More

    ಬೆಳೆ ರಕ್ಷಣೆಯೇ ದೊಡ್ಡ ಸವಾಲು

    ಡಂಬಳ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಕಟಾವಿಗೆ ಬಂದ ಉಳ್ಳಾಗಡ್ಡಿ ಬೆಳೆ ಜಮೀನಿನಲ್ಲೇ ಕೊಳೆಯುತ್ತಿವೆ. ಈ ಮಧ್ಯೆ ಉಳ್ಳಾಗಡ್ಡಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

    ಡಂಬಳ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವದಲ್ಲಿ 2000 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಲಾಗಿದೆ. ಕಟಾವಿಗೆ ಮೊದಲೇ ರೋಗ ಕಾಣಿಸಿಕೊಂಡು ಅರ್ಧ ಬೆಳೆ ನಾಶವಾಗಿದ್ದು ಉಳಿದ ಬೆಳೆ ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಮಳೆಯಿಂದಾಗಿ ಬೆಳೆ ಹೊಲದಲ್ಲೇ ಕೊಳೆಯುವಂತಾಗಿದೆ. ಕೆಲ ರೈತರು ಪ್ಲಾಸ್ಟಿಕ್ ತಾಡಪತ್ರಿಗಳನ್ನು ಹೊದಿಸಿ ಬೆಳೆ ರಕ್ಷಿಸಿಕೊಳ್ಳುತ್ತಿದ್ದಾರೆ. ವಾತಾವರಣದಲ್ಲಿನ ಬದಲಾವಣೆಯಿಂದ ರಾಶಿಯಲ್ಲೇ ಉಳ್ಳಾಗಡ್ಡಿ ಕೊಳೆಯುತ್ತಿವೆ. ಅಳಿದುಳಿದ ಬೆಳೆ ಮಾರಲು ಮುಂದಾದವರಿಗೆ ಬೆಲೆ ಕುಸಿತದ ಬಿಸಿ ತಟ್ಟಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಉಳ್ಳಾಗಡ್ಡಿಗೆ 900 ರಿಂದ 1400 ರೂ. ಇರುವುದರಿಂದ ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬಾರದಂತಾಗಿದೆ.

    ಕಳೆದ ವರ್ಷ ಉಳ್ಳಾಗಡ್ಡಿಗೆ ಬಂಗಾರದ ಬೆಲೆ ಬಂದಿತ್ತು. ಹೀಗಾಗಿ ಈ ಬಾರಿಯೂ ಉತ್ತಮ ಬೆಲೆ ಬರುತ್ತದೆ ಎಂಬ ನಿರೀಕ್ಷೆಯೊಂದಿಗೆ ಡಂಬಳ, ಹಿರೇವಡ್ಡಟ್ಟಿ, ಡೋಣಿ, ಡೋಣಿ ತಾಂಡಾ, ಅತ್ತಿಕಟ್ಟಿ, ಹಾರೋಗೇರಿ, ಕದಾಂಪುರ, ಮೇವುಂಡಿ, ಪೇಠಾಲೂರು, ಜಂತ್ಲಿಶಿರೂರು ಗ್ರಾಮಗಳ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದರು. ಇಳುವರಿ ಕೂಡ ಉತ್ತಮವಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸರ್ಕಾರ ಪ್ರತಿ ಕ್ವಿಂಟಾಲ್ ಉಳ್ಳಾಗಡ್ಡಿಗೆ ಕನಿಷ್ಠ 4 ಸಾವಿರ ರೂ. ದರ ನಿಗದಿ ಮಾಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

    ಬಹುತೇಕ ಉಳ್ಳಾಗಡ್ಡಿ ಬೆಳೆ ರೋಗಕ್ಕೆ ತುತ್ತಾಗಿದೆ. ಮಳೆಯಿಂದಾಗಿ ಜಮೀನಿನಲ್ಲೇ ಕೊಳೆತು ನಾಶವಾಗುತ್ತಿವೆ. ಕಟಾವು ಮಾಡಿ ತಂದ ಉಳ್ಳಾಗಡ್ಡಿಯನ್ನು ರಕ್ಷಣೆ ಮಾಡುವುದೆ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಉಳ್ಳಾಗಡ್ಡಿ ಬೆಳೆ ನಾಶ ಹೊಂದಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.

    | ನಾಗನಗೌಡ ಚಿನ್ನಪ್ಪಗೌಡ ಪೇಠಾಲೂರು ಗ್ರಾಮದ ರೈತ

    ತೇವಾಂಶ ಹೆಚ್ಚಳದಿಂದ ಉಳ್ಳಾಗಡ್ಡಿಗೆ ಕೊಳೆ ರೋಗ ಬಿದ್ದಿದೆ. ಡಂಬಳ, ಡೋಣಿ, ಹಿರೇವಡ್ಡಟ್ಟ, ಜಂತ್ಲಿಶಿರೂರು, ಡೋಣಿ ತಾಂಡ ಭಾಗದ ರೈತರು ಹೆಚ್ಚಾಗಿ ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದಾರೆ. ಮಳೆಯಿಂದಾಗಿ ಉಳ್ಳಾಗಡ್ಡಿ ಬೆಳೆ ನಾಶವಾಗಿದ್ದು ನನ್ನ ಗಮನಕ್ಕೆ ಬಂದಿದೆ. ರೈತರ ಜಮೀನಿಗೆ ಹೋಗಿ ಬೆಳೆ ಪರಿಶೀಲಿಸಲಾಗುತ್ತದೆ.

    | ವೈ. ಎಚ್. ಜಾಲವಾಡಗಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಮುಂಡರಗಿ

    ಎರಡು ಎಕರೆ ಜಮೀನಿನಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದೆ. ಇಳುವರಿ ಕೂಡ ಉತ್ತಮವಾಗಿತ್ತು ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. 20 ಸಾವಿರ ರೂ. ಖರ್ಚು ಮಾಡಿ 4 ಸಲ ಔಷಧ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಇದೀಗ ಕೊಳೆರೋಗ ಬಿದ್ದು ಹೊಲದಲ್ಲೇ ಕೊಳೆಯುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

    | ಖಾಜಾಹುಸೇನ್ ಹೊಸಪೇಟಿ, ಡಂಬಳ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts