More

    ಬೆಳಗಾವಿ ಪಾಲಿಕೆಯಲ್ಲಿ ಆಪರೇಷನ್ ಹಸ್ತ?

    ಬೆಳಗಾವಿ: ವಿಧಾನ ಪರಿಷತ್, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರುತ್ತಿರುವ ಕಾಂಗ್ರೆಸ್ ನಾಯಕರು ಇದೀಗ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಆಪರೇಷನ್ ಹಸ್ತ’ಕ್ಕೆ ಮುಂದಾಗಿದ್ದಾರೆ. ಪಾಲಿಕೆ ಚುನಾವಣೆ ಮುಗಿದು 4 ತಿಂಗಳು ಕಳೆದರೂ ಮೇಯರ್, ಉಪಮೇಯರ್ ಆಯ್ಕೆಯನ್ನೂ ಮಾಡಿಲ್ಲ. ಗೆದ್ದ ಅಭ್ಯರ್ಥಿಗಳು ಇನ್ನೂ ಸದಸ್ಯತ್ವ ಪ್ರಮಾಣ ವಚನವನ್ನೂ ಸ್ವೀಕರಿಸಿಲ್ಲ. ಇದರಿಂದಾಗಿ ವಾರ್ಡ್‌ಗಳಲ್ಲಿನ ಸಮಸ್ಯೆ ನಿವಾರಿಸಲು ನೂತನ ಸದಸ್ಯರಿಗೆ ಸಾಧ್ಯವೂ ಆಗುತ್ತಿಲ್ಲ.

    ಬಿಜೆಪಿಯ ಪ್ರಾಬಲ್ಯ: ಕಳೆದ ಐದು ದಶಕಗಳ ಬಳಿಕ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಚಿಹ್ನೆ ಅಡಿಯಲ್ಲಿ ಚುನಾವಣೆ ನಡೆದಿತ್ತು. ಲಿತಾಂಶದ ಬಳಿಕ ಬಿಜೆಪಿ 36, ಕಾಂಗ್ರೆಸ್ 10, ಎಐಎಂಐಎಂ 1, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್), ಪಕ್ಷೇತರರು ಸೇರಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಲಿತಾಂಶ ಬಂದು ತಿಂಗಳುಗಳೇ ಉರುಳಿದರೂ ಮೇಯರ್, ಉಪಮೇಯರ್ ಆಯ್ಕೆ ನಡೆದಿಲ್ಲ. ಹೀಗಾಗಿ ಸದಸ್ಯರು ಇದ್ದೂ ಇಲ್ಲದಂತಾಗಿದೆ.

    ಸದಸ್ಯರ ಅಸಮಾಧಾನ: ಶಾಸಕರು, ಸಚಿವರುಗಳೂ ಸಹ ಜನರ ಸಮಸ್ಯೆ ನಿವಾರಿಸಲು ಸ್ಪಂದಿಸದ ಹಿನ್ನೆಲೆಯಲ್ಲಿ ಪಾಲಿಕೆಯ ಬಿಜೆಪಿಯ ಸದಸ್ಯರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಂತಹವರನ್ನು ಸಂಪರ್ಕಿಸಿ ಪಕ್ಷಕ್ಕೆ ಕರೆ ತರಲು ಸ್ಥಳೀಯ ಕಾಂಗ್ರೆಸ್ ನಾಯಕರು ಕಸರತ್ತು ಆರಂಭಿಸಿದ್ದಾರೆ. ಬಿಜೆಪಿಯ ಕೇವಲ ಒಂದು ಸದಸ್ಯ ಕಾಂಗ್ರೆಸ್‌ಗೆ ಸೇರ್ಪಡೆಯಾದರೂ ಮೇಯರ್, ಉಪಮೇಯರ್ ಚುನಾವಣೆ ಒಳಗಾಗಿ ಬಿಜೆಪಿಯ ಇನ್ನಷ್ಟು ಸದಸ್ಯರು ಕಾಂಗ್ರೆಸ್ ಸೇರಿದರೂ ಅಚ್ಚರಿಯಿಲ್ಲ.

    ಸತೀಶ ತಾಲೀಮು: 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕಾರ್ಯತಂತ್ರ ಹೆಣೆಯುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಈಗಿನಿಂದಲೇ ತಾಲೀಮು ಆರಂಭಿಸಿದ್ದಾರೆ. ಯಾವುದೇ ಸಂದರ್ಭದಲ್ಲಾದರೂ ‘ಆಪರೇಷನ್ ಹಸ್ತ’ಕ್ಕೆ ಚಾಲನೆ ದೊರೆಯಲಿದೆ ಎಂದು ಸ್ಥಳೀಯ ಕಾಂಗ್ರೆಸ್ ಮೂಲಗಳೇ ಸ್ಪಷ್ಟಪಡಿಸಿವೆ.

    ಅಭಿವೃದ್ಧಿ ಕೆಲಸಗಳಿಗೆ ಶಾಸಕರಿಂದ ಚಾಲನೆ: ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ವಸತಿ, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಕೋಟ್ಯಂತರ ರೂ. ಅನುದಾನ ಬರುತ್ತಿದೆ. ಆದರೆ, ಮೇಯರ್ ಆಯ್ಕೆಯಾಗದಿರುವ ಹಿನ್ನೆಲೆಯಲ್ಲಿ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ ಅನುದಾನ ಬಳಕೆಗೆ ಸದಸ್ಯರಿಗೆ ಅಧಿಕಾರ ಇಲ್ಲದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ವಾರ್ಡ್‌ಗಳ ಅಭಿವೃದ್ಧಿಗೆ ಸಾಕಷ್ಟು ಪ್ರಮಾಣದಲ್ಲಿ ಭರವಸೆ ನೀಡಿ ಆಯ್ಕೆಯಾಗಿದ್ದೇವೆ. ನಮ್ಮ ಮೇಲೆ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ನಮ್ಮ ವಾರ್ಡ್‌ಗಳಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಚಾಲನೆ ನೀಡುತ್ತಿದ್ದಾರೆ. ನಾವೆಲ್ಲ ಆಯ್ಕೆಯಾಗಿದ್ದರೂ ಕೂಡ ಸಾಮಾನ್ಯ ಜನರಂತೆ ಇರಬೇಕಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕೆಲ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

    ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ಕುರಿತಂತೆ ಚರ್ಚಿಸಲು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗುತ್ತಿದ್ದೇನೆ. ವಾರದ ಒಳಗಾಗಿ ಸದಸ್ಯರ ಪ್ರಮಾಣ ವಚನ ಹಾಗೂ ಮೇಯರ್ ಆಯ್ಕೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಬಿಜೆಪಿಯ ಯಾವುದೇ ಸದಸ್ಯರು ಕಾಂಗ್ರೆಸ್ ಸರ್ಪೇಡೆಯಾಗುತ್ತಿಲ್ಲ. ಪಕ್ಷೇತರರೂ ಸಹ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರೇ ಬಿಜೆಪಿಯತ್ತ ಮುಖ ಮಾಡಿದ್ದಾರೆ.
    | ಅಭಯ ಪಾಟೀಲ. ಬಿಜೆಪಿ ಶಾಸಕ, ಬೆಳಗಾವಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts