬಾರದು ಎಂದು ಹೀಗೆ ದಿನಾಂಕ ನಿಗದಿಗೊಳಿಸಿದ್ದಾರೆ. ಸರ್ಕಾರ ವಿಮಾ ಕಂಪನಿಯವರ ಲಾಬಿಗೆ ಮಣಿಯದೆ ಎಲ್ಲ ರೈತರಿಗೂ ವಿಮೆಯ ಪ್ರಯೋಜನ ದೊರಕಿಸಿಕೊಡಲು ಇನ್ನಷ್ಟು ಸಮಯಾವಕಾಶ ಕಲ್ಪಿಸಬೇಕು ಎಂದು ಹಾನಗಲ್ಲ ತಾಲೂಕು ರೈತ ಸಂಘದ ಮಲ್ಲೇಶಪ್ಪ ಪರಪ್ಪನವರ ಒತ್ತಾಯಿಸಿದ್ದಾರೆ.

    ತಾಲೂಕುವಾರು ಬೆಳೆ ನಿಗದಿ: ಬ್ಯಾಡಗಿ, ಹಾನಗಲ್ಲ, ಹಿರೇಕೆರೂರ, ಶಿಗ್ಗಾಂವಿ ತಾಲೂಕುಗಳಲ್ಲಿ ಅಡಕೆ, ಶುಂಠಿ, ಹಸಿಮೆಣಸಿನಕಾಯಿ ಬೆಳೆಗಳಿಗೆ ರೈತರು ವಿಮೆ ತುಂಬಲು ಅವಕಾಶ ಕಲ್ಪಿಸಲಾಗಿದೆ. ಹಾವೇರಿ, ಸವಣೂರ, ರಾಣೆಬೆನ್ನೂರ ತಾಲೂಕುಗಳಲ್ಲಿ ಅಡಕೆ ಹಾಗೂ ಶುಂಠಿಯನ್ನು ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯದೆ ಇರುವುದರಿಂದ ಕೇವಲ ಹಸಿಮೆಣಸಿನಕಾಯಿಗೆ ಮಾತ್ರ ವಿಮೆ ತುಂಬಲು ಅವಕಾಶ ಕಲ್ಪಿಸಲಾಗಿದೆ. ಹಸಿಮೆಣಸಿನಕಾಯಿಗೆ ಪ್ರತಿ ಹೆಕ್ಟೇರ್​ಗೆ ವಿಮಾ ಕಂತು 3,550 ರೂ. ಅಡಕೆಗೆ 6,400, ಶುಂಠಿಗೆ 6,500 ರೂ. ಇದೆ.

    ವಿಮೆ ತುಂಬಲು ನೀಡಿರುವ ಜೂ. 30ರ ಅವಧಿ ವಿಸ್ತರಿಸಲು ರೈತರಿಂದ ಒತ್ತಾಯ ಕೇಳಿಬಂದಿದೆ. ಈ ಕುರಿತು ಮೇಲಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಕೆ, ಶುಂಠಿ ಮತ್ತು ಮೆಣಸಿನಕಾಯಿ ಬೆಳೆವಿಮಾ ಕಂತನ್ನು ರೈತರು ನಿಗದಿತ ಅವಧಿಯಲ್ಲಿ ಪಾವತಿಸಬೇಕು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ವಾಣಿಜ್ಯ, ಪ್ರಾಂತೀಯ ಬ್ಯಾಂಕ್​ಗಳು ಅಥವಾ ಸಾಮಾನ್ಯ ಸೇವಾ ಕೇಂದ್ರ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಸಂರ್ಪಸಬಹುದು.
    | ಎಲ್. ಪ್ರದೀಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ


    ರೈತರು ಸಮಸ್ಯೆಯನ್ನು ಗಮನಕ್ಕೆ ತಂದ ಕೂಡಲೆ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಜಂಟಿ ಕಾರ್ಯದರ್ಶಿ ಡಾ. ಆಶಿಶ್​ಕುಮಾರ ಭೂಟಾನಿ ಅವರಿಗೆ ಪತ್ರ ಬರೆದಿದ್ದು, ವಿಮೆ ತುಂಬಲು ನೀಡಿರುವ ಜೂ. 30ರ ಅವಧಿಯನ್ನು ಇನ್ನೂ 25 ದಿನಗಳ ಅವಧಿಗೆ ವಿಸ್ತರಿಸುವಂತೆ ವಿನಂತಿಸಿದ್ದೇನೆ. ಕರೊನಾ ವೈರಸ್ ಹರಡುತ್ತಿರುವ ಈ ಸಮಯದಲ್ಲಿ ರೈತರು ಒಮ್ಮೆಲೆ ಬ್ಯಾಂಕ್​ಗಳಿಗೆ ಬಂದರೆ ಜನಜಂಗುಳಿಯಾಗುತ್ತದೆ. ಅದನ್ನು ತಪ್ಪಿಸಲು ಹಾಗೂ ಬ್ಯಾಂಕ್​ಗಳು ತ್ರೖೆಮಾಸಿಕ ವ್ಯವಹಾರದ ಕೆಲಸದಲ್ಲಿರುವುದರಿಂದ ವಿಮೆ ಕಂತು ತುಂಬುವ ಅವಧಿ ವಿಸ್ತರಿಸಲು ಸಲಹೆ ನೀಡಿದ್ದಾರೆ. ಈ ಎಲ್ಲ ವಿಷಯವನ್ನು ಪತ್ರದಲ್ಲಿ ತಿಳಿಸಿದ್ದು, ಅವಧಿ ವಿಸ್ತರಣೆಯಾಗುವ ವಿಶ್ವಾಸವಿದೆ.
    | ಶಿವಕುಮಾರ ಉದಾಸಿ, ಸಂಸದರು ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts