More

    ಬಿರುಗಾಳಿ, ಮಳೆಗೆ ತತ್ತರಿಸಿದ ರೈತ

    ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಗುಡುಗು- ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದರಿಂದ ಅಪಾರ ಪ್ರಮಾಣದ ಬಾಳೆ, ಮಾವು, ವೀಳ್ಯದೆಲೆ ಬೆಳೆಗಳು ನೆಲಕಚ್ಚಿದ್ದು ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

    ಶನಿವಾರ ರಾತ್ರಿ 10 ಗಂಟೆಗೆ ಆರಂಭವಾದ ಮಳೆ ಸತತ ಎರಡು ಗಂಟೆಗಳ ಕಾಲ ಅಬ್ಬರಿಸಿತು. ಗಾಳಿಯ ರಭಸಕ್ಕೆ ಬೆಳೆದು ನಿಂತಿದ್ದ ಫಸಲು ಕೊಡುವ ಬಾಳೆ, ವೀಳ್ಯದೆಲೆ, ಮಾವು ಕ್ಷಣಾರ್ಧದಲ್ಲಿ ಧರೆಗುರುಳಿದವು. ಸಿಡಿಲಿನ ಅಬ್ಬರಕ್ಕೆ ಜನರು ಆತಂಕಗೊಂಡಿದ್ದರು.

    ಪಟ್ಟಣದ ಸೇರಿ ಗೋಗೇರಿ, ಜೀಗೇರಿ, ಮ್ಯಾಕಲಝುರಿ, ಕುಂಟೋಜಿ, ರಾಮಾಪೂರ, ಕಾಲಕಾಲೇಶ್ವರ, ಲಕ್ಕಲಕಟ್ಟಿ, ನಾಗೇಂದ್ರಗಡ, ನೆಲ್ಲೂರ, ಮುಶಿಗೇರಿ, ರಾಜೂರ ಸೇರಿ 97 ಗ್ರಾಮಗಳಲ್ಲಿ ಬಾಳೆ, ದ್ರಾಕ್ಷಿ, ಮಾವು, ಚಿಕ್ಕು, ಪೇರಲ ಹಾಗೂ ಮೊಸಂಬಿ ಹಾಳಾಗಿದೆ.

    ಸಸಿ ನಡುವ ಕಾರ್ಯದಿಂದ ಹಿಡಿದು, ಮಡಿ ಹಾಕುವುದು, ಗೊಬ್ಬರ ಕಟ್ಟುವುದು ಸೇರಿ ಫಸಲು ನೀಡುವವರೆಗೂ 1 ಎಕರೆ ಬಾಳೆಗೆ ಕನಿಷ್ಟ 50 ರಿಂದ 60 ಸಾವಿರ ರೂ, ದ್ರಾಕ್ಷಿ ಹಾಗೂ ವೀಳ್ಯದೆಲೆ 1 ಎಕರೆಗೆ 50 ರಿಂದ 1 ಲಕ್ಷ ರೂ, ಮಾವು, ಚಿಕ್ಕು, ಪೇರಲಕ್ಕೆ 10 ರಿಂದ 30 ಸಾವಿರ ರೂ. ಖರ್ಚು ಬರುತ್ತದೆ. ಬಾಳೆ ಎಕರೆಗೆ 15 ಟನ್ ಬರುತ್ತದೆ. ಒಂದು ಕ್ವಿಂಟಾಲ್ ಬಾಳೆಗೆ 900 ರೂ. ಇದೆ. ದ್ರಾಕ್ಷಿ, ವೀಳ್ಯದೆಲೆ, ಚಿಕ್ಕು, ಮಾವು ಬೆಳೆಗಾರರು 1 ಎಕರೆಗೆ ವಾರ್ಷಿಕ ಅಂದಾಜು 1.5 ಲಕ್ಷ ರೂ. ಆದಾಯ ಪಡೆಯುತ್ತಾರೆ. ಆದರೆ, ವರ್ಷಧಾರೆಯ ಅಬ್ಬರಕ್ಕೆ ಬೆಳೆ ಹಾಳಾಗಿದ್ದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.

    ಮಾವಿನ ಫಸಲು ಧರೆಗೆ: ರೋಣ ತಾಲೂಕಿನಲ್ಲಿ ವಿವಿಧೆಡೆ ಮಾವಿನ ಮರಗಳು ಉತ್ತಮ ಹೂ ತುಂಬಿ ಮೈದುಂಬಿಕೊಂಡು ಗೊಂಚಲುಗಳಲ್ಲಿ ಕಾಯಿಬಿಟ್ಟಿದ್ದವು. ಹದಿನೈದು ದಿನಗಳಲ್ಲಿ ಫಸಲು ಕಟಾವು ಮಾಡುವ ಹಂತದಲ್ಲಿತ್ತು. ಆದರೆ, ಅಕಾಲಿಕ ಗಾಳಿ ಮಳೆಯಿಂದಾಗಿ ಕಾಯಿಗಳು ನೆಲಕಚ್ಚಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾವು 16 ಎಕರೆಯಲ್ಲಿ ಮಾವು ಹಾಕಿದ್ದು, ಬಹುತೇಕ ಮರಗಳ ಕಾಯಿಗಳು ಧರೆಗುರುಳಿವೆ. 5ಕ್ಕೂ ಹೆಚ್ಚು ಟನ್ ಮಾವು ಹಾಳಾಗಿದೆ. 4 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಗೊಗೇರಿ ಗ್ರಾಮದ ರೈತ ಬಸವರಾಜ ಮೂಲಿಮನಿ.

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಉಣಚಗೇರಿ ಗ್ರಾಮದ ಸೋಮಪ್ಪ ಗೋವಿಂದಪ್ಪ ರಾಠೋಡ ಎಂಬುವರ ಬಾಳೆ ಬೆಳೆ ಭಾಗಶಃ ನೆಲಕಚ್ಚಿದೆ. ಫಸಲು ಕಟಾವು ಹಂತದಲ್ಲಿತ್ತು. ಆದರೆ, ಭಾರಿ ಬಿರುಗಾಳಿಗೆ ಬೆಳೆಗಳೆಲ್ಲ ನೆಲಕಚ್ಚಿದ್ದು, 2 ಎಕರೆ ಬಾಳೆ ತೋಟ ನಾಶವಾಗಿದೆ. 2 ಸಾವಿರ ಸಸಿಗಳನ್ನು ನೆಡಲಾಗಿದೆ. ಪ್ರತಿ ಒಂದು ಗೊನೆ ಬಾಳೆ 40 ಕೆಜಿ ಬರುತ್ತದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 10 ಸಾವಿರ ಇದೆ. ಆದರೆ, ಶನಿವಾರ ಸುರಿದ ಬಿರುಗಾಳಿ ಮಳೆಗೆ ಬೆಳೆಗಳು ಸಂಪೂರ್ಣ ನೆಲಕ್ಕಚ್ಚಿದ್ದು ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದರು.

    ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಬಾಳೆ, ವೀಳ್ಯದೆಲೆ, ಮಾವು, ದಾಳಿಂಬೆ ಮರಗಳು ಬಿರುಗಾಳಿ ಮಳೆಯಿಂದ ಹಾನಿಯಾಗಿದೆ. ಹಾನಿಯ ಸರ್ವೆ ಕಾರ್ಯ ನಡೆದಿದೆ.
    | ಎಂ.ಎಂ. ತಾಂಬೂಟಿ, ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ ರೋಣ

    ಸಿಡಿಲು ಬಡಿದು ಆಡು, ಕುರಿ ಸಾವು

    ನರೇಗಲ್ಲ: ಸಮೀಪದ ಮಾರನಬಸರಿ ಗ್ರಾಮದ ಹೊಸಳ್ಳಿ ರಸ್ತೆಯ ಜಮೀನೊಂದರಲ್ಲಿ ಸಿಡಿಲು ಬಡಿದು 8 ಆಡು, 1 ಕುರಿ ಮೃತಪಟ್ಟ ಘಟನೆ ಶನಿವಾರ ಸಂಜೆ ಜರುಗಿದೆ.

    ಗ್ರಾಮದ ಪರಸಪ್ಪ ಜಾಲಿಹಾಳ ಎಂಬುವವರ 4 ಆಡು, 1 ಕುರಿ ಹಾಗೂ ಅಂದಾನಗೌಡ ಪಾಟೀಲ ಅವರ 4 ಆಡುಗಳು ಮೃತಪಟ್ಟಿವೆ. ನಿತ್ಯದಂತೆ ಆಡುಗಳನ್ನು ಮೇಯಿಸಲು ಹೋಗಲಾಗಿತ್ತು. ಶನಿವಾರ ಸಂಜೆ ಮರಳಿ ದೊಡ್ಡಿಗೆ ಬರುವಾಗ ಗುಡುಗು, ಸಿಡಿಲು ಸಹಿತ ಮಳೆ ಪ್ರಾರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಆಡುಗಳು ಬನ್ನಿಗಿಡದ ಕೆಳಗಡೆ ನಿಂತಿದ್ದವು. ಆಗ ಸಿಡಿಲು ಬಡಿದು 8 ಆಡು ಮತ್ತು ಒಂದು ಕುರಿ ಸ್ಥಳದಲ್ಲಿಯೇ ಮೃತಪಟ್ಟಿವೆ ಎಂದು ಆಡುಗಳ ಮಾಲೀಕರು ನರೇಗಲ್ಲ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಪಿಎಸ್​ಐ ಬಿ.ಬಿ. ಕೊಳ್ಳಿ, ಪಶು ವೈದ್ಯಾಧಿಕಾರಿ ಡಾ. ಎಲ್.ಎಸ್. ಗೌರಿ ಸ್ಥಳ ಪರಿಶೀಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts