More

    ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಸಿ

    ಮುಂಡರಗಿ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಪಟ್ಟಣದಲ್ಲಿ ಗೋವಿನಜೋಳ ಖರೀದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ಮಾ. 5ರಂದು ತಹಸೀಲ್ದಾರ್ ಕಚೇರಿ ಮುಂದೆ ರೈತರೆಲ್ಲ ಸೇರಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರಗತಿಪರ ರೈತ ಕೆ.ಎ. ದೇಸಾಯಿ ತಿಳಿಸಿದರು.

    ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ರೈತರು ಅಪಾರ ಪ್ರಮಾಣದಲ್ಲಿ ಗೋವಿನಜೋಳ ಬೆಳೆದಿದ್ದಾರೆ. ಸೂಕ್ತ ಬೆಲೆ ದೊರೆಯದೆ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆದು ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

    2018ರ ಫೆಬ್ರವರಿ, ಮಾರ್ಚ್ ಅವಧಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 2800 ರೂಪಾಯಿಗೆ ಕ್ವಿಂಟಾಲ್ ಗೋವಿನಜೋಳವನ್ನು ಖರೀದಿಸಿತ್ತು. ಆದರೆ, ಪ್ರಸ್ತುತ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಠ 1355 ರೂಪಾಯಿ ಹಾಗೂ ಗರಿಷ್ಠ 1609 ರೂಪಾಯಿಗೆ ಕ್ವಿಂಟಾಲ್ ಗೋವಿನಜೋಳ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ ಎಂದರು.

    ಧಾರವಾಡದ ಕೆಎಂಎಫ್​ನವರು ಕ್ವಿಂಟಾಲ್ ಗೋವಿನಜೋಳಕ್ಕೆ 2200 ರೂ. ನಂತೆ ಖರೀದಿಸುತ್ತಿದ್ದಾರೆ. ಆದರೆ, ಅವರು ನೇರವಾಗಿ ರೈತರಿಂದ ಕ್ವಿಂಟಾಲ್ ಗೋವಿನಜೋಳವನ್ನು ಖರೀದಿಸದೇ ಟೆಂಡರ್ ಮೂಲಕ ಖರೀದಿದಾರರಿಂದ ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ವಂಚನೆ ಆಗುವುದಲ್ಲದೆ ಸರ್ಕಾರಕ್ಕೆ ನಷ್ಟವಾಗುತ್ತಿದ್ದು, ಅವರು ನೇರವಾಗಿ ರೈತರಿಂದ ಗೋವಿನಜೋಳ ಖರೀದಿಸುವಂತೆ ಆದೇಶ ನೀಡಬೇಕು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿಗೊಳಗಾದ ಬೆಳೆಗೆ ಸರ್ಕಾರ ಬೆಳೆ ಹಾನಿ ಪರಿಹಾರ ನೀಡಬೇಕು. ಸರ್ಕಾರ ಪ್ರತಿ ಕ್ವಿಂಟಾಲ್ ಗೋವಿನಜೋಳಕ್ಕೆ ಕನಿಷ್ಠ 3000 ರೂಪಾಯಿ ನೀಡಿ ಖರೀದಿಸಬೇಕು ಎಂದು ಒತ್ತಾಯಿಸಿದರು.

    ರೈತರಾದ ಗೂರಪ್ಪ ಇಟಗಿ, ಮುದಿಯಪ್ಪ ತಿಪ್ಪಣ್ಣವರ, ಗುರುನಾಥ ಲಕ್ಕುಂಡಿ, ಈರಪ್ಪ ಚವಡಿ, ಬಸವನಗೌಡ ಗೌಡರ, ಹನುಮಂತಪ್ಪ ಹೊಸಮನಿ, ಅಂದಪ್ಪ ತಿಪ್ಪಣ್ಣವರ, ನೀಲಪ್ಪ ಡೋಣಿ, ಶರಣಪ್ಪ ಹೊಸಮನಿ, ಗ್ಯಾನಪ್ಪ ಹೊಸಮನಿ, ಸಿದ್ದಪ್ಪ ಇಟಗಿ, ಉಮೇಶ ಲಕ್ಕುಂಡಿ, ನಿಂಗನಗೌಡ ಗೌಡರ ಉಪಸ್ಥಿತರಿದ್ದರು.

    ಸುದ್ದಿಗೋಷ್ಠಿ ನಂತರ ರೈತರು ತಹಸೀಲ್ದಾರ್ ಕಚೇರಿಗೆ ತೆರಳಿ ಈ ಕುರಿತು ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts