More

    ಬೆಣ್ಣಿ ಹಳ್ಳದುದ್ದಕ್ಕೂ ನೀರು ನಿಲ್ಲಿಸಿ…

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಶಾಲ್ಮಲಾ ನದಿ ಗುಪ್ತಗಾಮಿನಿ. ಇದರ ಹೊರತಾಗಿ ಯಾವುದೇ ನದಿಗಳು ಇಲ್ಲಿಲ್ಲ. ಆದರೂ ಪ್ರತಿ ವರ್ಷ ಮಳೆಗಾಲದಲ್ಲಿ ಒಂದಲ್ಲ ಒಂದು ರೀತಿ ನೆರೆ ಹಾವಳಿ ಎದುರಿಸುವುದು ಜಿಲ್ಲೆಗೆ ತಪ್ಪುತ್ತಿಲ್ಲ. ವಿಶೇಷವಾಗಿ ಬೆಣ್ಣಿ ಹಳ್ಳ ಮಳೆಗಾಲದಲ್ಲಿ ನೂರಾರು ಹಳ್ಳಿಗಳನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಜಮೀನುಗಳನ್ನು ಹಾಳು ಮಾಡುತ್ತದೆ.

    ದಶಕಗಳ ಈ ಸಮಸ್ಯೆಗೆ ಪರಿಹಾರೋಪಾಯಗಳ ಪ್ರಸ್ತಾವನೆಗಳು ಸರ್ಕಾರದ ಮುಂದಿದ್ದರೂ ಯಾವುದೂ ಜಾರಿಯಾಗದೇ ಇರುವುದರಿಂದ ಪ್ರತಿ ಬಾರಿ ಅತಿವೃಷ್ಟಿಯಾದಾಗ ಜನ ತೊಂದರೆ ಅನುಭವಿಸುವುದು ನಿಶ್ಚಿತವಾಗಿದೆ.

    ಬೆಣ್ಣಿ ಹಳ್ಳದ ನೆರೆ ಹಾವಳಿ ತಪ್ಪಿಸಲು ಜೆ.ಡಿ. ಬಡಿಗೇರ ಎಂಬುವವರು ಹೊಸ ಪ್ರಸ್ತಾವನೆಯೊಂದನ್ನು ಮುಂದಿಟ್ಟಿದ್ದಾರೆ. ಅದುವೇ ಹಳ್ಳವನ್ನು ನದಿಯಾಗಿ ಪರಿವರ್ತಿಸಿ ನೀರಿನ ಸದುಪಯೋಗ ಪಡಿಸಿಕೊಳ್ಳುವುದು. ಇದು ಕಡಿಮೆ ಹಣದಲ್ಲಿ ಆಗಬಹುದಾದ ಕೆಲಸವಾಗಿದೆ.

    ಯೋಜನೆಯಲ್ಲಿ ಏನಿದೆ?:

    ಧಾರವಾಡ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ನೆರೆ ಹಾವಳಿ ತಪ್ಪಿಸಲು ಹಲವು ಉಪಾಯಗಳು ಹಾಗೂ ಕ್ರಮಗಳನ್ನು ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದೆ. ಮುಖ್ಯವಾಗಿ ಹಳ್ಳದ ಅಗಲ ಹಾಗೂ ಆಳ ಹೆಚ್ಚಿಸುವುದು.

    ಹಳ್ಳದ ಪ್ರಾರಂಭದಿಂದ ಅಗಲ ಇರುವ ಆಯಾ ಸ್ಥಳದಲ್ಲಿ ಮಧ್ಯಭಾಗ ಗುರುತಿಸಿ ಎಡ ಮತ್ತು ಬಲಭಾಗದ ಸುಮಾರು 100 ಅಡಿ ಅಗಲ ಬರುವ ರೀತಿ ಎರಡೂ ದಂಡೆಗಳ ನಡುವಿನ ಅಂತರ ಸುಮಾರು 200 ಅಡಿ ಹಾಗೂ ಆಳ 5ರಿಂದ 10 ಅಡಿ ಹೆಚ್ಚಿಸಬೇಕು. ಇದರಿಂದ ನೀರು ನಿಲ್ಲುವ ವಿಸ್ತಾರ ಹೆಚ್ಚುವುದಲ್ಲದೇ ರಭಸ ಕಡಿಮೆಯಾಗುತ್ತದೆ.

    ಬೇರೆ ಹಳ್ಳ ಬಂದು ಸೇರುವ ಜಾಗದಲ್ಲಿ ನೀರಿನ ಹರಿವು ಹೆಚ್ಚಾಗುವುದರಿಂದ ಅದರ ಈಗಿನ ಅಳತೆಗಿಂತ 200 ಅಡಿ ಅಗಲ ಮತ್ತು ಆಳ ಹೆಚ್ಚು ಮಾಡಬೇಕು. ಅಗಲೀಕರಣ ಸಂದರ್ಭ ಉಂಟಾದ ಮಣ್ಣನ್ನು ದಂಡೆಯುದ್ದಕ್ಕೂ ತಡೆಗೋಡೆ ಮತ್ತು ರಸ್ತೆಗಾಗಿ ಬಳಸಬೇಕು. ರಸ್ತೆಯ ಮೇಲೆ ಕೆಂಪು ಮಣ್ಣು ಹಾಕಿ ಮೆಟಲಿಂಗ್ ಮಾಡಿ ಗಟ್ಟಿ ರಸ್ತೆಯಾಗಿ ಬಳಸಬಹುದಾಗಿದೆ.

    ದಂಡೆಯುದ್ದಕ್ಕೂ ಎರಡೂ ಕಡೆ ಸಸಿಗಳನ್ನು ನೆಡಬೇಕು. ಹಳ್ಳದ ಅಗಲೀಕರಣ ಮಾಡುವಲ್ಲಿ ಸ್ವಲ್ಪ ಹೊಲಗಳು ಹೋದರೆ ಅವರಿಗೆ ಉಚಿತವಾಗಿ ನೀರು ಹಾಯಿಸಿಕೊಳ್ಳಲು ಅನುಕೂಲ ಮಾಡಬೇಕು. ಪೂರ್ತಿ ಹೊಲ ಹೋದರೆ ಅವರಿಗೆ ಸರ್ಕಾರದಿಂದ ಪರಿಹಾರ ಧನ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು.

    ಹಳ್ಳದುದ್ದಕ್ಕೂ ಸುಮಾರು 2 ಕಿ.ಮೀ. ಅಂತರದಲ್ಲಿ ಭದ್ರವಾದ ಅಡ್ಡಗೋಡೆ (ಬಂಡಿಂಗ್) ಕಟ್ಟಬೇಕು. ಅದರ ಜೊತೆ ಅಡ್ಡ ಗೋಡೆಯ ಮೇಲೆ ತ್ಯಾಜ್ಯ ಮತ್ತು ಕಸ ಕಡ್ಡಿ ಹೋಗದಂತೆ ಜಾಳಿಗೆ ರೂಪದಲ್ಲಿ ವ್ಯವಸ್ಥೆ ಮಾಡಬೇಕು.

    ಅಡ್ಡಗೋಡೆಯ ಅಗಲ ಹೆಚ್ಚಿಸಿದರೆ ರೈತರು, ಗ್ರಾಮಸ್ಥರು ಒಂದು ದಂಡೆಯಿಂದ ಮತ್ತೊಂದು ದಂಡೆಗೆ ಹೋಗಿ ಬರಲು ಅನುಕೂಲವಾಗುವುದು. ಹಳ್ಳದ ಪ್ರಾರಂಭದಿಂದ ಹಿಡಿದು ಕೊನೆಯ ವರೆಗೂ ಈ ಕ್ರಮ ಅನುಸರಿಸಬೇಕು.

    ಡ್ಯಾಂ ಕಟ್ಟಬೇಕು

    ಡ್ಯಾಂ ಕಟ್ಟುವ ಅವಶ್ಯಕತೆ ಇದ್ದಲ್ಲಿ ಒಂದು ಕಡೆ ಗುಡ್ಡ ಇನ್ನೊಂದು ಬದಿ ಮಾನವ ನಿರ್ವಿುತ ಗೋಡೆ ನಿರ್ಮಾಣ ಮಾಡಬೇಕು. ಈ ಹಳ್ಳಕ್ಕೆ ಮೂರ್ನಾಲ್ಕು ಕಡೆ ಸಣ್ಣ ಅಥವಾ ದೊಡ್ಡ ಡ್ಯಾಂ ಕಟ್ಟುವ ಯೋಗ್ಯ ಸ್ಥಳಗಳಿವೆ. ನವಲಗುಂದ ಬಳಿ ದೊಡ್ಡ ಡ್ಯಾಂ ಕಟ್ಟಬಹುದು. ಡ್ಯಾಂ ಕಟ್ಟಿದರೆ ಬಹುತೇಕ ನೆರೆ ಹಾವಳಿ ತಪ್ಪಿಸಿದಂತಾಗುತ್ತದೆ.

    ಹಳ್ಳಕ್ಕೆ ಗೋಡೆ ಕಟ್ಟುವುದರಿಂದ ಬೇಸಿಗೆಯಲ್ಲೂ ರೈತರಿಗೆ ನೀರು ಸಿಗುತ್ತದೆ. ಅಕ್ಕಪಕ್ಕದ ಗ್ರಾಮಸ್ಥರಿಗೂ ಅನುಕೂಲ. ತರಕಾರಿ, ಹಣ್ಣು ಹಂಪಲು ಬೆಳೆಯಬಹುದು. ಸುಮಾರು ನೂರು ಗ್ರಾಮಗಳಿಗೆ ಇದು ನೆರವಾಗಲಿದೆ.

    ಮಾದರಿ ಯೋಜನೆ

    ಬೆಣ್ಣಿ ಹಳ್ಳದ ಈ ಮಾದರಿಯನ್ನು ಎಲ್ಲ ಕಡೆ ಬಳಸಬಹುದು. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ಪ್ರಸ್ತಾವನೆ ತರಲಾಗಿದೆ. ದೇಶದ ಹಲವು ಕಡೆಗಳಲ್ಲಿ ಇಂತಹ ಹಳ್ಳ, ನದಿಗಳಿಂದ ನೆರೆ ಉಂಟಾಗಿ ಪ್ರಾಣ, ಆಸ್ತಿ ಹಾನಿಯಾಗುತ್ತದೆ. ಅದನ್ನು ತಪ್ಪಿಸಲು ಈ ಉಪಕ್ರಮಗಳನ್ನು ಅನುಸರಿಸಬಹುದು.

    ತಾವು ಸಲ್ಲಿಸಿದ ಯೋಜನಾ ವರದಿಯ ಪ್ರಮುಖ ಅಂಶಗಳನ್ನು ನೀರಾವರಿ ಇಲಾಖೆ ತಂತ್ರಜ್ಞರಿಗೆ ನೀಡಿ ಅಂದಾಜು ಪತ್ರಿಕೆ ತಯಾರಿಸಿ ಯೋಜನೆ ಕಾರ್ಯರೂಪಕ್ಕೆ ತರಬೇಕು ಎಂದು ಜೆ.ಡಿ. ಬಡಿಗೇರ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts