More

    ಬೂತ್ ಗಟ್ಟಿಯಾದ್ರೆ ಚುನಾವಣೆ ಗೆದ್ದಂತೆ: ಬಿ.ಎಸ್.ಯಡಿಯೂರಪ್ಪ

    ಶಿಕಾರಿಪುರ: ಪ್ರತಿ ಬೂತ್‌ಗಳು ಗಟ್ಟಿಯಾದರೆ ನಾವು ಚುನಾವಣೆ ಗೆದ್ದಂತೆ. ಆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ ಅವರು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೂತ್ ವಿಜಯ ಅಭಿಯಾನ ರೂಪಿಸಿದ್ದಾರೆ. ಬೂತ್‌ಗಳು ಪಕ್ಷದ ಅಡಿಪಾಯ, ಅವು ಸದೃಢವಾಗುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಪ್ರಯತ್ನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
    ಶನಿವಾರ ಪಟ್ಟಣದ ಮಾಳೇರ ಕೇರಿಯಲ್ಲಿ ಬಿಜೆಪಿ ಕಾರ್ಯಕರ್ತೆ ರಾಜಲಕ್ಷ್ಮೀ ಮಂಜುನಾಥ್ ಅವರ ಮನೆಯಲ್ಲಿ ಬಿಜೆಪಿ ಬಾವುಟ ಹಾರಿಸಿ ಬೂತ್ ವಿಜಯ ಅಭಿಯಾನದಲ್ಲಿ ಮಾತನಾಡಿದ ಅವರು, ಪ್ರತಿ ಬೂತ್‌ನಲ್ಲಿ ಬರುವ ಮನೆಗಳು ನಮ್ಮದಾಗಬೇಕು. ಸರ್ಕಾರದ ಯೋಜನೆಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳು ಪ್ರತಿ ಮನೆಗೂ ತಲುಪವಂತಾಗಬೇಕು ಎಂದರು.
    ಜಗತ್ತೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿಕೊಂಡಿದೆ. ಅಂತಹ ಶ್ರೇಷ್ಠ ನಾಯಕನ ನಾಯಕತ್ವದಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಅವಿರತ ಮತ್ತು ಅವಿಶ್ರಾಂತ ಜನಪರ ಕಾರ್ಯ ಮಾಡುವ ಅಪೂರ್ವ ಜನನಾಯಕ ಅವರು ಎಂದು ಬಣ್ಣಿಸಿದರು.
    ನಮಗೆಲ್ಲ ಪ್ರಧಾನಿ ನರೇಂದ್ರ ಮೋದಿ ಮಾದರಿ ನಾಯಕ. ಅವರ ಸಮರ್ಥವಾದ ಆಡಳಿತದಲ್ಲಿ ರೂಪುಗೊಂಡ ಜನಪರವಾದ, ಬಡವರ, ಹಿಂದುಳಿದವರ ಪರವಾದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವಾಗಬೇಕು. ಜನಮನ ಗೆಲ್ಲುವ ಕೆಲಸವಾಗಬೇಕು ಎಂದು ಹೇಳಿದರು.
    ಬಿಜೆಪಿ ಪ್ರಬಲವಾಗಿ ರೂಪುಗೊಳ್ಳುವುದು ಸಂಘಟನೆ ಬಲದಿಂದ. ಸಂಘಟನೆ ಗಟ್ಟಿಯಾಗುವುದು ಕಾರ್ಯಕರ್ತರ ಬಲದಿಂದ. ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷದ ಆಸ್ತಿ. ಪಕ್ಷ ನಮಗೆ ತಾಯಿ ಇದ್ದ ಹಾಗೆ. ಪಕ್ಷದ ಆದೇಶ ಬಂದಾಗ ನಾವು ಮುನ್ನುಗ್ಗಬೇಕು, ಪಕ್ಷವನ್ನು ಕಟ್ಟಿ ಬೆಳೆಸಿದ ಸಾಕಷ್ಟು ಹಿರಿಯರಿದ್ದಾರೆ. ನಾವು ಅವರ ಸಲಹೆ, ಮಾರ್ಗದರ್ಶನ ಪಡೆಯಬೇಕು. ಪಕ್ಷದಿಂದ ದೂರ ಇರುವ ಕಾರ್ಯಕರ್ತರನ್ನು ಮತ್ತೆ ಪಕ್ಷದ ಅಂಗಳಕ್ಕೆ ಕರೆತರಬೇಕು ಎಂದು ಸಲಹೆ ಮಾಡಿದರು.
    ಮತ್ತೆ ಅಧಿಕಾರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ರಿಂದ 150 ಸ್ಥಾನ ಪಡೆದು ಮತ್ತೆ ಅಧಿಕಾರ ಹಿಡಿಯುವುದು ನಿರ್ಶಚಿತ. ಪ್ರತಿಪಕ್ಷಗಳ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಈಗಲೇ ಕಚ್ಚಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರುವುದು ಹಗಲುಗನಸು. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ ಎಂದರು.
    ಯುವಶಕ್ತಿ ಬಳಸಿಕೊಳ್ಳಬೇಕು:
    ರಾಷ್ಟ್ರೀಯ ನಾಯಕರ ಚಿಂತನೆಯಂತೆ ಹಳೆ ಬೇರು ಹೊಸ ಚಿಗುರು ಸೇರಿದಂತೆ ನಮ್ಮ ಹಿರಿಯ ಕಾರ್ಯಕರ್ತರ ಜತೆಯಲ್ಲಿ ಹೆಚ್ಚು ಯವಶಕ್ತಿಯನ್ನು ಬಳಸಿಕೊಳ್ಳಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಪ್ರತಿ ಬೂತ್ ಮಟ್ಟದಲ್ಲಿನ ಅಧ್ಯಕ್ಷರ ಸಂಘಟನೆಯ ಬಲವೇ ನಿಜವಾದ ಬಲ. ಬೂತ್‌ಗಳಿಗೆ ಶಕ್ತಿ ತುಂಬುವ ಕೆಲಸ ಮೊದಲು ಆಗಬೇಕು. ಸಂಘಟಿತ ಪ್ರಯತ್ನದಿಂದ ನಮಗೆ ಯಶಸ್ಸು ಖಂಡಿತಾ ದೊರೆಯುತ್ತದೆ. ಯಾವ ಕಾರಣಕ್ಕೂ ಸಂಘಟನೆಯಿಂದ ವಿಮುಖರಾಗಬಾರದು ಎಂದರು.
    ನಮಗೆ ನೀಡಿದ ಟಾರ್ಗೆಟ್ 150ನ್ನು ಮುಂದಿಟ್ಟುಕೊಂಡು ನಾವು ಕೆಲಸ ಮಾಡಬೇಕು. ಅದನ್ನು ತಲುಪುವವರೆಗೆ ನಾವು ಹಿಂದೆ ಸರಿಯಬಾರದು. ರಾಜ್ಯದಲ್ಲಿ ಬಿಜೆಪಿಗೆ ತನ್ನದೇ ಆದ ಬಲವಿದೆ ಮತ್ತು ನೆಲೆಯಿದೆ ಎಂದು ಹೇಳಿದರು. ನಿಮ್ಮ ನಾಯಕ ಯಡಿಯೂರಪ್ಪ ಅವರ ಸಮರ್ಥವಾದ ಆಡಳಿತದಲ್ಲಿ ಶಿಕಾರಿಪುರ ತಾಲೂಕು ಸಮಗ್ರ ಅಭಿವೃದ್ಧಿ ಕಂಡಿದೆ. ಇಡೀ ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಬೇಕೆಂಬ ಅವರ ಕನಸು ನನಸಾಗುತ್ತಿದೆ, ಅವರಿಗೆ ಜನಹಿತ ಕಾರ್ಯ ಮಾಡುವುದೆಂದರೆ ಯುದ್ಧೋನ್ಮಾದ ಇದ್ದಂತೆ. ನಮಗೆಲ್ಲ ಯಡಿಯೂರಪ್ಪ ಅವರು ಒಬ್ಬ ಜನ ಹೋರಾಟದ ಜನನಾಯಕರಾಗಿದ್ದಾರೆ. ಪಕ್ಷದ ಪ್ರತಿ ಕಾರ್ಯಕರ್ತನೂ ಪಕ್ಷಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ನೀವು ಪಕ್ಷವನ್ನು ಬೆಳೆಸಿದರೆ ಪಕ್ಷ ನಿಮ್ಮನ್ನು ಬೆಳೆಸುತ್ತದೆ ಎಂದು ಹೇಳಿದರು.
    ಬಲಭಾಗದ ಪ್ರಸಾದ ನೀಡಿದ ಹುಚ್ಚಪ್ಪ: ವಿವಿಧ ಕಾರ್ಯಕ್ರಮಗಳ ನಿಮಿತ್ತ ಶನಿವಾರ ಶಿಕಾರಿಪುರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಂದಿನಂತೆ ಕ್ಷೇತ್ರಾಧಿಪತಿ ಸ್ರೀ ಹುಚ್ಚರಾಯಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸುವಾಗ ಸ್ವಾಮಿಯ ಬಲಭಾಗದ ಪ್ರಸಾದ ಆಯಿತು. ಅತ್ಯಂತ ಶ್ರೇಷ್ಠ ಮತ್ತು ಸಿದ್ಧಿದಾಯಕ, ಇಷ್ಟಾರ್ಥ ಸಿದ್ಧಿಸುವ ಪ್ರಸಾದವೆಂದೇ ಬಲಭಾಗದ ಪ್ರಸಾದವನ್ನು ಪರಿಗಣಿಸಲಾಗುತ್ತದೆ ಎನ್ನುತ್ತಾರೆ ಅರ್ಚಕ ಉಮೇಶ್ ಭಟ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts