More

    ಬೆನ್ನಿಗೆ ನಿಂತ ಸರ್ ಸಾಹೇಬ!

    ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ

    ಸಂವಿಧಾನ ಶಿಲ್ಪಿ, ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಧಾರವಾಡದ ನಾಯಕ ಸರ್ ಸಾಹೇಬ ಸಿದ್ದಪ್ಪ ಕಂಬಳಿ ಸದಾ ಬೆನ್ನೆಲುಬಾಗಿ ನಿಂತಿದ್ದರು. ಯರವಾಡ ಒಪ್ಪಂದವಿರಲಿ, ಸಂವಿಧಾನ ರಚನೆಯ ವಿಚಾರದಲ್ಲಾಗಿರಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಸರ್ ಸಿದ್ದಪ್ಪ ಕಂಬಳಿ ಅವರದ್ದೊಂದು ಅಭಿಪ್ರಾಯ ಪಡೆಯುತ್ತಿದ್ದರು ಎನ್ನುವುದು ಗಮನಾರ್ಹ.

    ಸಂವಿಧಾನ ರಚನೆ ಹಾಗೂ ಗಣರಾಜ್ಯ ನಿರ್ವಣದಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರು ಅಂಬೇಡ್ಕರ್ ಅವರಿಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದರು ಎಂಬುದು ಸ್ಮರಣಾರ್ಹ. ಸಿದ್ದಪ್ಪ ಕಂಬಳಿ ಅವರು ಚಿನ್ನದ ಪದಕದೊಂದಿಗೆ ಕಾನೂನು ಪದವಿಯನ್ನು ಮುಂಬೈನಲ್ಲಿ ಪೂರೈಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಮುಂಬೈ ಪ್ರಾಂತದ ಸರ್ಕಾರದಲ್ಲಿ ಏಳು ಮಹತ್ವದ ಖಾತೆಗಳನ್ನು ಏಕ ಕಾಲಕ್ಕೆ ನಿರ್ವಹಿಸಿದ ಶ್ರೇಯ ಹೊಂದಿದವರು. ಸ್ವತಃ ಮಹಾತ್ಮ ಗಾಂಧಿ ಅವರು ಭೇಟಿಯಾಗಿ ಕಾಂಗ್ರೆಸ್​ಗೆ ಆಹ್ವಾನಿಸಿದರೂ ಕಂಬಳಿ ಅವರು ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು. ಕಾಂಗ್ರೆಸ್​ನಿಂದ ದೂರ ಇರುವ ವಿಷಯದಲ್ಲಿ ಕಂಬಳಿ ಹಾಗೂ ಅಂಬೇಡ್ಕರ್ ಅವರ ನಿಲುವು ಏಕರೀತಿಯದ್ದು ಎಂಬುದು ಉಲ್ಲೇಖನೀಯ. ಈ ರೀತಿ ಸಾಕಷ್ಟು ವಿಷಯಗಳಲ್ಲಿ ಸಮಾನ ಮನಸ್ಕರಾಗಿದ್ದ ಕಾರಣ ಇಬ್ಬರ ನಡುವೆ ಅನ್ಯೋನ್ಯತೆಯಿತ್ತು.

    ಎಲ್​ಎಲ್​ಬಿ ಮುಗಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಂದಿನ ಮುಂಬೈ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದ ಸರ್ ಸಿದ್ದಪ್ಪ ಕಂಬಳಿ ಅವರನ್ನು ಕಾಣಲು ಅವರ ಕಚೇರಿಗೆ ಹೋಗುತ್ತಾರೆ. ಜವಾನನ ಮುಖೇನ ತಾವು ಭೇಟಿಗೆ ಬಂದಿರುವ ವಿಷಯವನ್ನು ಕಂಬಳಿ ಅವರಿಗೆ ಮುಟ್ಟಿಸುತ್ತಾರೆ. ತಕ್ಷಣ ಅಂಬೇಡ್ಕರ್ ಅವರನ್ನು ಬರಮಾಡಿಕೊಂಡ ಸಿದ್ದಪ್ಪ ಕಂಬಳಿ, ‘ ನಾನಿರುವುದು ಮತ್ತು ಈ ಕಚೇರಿ ಇರುವುದು ನಿಮ್ಮಂಥವರ ಏಳ್ಗೆಗೋಸ್ಕರ, ನೀವು ಕೇಳಿ ಒಳ ಬರುವುದಲ್ಲ, ನನಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಿಮಗೂ ಇದೆ’ ಎನ್ನುವ ಮಾತು ಹೇಳುತ್ತಾರೆ. ಈ ಮಾತೇ ಅಂಬೇಡ್ಕರ್ ಮತ್ತು ಕಂಬಳಿ ಅವರ ನಡುವೆ ಅನ್ಯೋನ್ಯತೆಯ ನಂಟು ಬೆಸೆಯುವಂತೆ ಮಾಡುತ್ತದೆ. ಇದೇ ವೇಳೆ ಪುಣೆಯ ಕಾನೂನು ಕಾಲೇಜ್​ನಲ್ಲಿ ಉಪನ್ಯಾಸಕ ಹುದ್ದೆಯ ಅವಕಾಶ ಮಾಡಿಕೊಡುವಂತೆ ಅಂಬೇಡ್ಕರ್ ಅವರು ಕಂಬಳಿ ಅವರಿಗೆ ಕೇಳುತ್ತಾರೆ. ಉಪನ್ಯಾಸಕನ ಬದಲಾಗಿ ಹಿರಿದಾದ ಪ್ರಾಧ್ಯಾಪಕ ಹುದ್ದೆಯ ಅವಕಾಶ ನೀಡಿ ಸಿದ್ದಪ್ಪ ಕಂಬಳಿ ಅವರು ಆದೇಶ ಪತ್ರ ರವಾನಿಸುತ್ತಾರೆ.

    ಅಂಬೇಡ್ಕರ್ ಮತ್ತು ಕಂಬಳಿ ಅವರ ಅನ್ಯೋನ್ಯತೆ ಓರೆಗೆ ಹಚ್ಚಿದ್ದು ಯರವಾಡ ಒಪ್ಪಂದ. ದಲಿತರಿಗೆ ಚುನಾವಣೆಯಲ್ಲಿ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು 1932ರಲ್ಲಿ ಅಂಬೇಡ್ಕರ್ ಹೋರಾಟ ನಡೆಸುತ್ತಾರೆ. ಇದಕ್ಕೆ ಸ್ವದೇಶಿ ನಾಯಕರಿಂದಲೇ ವಿರೋಧ ವ್ಯಕ್ತವಾಗುತ್ತದೆ. ಆಗ ಅಂಬೇಡ್ಕರ್ ಬೆನ್ನಿಗೆ ನಿಂತಿದ್ದು ಸರ್ ಸಿದ್ದಪ್ಪ ಕಂಬಳಿ. ಈ ಎರಡೂ ಸಂಗತಿಗಳು ಅಂಬೇಡ್ಕರ್ ಮತ್ತು ಕಂಬಳಿ ಅವರ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುತ್ತದೆ. ‘ಡಾ. ಅಂಬೇಡ್ಕರ್ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದಾಗ, ಸರ್ ಸಿದ್ದಪ್ಪ ಕಂಬಳಿ ಅವರಿಂದ ಪೂರಕ ಸಲಹೆಗಳನ್ನು ಪಡೆಯುತ್ತಿದ್ದರು’ ಎಂದು ಸ್ಮರಿಸುತ್ತಾರೆ ಹುಬ್ಬಳ್ಳಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀರಾಮ ಟೆಂಬೆ.

    ಧಾರವಾಡ ಮತ್ತು ಬಾಬಾಸಾಹೇಬ
    ತನ್ನ ಮಗನಿಗೆ ದಲಿತ ಎನ್ನುವ ಕಾರಣಕ್ಕೆ ಶಾಲೆಗೆ ಪ್ರವೇಶ ನೀಡುತ್ತಿಲ್ಲ ಎಂದು ಧಾರವಾಡದ ವ್ಯಕ್ತಿಯೊಬ್ಬರು ದೂರಲು ಮುಂಬೈಗೆ ಕಾಲ್ನಡಿಗೆಯಲ್ಲಿ ಹೋಗಿದ್ದರು. ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳನ್ನು ಭೇಟಿ ಮಾಡಿದಾಗ, ಪ್ರವೇಶ ನೀಡುವಂತೆ ಅಧಿಕಾರಿಗಳು ಆದೇಶಿಸುತ್ತಾರೆ. ಈ ವಿಷಯ ಅಂಬೇಡ್ಕರ್ ಅವರ ಗಮನ ಸೆಳೆಯುತ್ತದೆ. 1927ರಲ್ಲಿ ಧಾರವಾಡಕ್ಕೆ ಬಂದ ಅವರು ಆ ವ್ಯಕ್ತಿಯ ಭೇಟಿಗಾಗಿ ಪ್ರಯತ್ನಿಸುತ್ತಾರೆ. ಆದರೆ, ಭೇಟಿ ಸಾಧ್ಯವಾಗಲಿಲ್ಲ. ಬಳಿಕ ಇಲ್ಲಿನ ಬುದ್ಧ ರಕ್ಕಿತಾ ರೆಸಿಡೆನ್ಶಿಯಲ್ ಸ್ಕೂಲ್ ಆವರಣದಲ್ಲಿಯೇ ಅಂಬೇಡ್ಕರ್ ಅವರು ಮನೆಯೊಂದರಲ್ಲಿ ಪತ್ನಿ ರಮಾಬಾಯಿಯೊಂದಿಗೆ ಕೆಲ ತಿಂಗಳು ಇದ್ದರು. ಅವರು ಇಲ್ಲಿನ ಶಿವಾಜಿ ಸರ್ಕಲ್ ಬಳಿ ಮಚಿಗಾರ ಸಹಕಾರಿ ಉತ್ಪಾದಕ ಸಂಘ ಹುಟ್ಟು ಹಾಕುತ್ತಾರೆ. ಇದು ದೇಶದ ಮೊದಲ ದಲಿತ ಕೋ-ಆಪ್​ರೇಟಿವ್ ಸೊಸೈಟಿ ಆಗಿತ್ತು ಎಂಬುದು ಉಲ್ಲೇಖಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts