More

    ಬಿಸಿಯೂಟ ನೌಕರರ ಪ್ರತಿಭಟನೆ

    ಹುಣಸೂರು: ಹಿಂದಿನ ಸರ್ಕಾರದ ನಿರ್ಣಯದಂತೆ ಬಿಸಿಯೂಟ ನೌಕರರಿಗೆ ಬಜೆಟ್‌ನಲ್ಲಿ ಹೆಚ್ಚಳ ಮಾಡಿದ್ದ 1000 ರೂ. ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.


    ಸಂಘದ ತಾಲೂಕು ಅಧ್ಯಕ್ಷೆ ಮಂಜುಳಾ ಮಾತನಾಡಿ, 60 ವರ್ಷ ವಯಸ್ಸಾಗಿದೆ ಎಂದು ನಿವೃತ್ತಿಯ ಹೆಸರಿನಲ್ಲಿ ರಾಜ್ಯದಲ್ಲಿ ಏನೂ ಪರಿಹಾರ ನೀಡದೆ ಸುಮಾರು 6000 ನೌಕರರನ್ನು ಕೆಲಸದಿಂದ ಕೈ ಬಿಟ್ಟಿದೆ. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ಈ ನೌಕರರಿಗೆ 1 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಬೇಕು ಎಂದು ಒತ್ತಾಯಿಸಿದ ಅವರು, ಸಾದಿಲ್ವಾರು ಜವಾಬ್ದಾರಿಯ ನಿರ್ವಹಣೆಯನ್ನು ಎಸ್‌ಡಿಎಂಸಿಗೆ ವಹಿಸಿರುವುದು ಸರಿಯಲ್ಲ. ಅದನ್ನು ಅಡುಗೆ ನೌಕರರಿಗೆ ನೀಡಬೇಕೆಂದು ಒತ್ತಾಯಿಸಿದರು.


    ಸಿಐಟಿಯು ಮುಖಂಡ ವಿ.ಬಸವರಾಜು ಕಲ್ಕುಣಿಕೆ ಮಾತನಾಡಿ, ಹಲವಾರು ವರ್ಷಗಳಿಂದ ಈ ಯೋಜನೆ ಶ್ರೇಯಸ್ಸಿಗಾಗಿ ಈ ಮಹಿಳೆಯರು ಯಾವುದೇ ಮೂಲ ಸೌಲಭ್ಯವಿಲ್ಲದೆ ದುಡಿಯುತ್ತಿದ್ದಾರೆ. ಇಂಥ ಮಹಿಳೆಯರು ಆಕಸ್ಮಿಕವಾಗಿ ಮರಣ ಹೊಂದಿದ್ದರೆ ಅವರ ಕುಟುಂಬದಲ್ಲಿರುವವರಿಗೆ ಕೆಲಸ ನೀಡಬೇಕು. ಬಿಸಿಯೂಟ ನೌಕರರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.


    ಕಾರ್ಯದರ್ಶಿ ಹೇಮಾ, ಖಜಾಂಚಿ ಶಿವಮ್ಮ ಮುಖಂಡರಾದ ರಾಜಮ್ಮ, ನಳಿನಾ, ಶೋಭಾ, ಜರಿನ್‌ತಾಜ್, ವೇದಾವತಿ ಇತರರು ಇದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ಅವರಿಗೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts