More

    ಬೆಲೆಯುಳ್ಳ ಮತ್ಸ್ಯ ತಳಿ ಸಾಕಿ ಅಧಿಕ ಲಾಭ ಗಳಿಸಿ  – ಪ್ರದೀಪ್ ದೊಡ್ಡಮನಿ ಹೇಳಿಕೆ -ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ

    ದಾವಣಗೆರೆ: ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಲೆಬಾಳುವ ಮೀನಿನ ತಳಿಗಳನ್ನು ಆಯ್ಕೆ ಮಾಡಿಕೊಂಡು ಸಾಕಾಣಿಕೆ ಮಾಡಿದಲ್ಲಿ ಅಧಿಕ ಲಾಭ ಗಳಿಸಬಹುದು ಎಂದು ಗಂಗಾವತಿ ಕೃಷಿ ಮಹಾವಿದ್ಯಾಲಯದ ಮೀನುಗಾರಿಕೆ ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ದೊಡ್ಡಮನಿ ಹೇಳಿದರು.
    ದಾವಣಗೆರೆ ಮೀನುಗಾರಿಕೆ ಇಲಾಖೆ ಹಾಗೂ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಚನ್ನಗಿರಿ ತಾಲೂಕು ಶಾಂತಿಸಾಗರದ ಮೀನು ಮರಿ ಪಾಲನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಂತ್ರಿಕ ಉಪನ್ಯಾಸ ನೀಡಿ, ಹೆಚ್ಚು ಬೆಲೆಯುಳ್ಳ ಮುರೆಲ್, ಸೀ ಬಾಸ್ ಮೊದಲಾದ ತಳಿಗಳನ್ನು ಕೆಲ ರೈತರು ಸಾಕಾಣಿಕೆ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ ಎಂದರು.
    ಭಾರತ ದೇಶ, ಮೀನು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದು ಮೀನು ಉತ್ಪಾದನೆ ಹೆಚ್ಚಿಸಲು ವಿಪುಲವಾದ ಅವಕಾಶಗಳಿವೆ. ಇದಕ್ಕಾಗಿ ಮೀನು ಕೃಷಿಕರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಎನ್. ದೇವರಾಜ, ವೈಜ್ಞಾನಿಕವಾಗಿ ಮೀನು ಸಾಕಾಣಿಕೆ ಮಾಡಿದರೆ ಅಡಕೆ ಬೆಳೆಯಷ್ಟು ಲಾಭ ತೆಗೆಯಬಹುದು ಎಂದರು.
    ಉತ್ತಮ ಮೀನು ಮರಿಗಳ ಆಯ್ಕೆ ಮಾಡುವುದು, ವೈಜ್ಞಾನಿಕ ಕ್ರಮಗಳ ಪ್ರಕಾರ ಆಹಾರ ನೀಡುವುದು ಮತ್ತು ಉತ್ತಮ ಮಾರುಕಟ್ಟೆ ಕಲ್ಪಿಸಿಕೊಳ್ಳುವುದು ಮೀನುಗಾರಿಕೆಯಲ್ಲಿ ಲಾಭ ಕಂಡುಕೊಳ್ಳಲು ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಅಣ್ಣಪ್ಪ ಸ್ವಾಮಿ ಮಾತನಾಡಿ ಮೀನುಗಾರಿಕೆ ಇಲಾಖೆಯಿಂದ ರೈತರಿಗೆ ಅನೆಕ ಸೌಲಭ್ಯಗಳಿವೆ. ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯಡಿ ಮೀನುಕೃಷಿ ಕೊಳ ನಿರ್ಮಾಣಕ್ಕಾಗಿ ಸಹಾಯಧನ, ತಿಚಕ್ರವಾಹನ ವಿತರಿಸಲಾಗುವುದು. ಮೀನುಗಾರರು, ಮೀನು ಕೃಷಿಕರು ಮೀನುಗಾರರ ಸಾಮೂಹಿಕ ಅಪಘಾತ ವಿಮಾ ಯೋಜನೆಯಡಿ ನೋಂದಾಯಿಸಿ ಕೊಳ್ಳಬೇಕೆಂದು ತಿಳಿಸಿದರು.
    ವಿಶೇಷ ಘಟಕ ಯೋಜನೆ, ಮತ್ತು ಗಿರಿಜನ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಗೆ ಸಲಕರಣೆ ಹಾಗೂ ದೋಣಿಗಳನ್ನು ವಿತರಿಸಲಾಗುವುದು. ಮೀನು ಮಾರಾಟಗಾರರಿಗೆ ಶೇ.25ರ ಸಹಾಯಧನದಡಿ ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಮೀನುಗಾರಿಕಾ ಸಹಾಯಕ ನಿರ್ದೇಶಕ ಡಾ.ಡಿ. ಉಮೇಶ್ ರಾಷ್ಟ್ರೀಯ ಮೀನು ಕೃಷಿಕರ ದಿನದ ಪ್ರಾಮುಖ್ಯತೆ ವಿವರಿಸಿದರು.
    ಪ್ರಗತಿಪರ ಮೀನುಗಾರಿಕಾ ಕೃಷಿಕರಾದ ಬಸವರಾಜಪ್ಪ ಕೂಲಂಬಿ, ಮೈಲಾರಲಿಂಗ ಮೀನುಗಾರಿಕಾ ಸಂಘದ ಅಧ್ಯಕ್ಷ ಬಲರಾಮ ನಾಯ್ಕ, ದಾವಣಗೆರೆ ಮೀನುಗಾರಿಕೆ ಅಮೃತ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಕೆ. ಸಿ ಸುರೇಶ್ ಇತರರಿದ್ದರು. ಡಾ.ಟಿ.ಜಿ.ಅವಿನಾಶ್ ಸ್ವಾಗತಿಸಿದರು. ಜೆ.ರಘುರಾಜ ಕಾರ್ಯಕ್ರಮ ನಿರೂಪಿಸಿದರು. ಜೆ.ಮಲ್ಲೇಶ್ ನಾಯ್ಕ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts