More

    ಬೀಜ ಮೊಳಕೆಯೊಡೆಯದ ಬಗ್ಗೆ ಮಾಹಿತಿ ನೀಡಿ

    ಹುಬ್ಬಳ್ಳಿ: ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಯಾಗಿರುವ ಬಿತ್ತನೆ ಬೀಜಗಳು ಕೆಲವೆಡೆ ಹುಟ್ಟದೇ ಇರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

    ವಿಶೇಷವಾಗಿ ಸೋಯಾಬೀನ್ ಬೀಜಗಳು ಮೊಳಕೆಯೊಡೆಯದೇ ತಾಲೂಕಿನ ಕೆಲ ರೈತರು ಕಂಗಾಲಾಗಿದ್ದಾರೆ. ಅವರು ತಾವು ಬೀಜ ಕೊಂಡೊಯ್ದ ರೈತ ಸಂಪರ್ಕ ಕೇಂದ್ರಗಳಿಗೆ ಮಾಹಿತಿ ನೀಡುತ್ತಿದ್ದಾರೆ. ರೈತರ ಮಾಹಿತಿ ಆಧರಿಸಿ ಧಾರವಾಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಉಪನಿರ್ದೇಶಕ ಮಂಜುನಾಥ ಅಂತರವಳ್ಳಿ, ಹುಬ್ಬಳ್ಳಿ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡ್ರ ಕ್ಷೇತ್ರ ವೀಕ್ಷಣೆ ನಡೆಸಿದ್ದಾರೆ. ಅಲ್ಲದೆ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಸಿಬ್ಬಂದಿ ಕೂಡ ಸಮೀಪದ ಹೊಲಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸುತ್ತಿದ್ದಾರೆ. ಹೊಲಗಳಲ್ಲಿನ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಜಿಯೋ ಟ್ಯಾಗ್ ಸಮೇತ ಫೋಟೋ ಅಪ್​ಲೋಡ್ ಮಾಡುತ್ತಿದ್ದಾರೆ.

    ಬೀಜ ಹುಟ್ಟದಿರುವ ಬಗ್ಗೆ ಇಲಾಖೆಗೆ ಮಾಹಿತಿ ರವಾನಿಸುತ್ತಿದ್ದಾರೆ. ತಾಲೂಕಿನ ಅಮರಗೋಳ, ತಾರಿಹಾಳ, ರೇವಡಿಹಾಳ, ಗೋಕುಲ ಮುಂತಾದೆಡೆ ಬುಧವಾರ ಸಂಚರಿಸಿದ ಅಧಿಕಾರಿಗಳು ಬೆಳೆ ವೀಕ್ಷಣೆ ಮಾಡಿದರು. ಹುಬ್ಬಳ್ಳಿ ತಾಲೂಕಿನಲ್ಲಿ ಹೆಚ್ಚಾಗಿ ಸೋಯಾಬೀನ್ ಬಿತ್ತನೆಯಾಗಿದೆ.

    ರೈತ ಸಂಪರ್ಕ ಕೇಂದ್ರಗಳ ಮೂಲಕ ಒಯ್ದಿರುವ ಸೋಯಾಬೀನ್ ಬೀಜಗಳು ಕೆಲವೆಡೆ ಸರಿಯಾಗಿ ಹುಟ್ಟಿಲ್ಲ. ರೈತರು ಯಾವುದೇ ಆತಂಕಕ್ಕೆ ಒಳಗಾಗದೇ ಇಲಾಖೆಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ವೀಕ್ಷಣೆ ಮಾಡಿ ವರದಿ ನೀಡಲಿದ್ದಾರೆ. ಪರಿಹಾರದ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡ್ರ ತಿಳಿಸಿದ್ದಾರೆ.

    ಪ್ರತಿಶತ 65ಕ್ಕೆ ನಿಗದಿ: ಕೇಂದ್ರ ಸರ್ಕಾರ ಸೋಯಾಬೀನ್ ಬೀಜದ ಮೊಳಕೆ ಪ್ರಮಾಣವನ್ನು ಶೇ. 70ರಿಂದ 65ಕ್ಕೆ ನಿಗದಿ ಮಾಡಿದೆ. ಹಾಗಾಗಿ ಪ್ರತಿ ಎಕರೆಗೆ ಈ ಮೊದಲಿಗಿಂತಲೂ ಹೆಚ್ಚು ಬೀಜ ಬಿತ್ತನೆ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಸೋಯಾಬೀನ್ ಬಿತ್ತನೆಯಾಗಿರುವ ಹೊಲಗಳಲ್ಲಿ ಮೊಳಕೆ ಪ್ರಮಾಣ ಕಡಿಮೆ ಇದ್ದರೆ ಆ ಹೊಲದಲ್ಲಿ ಆ ಬೆಳೆ ಮುರಿದು ಬೇರೆ ಬೆಳೆ ಬಿತ್ತನೆ ಮಾಡಲು ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಆದಷ್ಟು ಬೇಗ ರೈತರು ಮಾಹಿತಿ ನೀಡಿದರೆ ಮುಂದೆ ಸರ್ಕಾರ ನಿಗದಿ ಮಾಡುವ ಪರಿಹಾರ ಪಡೆಯಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts