More

    ಬೆಳೆಗಾರರಿಗೆ ಕಬ್ಬಿನ ಬಾಕಿ ಬಿಲ್ ನೀಡಿ

    ಬೆಳಗಾವಿ: ಸೋಯಾ ಕ್ವಿಂಟಾಲ್‌ಗೆ 9,000 ರೂ. ದರ ನಿಗದಿ, ಕಬ್ಬಿನ ಬಿಲ್ ಬಾಕಿ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ, ಜಿಲ್ಲಾಧಿಕಾರ ಮೂಲಕ ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದರು.

    ಬೈಲಹೊಂಗಲ, ಖಾನಾಪುರ, ಸವದತ್ತಿ ಹಾಗೂ ಕಿತ್ತೂರು ತಾಲೂಕು ವ್ಯಾಪ್ತಿಯಲ್ಲಿ ಸೋಯಾ ಬೆಳೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಸೋಯಾ ಬೆಲೆ 9 ರಿಂದ 6 ಸಾವಿರರೂ.ಗೆ ಇಳಿಕೆಯಾಗಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರ ಕೂಡಲೇ ಕ್ವಿಟಾಂಲ್‌ಗೆ 9,000 ರೂ. ದರ ನಿಗದಿಪಡಿಸಬೇಕು. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಸೋಯಾ ಬಿತ್ತನೆ ಮಾಡಲಾಗಿದೆ. ಮಳೆ ಸೇರಿ ಇನ್ನಿತರ ಕಾರಣಗಳಿಂದ ಕೆಲವೆಡೆ ಬೆಳೆ ಹಾಳಾಗಿದೆ. ರೈತರ ಹಿತ ಕಾಪಾಡುತ್ತೇವೆ ಎನ್ನುವ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.

    ಕಳೆದ ಒಂದು ವಾರದ ಅವಧಿಯಲ್ಲಿ ಭತ್ತದ ದರ ಕ್ವಿಂಟಾಲ್‌ಗೆ ಸರಾಸರಿ 7 ಸಾವಿರ ರೂ. ಇಳಿಕೆಯಾಗಿದೆ. ಕಳೆದ ವರ್ಷ ಕ್ವಿಂಟಾಲ್‌ಗೆ 25 ಸಾವಿರ ರೂ. ವರೆಗೆ ಮಾರಾಟವಾಗಿದ್ದ ಭತ್ತ ಈ ವರ್ಷ 12 ಸಾವಿರ ರೂ.ಗೆ ದರ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೂಡಲೇ ಎಲ್ಲ ಬೆಳೆಗಳಿಗೆ ಸೂಕ್ತ ದರ ನಿಗದಿ ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    2020-21ನೇ ಸಾಲಿನ ಹಂಗಾಮಿನಲ್ಲಿ ಕಬ್ಬು ನುರಿಸಿ 10 ತಿಂಗಳು ಕಳೆಯಿತು. ಆದರೆ, ಇಲ್ಲಿಯವರೆಗೆ ಕಾರ್ಖಾನೆ ಮಾಲೀಕರು ಬಾಕಿ ಬಿಲ್ ನೀಡುತ್ತಿಲ್ಲ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ವ್ಯಾಪ್ತಿಯ 40 ಸಕ್ಕರೆ ಕಾರ್ಖಾನೆ ಗಳಿಂದ ಸುಮಾರು 120 ಕೋಟಿ ರೂ. ಅಧಿಕ ಬಿಲ್ ಬಾಕಿ ಇದೆ. ಸಮಸ್ಯೆ ನಿವಾರಣೆಗೆ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಪದಾಧಿಕಾರಿಗಳು ಕೋರಿದರು.

    ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಮಹಾಂತೇಶ ಕವತ, ಜಿ.ಜಿ.ಕೊಟಗಿ, ಕೆ.ಎಂ.ಪಾಟೀಲ, ಎಂ.ವಿ.ಸಂತ್ರಿ ಸೇರಿದಂತೆ ವಿವಿಧ ಬೆಳೆಗಾರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts