More

    ಬಿಳಿ ಬಂಗಾರಕ್ಕೆ ಮೂತಿಹುಳು ಬಾಧೆ

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ

    ರೈತರ ಪ್ರಮುಖ ವಾಣಿಜ್ಯ ಬೆಳೆ ಹತ್ತಿ. ಬಿಳಿ ಬಂಗಾರಕ್ಕೆ ಕಾಂಡಕೊರಕ/ಮೂತಿಹುಳು ಬಾಧೆ ಆವರಿಸಿದೆ. ಕ್ರಿಮಿನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕೀಟ ಬಾಧೆ ತಪ್ಪಿಸದಿದ್ದರೆ ಬೆಳೆ ನಾಶ, ಇಳುವರಿ ಕುಸಿತದ ಭೀತಿ… ಇವೆಲ್ಲವೂ ರೈತರನ್ನು ಚಿಂತೆಗೀಡು ಮಾಡಿದೆ.

    ‘ಹತ್ತಿ ಬೆಳೆಗೆ ಹತ್ತು ಕುತ್ತು’ ಎನ್ನುವಂತೆ ಬಿಟಿ ಹತ್ತಿ ಬೆಳೆಗೆ ಸಾಮಾನ್ಯವಾಗಿ ಕಂಡು ಬರುವ ಸೀರು, ಮುಟುರು, ಜಿಗಿಹುಳು, ಕಂದು, ಎಲೆಚುಕ್ಕಿ, ಗುಲಾಬಿ, ಕಾಯಿಕೊರಕ ಹೀಗೆ ಹತ್ತಾರು ರೋಗಗಳ ಜತೆಗೆ ಈಗ ಕಾಂಡ ಕೊರೆಯುವ ಮೂತಿಹುಳು (ವಾಡೆಹುಳು) ಬಾಧೆ ಆವರಿಸಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. 2 ತಿಂಗಳ ಸಮೃದ್ಧ ಬೆಳೆಗೆ ಇದೀಗ ಕಾಂಡದಲ್ಲಿ ಮೂತಿಹುಳು ಸೇರಿ ಬೆಳೆ ಹಾಳು ಮಾಡುತ್ತಿದೆ. ಲಕ್ಷ್ಮೇಶ್ವರ, ಸೂರಣಗಿ, ದೊಡ್ಡೂರ, ಯಳವತ್ತಿ, ಗೊಜನೂರ, ಅಡರಕಟ್ಟಿ, ಶಿಗ್ಲಿ, ಗೋವನಾಳ, ರಾಮಗೇರಿ ಸೇರಿ ಬಹುತೇಕ ಭಾಗದಲ್ಲಿ ಈ ರೋಗ ಕಾಣಿಸಿಕೊಂಡಿದೆ.

    ಮೊದಲ ಹಂತದಲ್ಲಿ ಸೀರು, ಮುಟುರು ರೋಗಬಾಧೆ ನಿವಾರಣೆಗೆ ರೈತರು ಕ್ರಿಮಿನಾಶಕ ಸಿಂಪಡಿಸಿದ್ದಾರೆ. ಎರಡನೇ ಹಂತದಲ್ಲಿ ಮೂತಿಹುಳು ಬಾಧೆ ಹೈರಾಣಾಗಿಸಿದೆ. ಹತ್ತಿ ಗಿಡದ ಬೆಳವಣಿಗೆ ಹಂತದಲ್ಲಿ ಎಲೆ ಮತ್ತು ಕಾಂಡದ ಮೇಲೆ ಇಡುವ ಮೊಟ್ಟೆಯಿಂದ ಹುಳು ಜನಿಸುತ್ತದೆ. ಗಿಡದ ತಳ ಭಾಗದಲ್ಲಿಯೇ ಒಳ ಸೇರುವ ಹುಳು ಕಾಂಡದ ತಿರುಳು ತಿಂದು ಟೊಳ್ಳು ಮಾಡುತ್ತವೆ. ಇದರಿಂದ ಗಿಡದ ಟೊಂಗೆಗಳು ಒಣಗಿ ಬಾಡುತ್ತವೆ. ಗಾಳಿ ಮಳೆ, ಎಡೆ ಹೊಡೆಯುವ ವೇಳೆ ಮುರಿದು ಬೀಳುತ್ತವೆ. 40 ರಿಂದ 50 ದಿನಗಳ ಕಾಲಾವಧಿಯಲ್ಲಿ ಗಿಡದ ಕಾಂಡ ಮತ್ತು ಕುಡಿ ಕೊರೆಯುವ ಈ ಹುಳುಗಳು ನಂತರ ಹೂವು, ಮೊಗ್ಗು, ಕಾಯಿಗಳ ಮೇಲೆ ತನ್ನ ಪ್ರಭಾವ ಬೀರುತ್ತವೆ. ಇದರಿಂದ ಗುಣಮಟ್ಟ ಮತ್ತು ಇಳುವರಿಯೂ ಕಡಿಮೆಯಾಗುತ್ತದೆ.

    ಈಗಾಗಲೇ ಎಕರೆಗೆ ಬೀಜ, ರಸಗೊಬ್ಬರ, ಬಿತ್ತನೆ ಮತ್ತು ಆಳಿನ ಖರ್ಚು, ಕ್ರಿಮಿನಾಶಕ ಸಿಂಪಡಣೆ ಸೇರಿ 10 ಸಾವಿರ ರೂಪಾಯಿ ವ್ಯಯಿಸಲಾಗಿದೆ. ಈಗ ಹತ್ತಿ ಬೆಳೆ ಸಮೃದ್ಧವಾಗಿದ್ದರೂ ಗಿಡದ ಒಳಗೆ ಸೇರಿಕೊಂಡಿರುವ ಮೂತಿಹುಳು ತಿರುಳು ತಿಂದು ಗಿಡವನ್ನೇ ಕತ್ತರಿಸುತ್ತಿರುವುದು ಚಿಂತೆಗೀಡು ಮಾಡಿದೆ. ಎರಡು ಬಾರಿ ಕ್ರಿಮಿನಾಶಕ ಸಿಂಪಡಿಸಿದ್ದರೂ ಹುಳು ಸಾಯುತ್ತಿಲ್ಲ. ಕಳೆದ ವರ್ಷವೂ ಈ ಹುಳುಗಳಿಂದಾಗಿ ಬೆಳೆ ನಷ್ಟ ಅನುಭವಿಸಿದ್ದೇವೆ.
    | ಫಕೀರಗೌಡ ಪಾಟೀಲ ಅಡರಕಟ್ಟಿ
    | ಚನ್ನಬಸಪ್ಪ ಮುಳಗುಂದ ಲಕ್ಷ್ಮೇಶ್ವರ ರೈತರು

    ಬಿಟಿ ಹತ್ತಿ ಬೀಜ ಬಿತ್ತನೆ ವೇಳೆ ಪ್ರತಿ 20 ಸಾಲುಗಳ ನಡುವೆ 1 ಸಾಲು ಬೆಂಡೆ ಬೀಜ ಬಿತ್ತಬೇಕು. ಬೆಳಗ್ಗೆ ಬೆಂಡಿಯಲ್ಲಿ ಕಾಣುವ ಈ ಮೂತಿಹುಳುಗಳನ್ನು ಆರಿಸಬೇಕು. ಕಾಯಿಗಳನ್ನು ವಾರಕ್ಕೊಮ್ಮೆ ಹರಿಯಬೇಕು. ಹತ್ತಿ ಬೆಳೆದ ರೈತರು ಈ ನಿಯಮ ಪಾಲಿಸಬೇಕು. ಕಾಂಡಕೊರಕ ಮೂತಿಹುಳು ಬಾಧೆ ನಿಯಂತ್ರಣಕ್ಕೆ ಬೆಳಗಿನ ವೇಳೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ ಪೋ›ಪೆನೋಪಾಸ್ ಮತ್ತು 1 ಮಿ.ಲೀ ಡೈಕ್ಲೋವಾರಸ್ ಕ್ರಿಮಿನಾಶಕ ಮತ್ತು ಬೇವಿನೆಣ್ಣೆ ಬೆರೆಸಿ ಸಿಂಪಡಿಸಬೇಕು.
    | ಡಾ. ಸಿ.ಎಂ. ರಫೀ
    ಕೃಷಿ ವಿಸ್ತರಣೆ ಶಿಕ್ಷಣ ಕೇಂದ್ರದ ಹಿರಿಯ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts