More

    ಬೀದರ್​ ಜಿಲ್ಲೆಯಲ್ಲಿ ನಿಟ್ಟುಸಿರು ಹಂತದಲ್ಲಿ ಸಾವಿನ ಬರೆ

    ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಕಳೆದ 28ರಂದು ಮೃತಪಟ್ಟಿದ್ದ ನಗರದ ಓಲ್ಡ್ ಸಿಟಿ (ಹಳೇ ಭಾಗದ) ಗೋಲೇಖಾನ ಬಡಾವಣೆಯ 82 ವರ್ಷದ ವೃದ್ಧನಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾಮಾರಿಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದರೆ, ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.
    ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಜನರು ನಿಟ್ಟುಸಿರು ಬಿಡುತ್ತಿರುವ ಸಂದರ್ಭದಲ್ಲೇ ವೃದ್ಧ ಅಸುನೀಗಿರುವುದು ತಲ್ಲಣ ಮೂಡಿಸಿದೆ. ಈತನ ಸಾವಿನಿಂದಾಗಿ ಓಲ್ಡ್ ಸಿಟಿ ಮತ್ತೆ ಸೋಂಕುಪೀಡಿತ ಪ್ರದೇಶ (ಕಂಟೈನ್ಮೆಂಟ್ ಏರಿಯಾ) ಆಗಿ ಮುಂದುವರಿಯಲಿದ್ದು, ಈ ಭಾಗದ ಜನರ ಸಂಕಷ್ಟಕ್ಕೆ ಇನ್ನೂ ಪರಿಹಾರ ಸಿಗದಂತಾಗಿದೆ.
    ಹೃದಯಾಘಾತದಿಂದ ಅಸ್ವಸ್ಥಗೊಂಡಿದ್ದ ವೃದ್ಧನಿಗೆ 27ರಂದು ರಾತ್ರಿ ಬ್ರಿಮ್ಸ್ ಆಸ್ಪತ್ರೆಗೆ ತರಲಾಗಿತ್ತು. ಹಳೇ ಭಾಗದಿಂದ ಬಂದಿದ್ದ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಬ್ರಿಮ್ಸ್ ಹೊಸ ಕಟ್ಟಡದ ನೆಲಮಹಡಿಯಲ್ಲಿರುವ ಬಫರ್ ವಾರ್ಡ್​ ವಿಶೇಷ ಕೋಣೆಯಲ್ಲಿ ದಾಖಲಿಸಲಾಗಿತ್ತು. ಇಸಿಜಿ, ಎಕ್ಸ್ರೇ ಮಾಡಿ ಆಕ್ಸಿಜನ್ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಈ ಮಧ್ಯೆ 28ರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ರಕ್ತ, ಕಫದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ವರದಿಯಲ್ಲಿ ಕರೊನಾ ಪಾಸಿಟಿವ್ ಬಂದಿದೆ.
    ಕರೊನಾದಿಂದ ಬೀದರ್ನಲ್ಲಿ ಮೊದಲ ಬಲಿ ಕುರಿತು ಶನಿವಾರವೇ ವಿಜಯವಾಣಿ ಸುದ್ದಿ ಪ್ರಕಟಿಸಿತ್ತು. ಆರೋಗ್ಯ ಇಲಾಖೆ ಮಧ್ಯಾಹ್ನ ಜಾರಿಗೊಳಿಸಿದ ಮೀಡಿಯಾ ಬುಲೆಟಿನ್ನಲ್ಲಿ ಈ ವಿಷಯಕ್ಕೆ ಮುದ್ರೆಯೊತ್ತಿದೆ. ಈತನ ಪಾಸಿಟಿವ್ ವರದಿ ಬೆನ್ನಲ್ಲೇ ಬ್ರಿಮ್ಸ್​ನಲ್ಲಿ ಚಿಕಿತ್ಸೆ ಕೊಟ್ಟ ಸಿಬ್ಬಂದಿಯಲ್ಲೂ ತಳಮಳ ಸೃಷ್ಟಿಯಾಗಿದೆ. ಯಾರ್ಯಾರು ಈತನ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಪತ್ತೆ ಆರಂಭಿಸಲಾಗಿದೆ. ಕುಟುಂಬದವರು ಸೇರಿ ನೇರ ಸಂಪರ್ಕಕ್ಕೆ ಬಂದವರ ಶೋಧ ಪ್ರಾರಂಭಿಸಿದ್ದು, ಸದ್ಯಕ್ಕೆ 50ಕ್ಕೂ ಹೆಚ್ಚು ಜನರನ್ನು ಗುರುತಿಸಿ ರಕ್ತ, ಕಫ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ. ಸಂಪರ್ಕಕ್ಕೆ ಬಂದ ಸಂಬಂಧಿಕರನ್ನು ಹಳೇ ಭಾಗದ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
    ಮೂಲಗಳ ಪ್ರಕಾರ ಇಬ್ಬರು ವೈದ್ಯರು, ಇಬ್ಬರು ಇಂಟರ್ನಶಿಪ್​ ವೈದ್ಯರು, 4 ನರ್ಸ್​, ಟೆಕ್ನಿಶಿಯನ್ ಸೇರಿ 16 ಬ್ರಿಮ್ಸ್ ಸಿಬ್ಬಂದಿ ಪ್ರೈಮರಿ ಸಂಪರ್ಕಕ್ಕೆ ಬಂದವರೆಂದು ಗುರುತಿಸಿ 14 ದಿನ ಹೋಮ್ ಕ್ವಾರಂಟೈನ್ಗೆ ಸೂಚಿಸಲಾಗಿದೆ. ಇವರೆಲ್ಲರ ರಕ್ತ, ಕಫದ ಮಾದರಿ ಪರೀಕ್ಷೆಗೆ ಕಳಿಸಲಾಗಿದೆ. ಬಫರ್ ವಾರ್ಡ್​ನಲ್ಲಿ ವೃದ್ಧನಿಗೆ ದಾಖಲಿಸಿರುವ ಕಾರಣ ಹೆಚ್ಚು ಸಿಬ್ಬಂದಿ ನೇರ ಸಂಪರ್ಕಕ್ಕೆ ಬಂದಿಲ್ಲ ಎನ್ನುತ್ತಿರುವುದು ಸಮಾಧಾನದ ಸಂಗತಿ ಎನಿಸಿದೆ. ವೃದ್ಧನಿಗೆ ದಾಖಲಿಸಿದ್ದ 4 ಹಾಸಿಗೆಯ ಬಫರ್ ವಾರ್ಡ್​ ಸ್ಟಿರಿಲೈಜ್ ಸಹ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts