More

    ಬಿವಿಬಿ ಕಾಲೇಜ್​ನ ಅಮೃತ ಮಹೋತ್ಸವ 27ರಿಂದ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಬಿವಿಬಿ ಕಾಲೇಜ್​ನ ಅಮೃತ ಮಹೋತ್ಸವ ನಿಮಿತ್ತ ಜ. 27 ರಿಂದ 29ರವರೆಗೆ ನಗರದ ಬಿವಿಬಿ ಕ್ಯಾಂಪಸ್ ಮೈದಾನದಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 27ರಂದು ಬೆಳಗ್ಗೆ 10ಕ್ಕೆ ಎಂ.ಆರ್. ಸಾಖರೆ ಮೈದಾನದಲ್ಲಿ ಡಾ. ಪ್ರಭಾಕರ ಕೋರೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬೆಳಗಾವಿ ಕೆಎಲ್​ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು. ಸಮಾರಂಭದ ನಂತರ ಸಂಜೆ 6ಕ್ಕೆ ಸಾಂಸ್ಕೃತಿಕ ಕಲಾ ಸೌರಭ ನಡೆಯಲಿದ್ದು, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನ ಜರುಗಲಿದೆ. ತೌಫಿಕ್ ಖುರೇಶಿ ಅವರಿಂದ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಕಾರ್ಯಕ ನಡೆಯಲಿದೆ ಎಂದರು.

    28ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕ್ಯಾಂಪಸ್​ನಲ್ಲಿ ನಿರ್ವಿುಸಿರುವ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸುವರು. ತಿರುಪತಿಯ ವಿಶ್ವಧರ್ಮ ಚೇತನ ಮಂಚ್​ನ ಶ್ರೀ ಬ್ರರ್ಹ¾ ಗುರುದೇವ ಸಮ್ಮುಖತೆ ವಹಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಸಭಾಪತಿ ಬಸವರಾಜ ಹೊರಟ್ಟಿ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ಬಿವಿಬಿ ಕೆಎಲ್​ಇ ಟೆಕ್ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮಾವೇಶ ಉದ್ಘಾಟನೆಯಾಗಲಿದೆ. ಕಾಲೇಜ್​ನ ಹಳೆಯ ವಿದ್ಯಾರ್ಥಿನಿ, ಇನ್​ಫೋಸಿಸ್ ಫೌಂಡೇಷನ್ ಸಂಸ್ಥಾಪಕಿ ಸುಧಾ ಮೂರ್ತಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ ನಿರಾಣಿ ಉಪಸ್ಥಿತರಿರುವರು. ನಿವೃತ್ತರನ್ನು ಸನ್ಮಾನಿಸಲಾಗುವುದು. ಸಂಜೆ 6ಕ್ಕೆ ಖ್ಯಾತ ಸಿನಿ ಗಾಯಕಿ ಸುನಿಧಿ ಚವ್ಹಾಣ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.

    29ರಂದು ಬೆಳಗ್ಗೆ 10ಕ್ಕೆ ಲೋಕೇಶ ಪಾಯಿಕ್ ಅವರು ‘ಫ್ಯೂಚರ್ ಆಫ್ ದಿ ಫ್ಯೂಚರ್, ಭಾರತಕ್ಕೆ ಟ್ರಿಲಿಯನ್ ಡಾಲರ್ ಅವಕಾಶ’, ಉಮೇಶ ವೈದ್ಯಮಠ, ಗಿರೀಶ ಶಿರಿಗಣ್ಣವರ, ಪವನ್ ಶಿಂಧೆ ಅವರು ‘ಉದ್ಯಮಶೀಲತೆಯ ಪ್ರಮಾಣ’ ಕುರಿತು ಮಾತನಾಡುವರು. ಭಾರತೀಯ ಇಂಜಿನಿಯರ್ ಸೋನಮ್ ವಾಂಗ್ಚುಕ್ ಅವರು ಭಾಷಣ ಮಾಡಲಿದ್ದಾರೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.

    ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೆಎಲ್​ಇ ತಾಂತ್ರಿಕ ವಿವಿ ಉಪ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನ ನಿಮಿತ್ತ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಕ್ಯಾಂಪಸ್ ಒಳಗೊಂಡ ವಿಶ್ವವಿದ್ಯಾಲಯ ಸ್ಥಾಪಿಸುವ ಗುರಿ ಇದೆ. 2030ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts