More

    ಬುದ್ಧ ವಿಹಾರಕ್ಕೆ 10 ಎಕರೆ ಭೂಮಿ ಕೊಡಿ

    ತರೀಕೆರೆ: ತಾಲೂಕಿನ ನಂದಿಹೊಸಳ್ಳಿ ಗ್ರಾಮದ ಸ.ನಂ.34ರಲ್ಲಿ ಬುದ್ಧ ವಿಹಾರ ಸ್ಥಾಪಿಸಲು 10 ಎಕರೆ ಭೂಮಿ ಮಂಜೂರು ಮಾಡಬೇಕು ಎಂದು ಡಿಎಸ್​ಎಸ್ ರಾಜ್ಯ ಸಂಘಟನಾ ಸಂಚಾಲಕ ಎನ್.ವೆಂಕಟೇಶ್ ಆಗ್ರಹಿಸಿದರು. ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಸ್.ಸಿ.ಪೂರ್ಣಿಮಾ, ನಂದಿಹೊಸಳ್ಳಿ ಅಥವಾ ದ್ಯಾಂಪುರದ ಸ.ನಂ.13ರಲ್ಲಿ ಸ್ಥಳ ಪರಿಶೀಲಿಸಿ ಬುದ್ಧ ವಿಹಾರ ನಿರ್ವಣಕ್ಕೆ ಅಗತ್ಯ ಭೂಮಿ ಮಂಜೂರು ಮಾಡಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

    ದಲಿತ ಮುಖಂಡ ಎಚ್.ಬಾಲರಾಜ್ ಮಾತನಾಡಿ, ಹಾದಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಮಲ್ಲೇನಹಳ್ಳಿಯಲ್ಲಿ 50ಕ್ಕೂ ಹೆಚ್ಚು ದಲಿತ ಕುಟುಂಬಗಳು ಏಳೆಂಟು ದಶಕಗಳಿಂದ ವಾಸಿಸುತ್ತಿದ್ದರೂ ನಿವೇಶನದ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು. ಎಸ್.ಸಿ.ಪೂರ್ಣಿಮಾ ಪ್ರತಿಕ್ರಿಯಿಸಿ, ಸಭೆಯ ಅನುಪಾಲನಾ ವರದಿಯಲ್ಲಿ ಎಚ್.ಮಲ್ಲೇನಹಳ್ಳಿ ಗ್ರಾಮದ ದಲಿತ ನಿವಾಸಿಗಳಿಗೆ ನಿವೇಶನದ ಹಕ್ಕುಪತ್ರ ನೀಡಿರುವ ಕುರಿತು ಪ್ರಸ್ತಾಪಿಸಲಾಗಿದೆ. ಸಂಬಂಧಪಟ್ಟವರೊಂದಿಗೆ ಪತ್ರ ವ್ಯವಹಾರ ನಡೆಸಿ ಹಕ್ಕುಪತ್ರ ಕೊಡಿಸಲಾಗುವುದು ಎಂದರು.

    ಡಿಎಸ್​ಎಸ್ ರಾಜ್ಯ ಸಂಘಟನಾ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ತಾಲೂಕಿನ ವಿವಿಧ ಕಡೆಗಳಲ್ಲಿ ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನದಲ್ಲಿ ನೂರಾರು ಕೆರೆಗಳಿದ್ದು, ಬಹುತೇಕ ಕೆರೆಯಂಗಳವನ್ನು ಅತಿಕ್ರಮಿಸಲಾಗಿದೆ. ಕೆರೆಯ ಜಾಗ ತೆರವುಗೊಳಿಸಿ ಜಲಮೂಲ ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು. ತಾಲೂಕಿನಲ್ಲಿರುವ 224 ಕೆರೆಗಳ ಪೈಕಿ 104 ಕೆರೆ ಒತ್ತುವರಿಯಾಗಿರುವ ಮಾಹಿತಿ ಇದೆ. ಶೀಘ್ರದಲ್ಲೇ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts