More

    ಬೆಳಗದ ಸಂಚಾರ ಸಿಗ್ನಲ್ ದೀಪ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ನಗರದಲ್ಲಿ ಸಂಚಾರ ಸೂಚನಾ (ಸಿಗ್ನಲ್ ಲೈಟ್) ದೀಪಗಳು ಬಂದ್ ಆಗಿ ಹಲವು ವರ್ಷಗಳೇ ಉರುಳಿವೆ. ಆದರೆ, ಸಂಬಂಧಿಸಿದವರ ನಿರ್ಲಕ್ಷ್ಯಂದ ಈವರೆಗೂ ಅವುಗಳ ದುರಸ್ತಿ ಕಾರ್ಯವಾಗಿಲ್ಲ. ಕಾರಣ ವಾಹನ ಸವಾರರು ತೀವ್ರ ತೊಂದರೆ ಪಡುವಂತಾಗಿದೆ.

    ಸಿಗ್ನಲ್ ದೀಪಗಳು ಕಾರ್ಯನಿರ್ವಹಿಸದಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಪ್ರದೇಶದಲ್ಲಿ ವಾಹನ ಸವಾರರು ಬೇಕಾಬಿಟ್ಟಿಯಾಗಿ ಚಲಾಯಿಸುತ್ತಿದ್ದಾರೆ. ಇಲ್ಲಿನ ಹಲಗೇರಿ ರಸ್ತೆ, ಅಂಚೆ ಕಚೇರಿ ವೃತ್ತದಲ್ಲಿ ಅಳವಡಿಸಿರುವ ದೀಪಗಳು ಉರಿಯದೆ ಹಲವು ವರ್ಷಗಳಾಗಿವೆ.

    ನಗರದ ಪಿ.ಬಿ. ರಸ್ತೆ, ಬಿಳಿಗಿರಿರಂಗನತಿಟ್ಟು ರಾಜ್ಯ ಹೆದ್ದಾರಿ, ಮೈಲಾರ, ದೇವರಗುಡ್ಡ, ಶಿವಮೊಗ್ಗ, ಬಳ್ಳಾರಿ ಸೇರಿ ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳಿವೆ. ಮೆಕ್ಕೆಜೋಳ ಹಾಗೂ ಹತ್ತಿ ವ್ಯಾಪಾರ-ವಹಿವಾಟು ಅಧಿಕವಾಗಿರುವುದರಿಂದ ನಿತ್ಯವೂ ಸಾವಿರಾರು ಲಾರಿ, ಬಸ್ ಸೇರಿ ಇತರ ಗೂಡ್ಸ್ ವಾಹನಗಳು ಬಂದು ಹೋಗುತ್ತವೆ. ಅಲ್ಲದೆ, ಬೈಕ್, ಕಾರುಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

    ಇದರಿಂದ ನಗರದಲ್ಲಿ ನಿತ್ಯವೂ ಹಲಗೇರಿ, ಅಂಚೆ ಕಚೇರಿ, ತಹಸೀಲ್ದಾರ್ ಕಚೇರಿ ವೃತ್ತದ ಬಳಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಈ ಭಾಗದಲ್ಲಿ ಸರ್ಕಾರಿ, ಖಾಸಗಿ ಶಾಲಾ-ಕಾಲೇಜ್​ಗಳಿರುವ ಕಾರಣ ವಿದ್ಯಾರ್ಥಿಗಳ ಓಡಾಟವೂ ಹೆಚ್ಚಿರುತ್ತದೆ. ಇದರಿಂದ ಆಗಾಗ ಅಪಘಾತ ಪ್ರಕರಣಗಳು ಅಧಿಕವಾಗತೊಡಗಿವೆ. ಸಿಗ್ನಲ್ ದೀಪಗಳನ್ನು ದುರಸ್ತಿ ಪಡಿಸಬೇಕು ಎಂದು ಸಂಚಾರ ಠಾಣೆ ಪೊಲೀಸರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಸಂಚಾರ ಠಾಣೆ ಪೊಲೀಸರು ಸೂಕ್ತ ಕ್ರಮ ಕೈಗೊಂಡು ವಾಹನಗಳ ದಟ್ಟಣೆ ನಿಯಂತ್ರಿಸಬೇಕು. ಹಾಳಾಗಿರುವ ಸಿಗ್ನಲ್ ದೀಪಗಳನ್ನು ದುರಸ್ತಿಪಡಿಸಬೇಕು. ತಾತ್ಕಾಲಿಕವಾಗಿ ಎಲ್ಲ ವೃತ್ತಗಳಲ್ಲಿ ಸಿಬ್ಬಂದಿ ನೇಮಕ ಮಾಡಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

    ಎಲ್ಲೆಂದರಲ್ಲಿ ವಾಹನ ನಿಲುಗಡೆ: ಪ್ರತಿ ಭಾನುವಾರ ನಗರದಲ್ಲಿ ಸಂತೆ ಜರುಗುತ್ತದೆ. ಆದರೆ, ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.. ಇಲ್ಲಿನ ದುರ್ಗಾ ಮಾರ್ಕೆಟ್, ಚಕಮಕಿ ದೇವಸ್ಥಾನ, ನೆಹರು ಮಾರ್ಕೆಟ್, ಎಂ.ಜಿ. ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.

    ನಗರದಲ್ಲಿನ ಸಂಚಾರ ಸಿಗ್ನಲ್ ದೀಪಗಳು ಬಂದ್ ಆಗಿರುವುದರಿಂದ ಸವಾರರು ಮನಬಂದಂತೆ ವಾಹನ ಓಡಿಸುತ್ತಿದ್ದಾರೆ. ಇದರಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.

    | ಮಹೇಶ ಎಸ್., ಸ್ಥಳೀಯ ಬೈಕ್ ಸವಾರ

    ಕೇಬಲ್ ಹಾಗೂ ಯಂತ್ರ ಹಾಳಾದ ಕಾರಣ ಸಂಚಾರ ಸೂಚನೆ ದೀಪಗಳು ಬಂದ್ ಆಗಿದೆ. ಅವುಗಳ ದುರಸ್ತಿ ಸೇರಿ 5 ಕಡೆಗಳಲ್ಲಿ ಹೊಸದಾಗಿ ಸಿಗ್ನಲ್ ದೀಪ ಅಳವಡಿಸುವ ಕುರಿತು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದಷ್ಟು ಬೇಗನೆ ಕಾಮಗಾರಿ ಮಾಡಿಸಲಾಗುವುದು.

    | ಟಿ.ವಿ. ಸುರೇಶ, ಡಿವೈಎಸ್ಪಿ, ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts