More

    ಬೆಳೆ ಕಟಾವು ಪ್ರಯೋಗ ಅಚ್ಚುಕಟ್ಟಾಗಿ ಮಾಡಿ

    ಬೀದರ್: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ೩,೧೧೮ ಬೆಳೆ ಕಟಾವು ಪ್ರಯೋಗ ಹಂಚಿಕೆಯಾಗಿದ್ದು, ಅಚ್ಚುಕಟ್ಟಾಗಿ ಮಾಡಬೇಕು ಎಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಪರ ನಿರ್ದೇಶಕ ಬಸವರಾಜ ಎಸ್. ಸೂಚಿಸಿದ್ದಾರೆ.

    ಬೆಳೆ ಕಟಾವು ಪ್ರಯೋಗ, ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ೨೦೧೬ರಿಂದ ಮೊಬೈಲ್ ಆ್ಯಪ್ ಮೂಲಕ ಬೆಳೆ ಕಟಾವು ಪ್ರಯೋಗ ನಡೆಸಲಾಗುತ್ತಿದೆ ಎಂದರು.

    ವಿವರ ದಾಖಲಿಸುವಾಗ ಸಂಬಂಧಿಸಿದ ಇಲಾಖೆ ಸಿಬ್ಬಂದಿ, ಹೊಲದ ಮಾಲೀಕ, ಬೆಳೆ ವಿಮೆ ಕಂಪನಿ ಸಿಬ್ಬಂದಿ ಹಾಗೂ ಮೇಲ್ವಿಚಾರಕ ಹಾಜರಿರಬೇಕು. ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿದ ಚಿತ್ರದಲ್ಲಿ ಈ ನಾಲ್ವರು ಇರಬೇಕು. ಬೆಳೆ ಕಟಾವು ಪ್ರಯೋಗ ಸರಿಯಾಗಿ ನಡೆಯದಿದ್ದರೆ ರೈತರಿಗೆ ತೊಂದರೆಯಾಗಲಿದೆ. ಈ ಪ್ರಯೋಗವನ್ನು ಹೊರೆ ಎಂದು ಭಾವಿಸದೆ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಕೃಷಿಕರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

    ಬೆಳೆ ಸಮೀಕ್ಷೆ ಸರಿಯಾದ ರೀತಿಯಲ್ಲಿ ಮಾಡಬೇಕು. ಹಿಂದಿನ ಮರ‍್ನಾಲ್ಕು ವರ್ಷ ಬೆಳೆಗಳ ಪ್ರಮಾಣದಲ್ಲಿ ಏರುಪೇರಾದರೆ ಸಂಬAಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ದತ್ತಾಂಶ ಸರಿಪಡಿಸಬೇಕು. ಇಲ್ಲವಾದರೆ ಸರ್ಕಾರದ ಯೋಜನೆಗಳು ಪೋಲಾಗುತ್ತವೆ ಎಂಬ ಭಾವನೆ ಬರುತ್ತದೆ ಎಂದರು.

    ಜಿಲ್ಲಾಧಿಕಾರಿ ಗೋವಿಂದರಡ್ಡಿ ಮಾತನಾಡಿ, ಜಿಲ್ಲೆಯ ಶೇ.೯೫ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ನಮ್ಮ ಜಿಲ್ಲೆ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೂ ಪರಿಹಾರ ಸೂಕ್ತ ರೀತಿಯಲ್ಲಿ ಸಿಗುತ್ತಿಲ್ಲ ಎಂಬ ದೂರುಗಳಿವೆ. ಅದನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

    ಬೆಳೆ ಕಟಾವು ಪ್ರಯೋಗ ಮಾಡುವ ಸಿಬ್ಬಂದಿ ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ವಿಮೆ ಕಂಪನಿಯವರಿಗೆ ಲಾಭ ಮಾಡುವಂತೆ ಕೆಲಸ ಮಾಡುತ್ತಿದ್ದಾರೆ. ದತ್ತಾಂಶ ಸರಿಯಾಗಿ ಅಪ್‌ಲೋಡ್ ಮಾಡುತ್ತಿಲ್ಲ ಎಂಬ ಹಲವಾರು ದೂರುಗಳು ರೈತರಿಂದ ಬರುತ್ತಿವೆ. ಇದರಿಂದ ಮುಕ್ತರಾಗಬೇಕಾದರೆ ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಾಂಖ್ಯಿಕ ಇಲಾಖೆಯಿಂದ ತರಬೇತಿ ನೀಡಲಾಗುವುದು. ವಿಮೆ ಕಂಪನಿ ಸಹ ತಾಲೂಕಿಗೆ ೧೦ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು ಎಂದರು.

    ಬೀದರ್ ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ ಕೋಲಾರ, ತಾಪಂ ಇಒ ಮಾಣಿಕರಾವ್ ಪಾಟೀಲ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ ಯದಲಾಪುರೆ ಇತರರಿದ್ದರು.

    ತಪ್ಪು ಮಾಡಿದರೆ ಕ್ರಮ
    ಬೆಳೆ ಕಟಾವು ಸಮೀಕ್ಷೆ ವೇಳೆ ತಪ್ಪು ಎಸಗಿದರೆ ಅಂಥ ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಗೋವಿಂದರಡ್ಡಿ ಎಚ್ಚರಿಕೆ ನೀಡಿದರು. ಸಮೀಕ್ಷೆ ಮಾಡುವಾಗ ಹೊಲದಲ್ಲಿ ವಿವಿಧ ಬೆಳೆಗಳು ಇದ್ದಾಗ ಕೇವಲ ಒಂದನ್ನು ಪರಿಗಣಿಸದೆ ಎಲ್ಲ ಬೆಳೆಗಳನ್ನು ಗಮನಿಸಬೇಕು. ಸಮೀಕ್ಷೆ ಮಾಡುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts