More

    ಬಿಪಿಎಲ್ ಕಾರ್ಡ್ ಅರ್ಜಿ ವಿಲೇ ಅತಂತ್ರ

    ಧಾರವಾಡ: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ. ಆದರೆ, ಎರಡು ವರ್ಷಗಳಿಂದ ಬಿಪಿಎಲ್ ಅರ್ಜಿಗಳ ವಿಲೇವಾರಿಯಾಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಹೊಸ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಬಿಪಿಎಲ್ ಕಾರ್ಡ್ ಸಿಗದೆ ಬಡವರು ಪರದಾಡುತ್ತಿದ್ದಾರೆ.

    ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳ ಜನ ಬಹುಮುಖ್ಯವಾಗಿ ಪಡಿತರಕ್ಕಾಗಿ ಬಿಪಿಎಲ್ ಪಡಿತರ ಕಾರ್ಡ್ ಅವಲಂಬಿಸಿದ್ದಾರೆ. ಸರ್ಕಾರದ ಬಹುತೇಕ ಯೋಜನೆಗಳು ಆನ್​ಲೈನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವುದರಿಂದ ಬಿಪಿಎಲ್ ಕಾರ್ಡನ್ನೇ ಮಾನದಂಡ ಮಾಡಿ ಕಡ್ಡಾಯಗೊಳಿಸಲಾಗಿದೆ.

    ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ ಬೇಕು. ಆದರೆ, ಎರಡು ವರ್ಷಗಳಿಂದ ಅರ್ಜಿ ಸಲ್ಲಿಸಿದ ಜನ, ಬಿಪಿಎಲ್ ಕಾರ್ಡ್​ಗಳಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಜಿಲ್ಲಾದ್ಯಂತ 12,514 ಅರ್ಜಿಗಳು ಆಹಾರ ಇಲಾಖೆ ನಿರೀಕ್ಷಕರಿಂದ ಅನುಮೋದನೆಯಾಗಬೇಕಿದೆ. ನಂತರ ಮುದ್ರಣಕ್ಕೆ ಕಳುಹಿಸಿ ಫಲಾನುಭವಿಗಳ ಕೈಗೆಟುಕಲು 6-8 ತಿಂಗಳಾದರೂ ಬೇಕು.

    2020ರ ಮಾರ್ಚ್​ನಲ್ಲಿ ಕರೊನಾದಿಂದ ಲಾಕ್​ಡೌನ್ ಜಾರಿಯಾದಾಗ ಅರ್ಜಿ ಸ್ವೀಕಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಕಳೆದ ತಿಂಗಳು ಅರ್ಜಿ ಸ್ವೀಕೃತಿ ಆರಂಭಗೊಂಡಿದ್ದು, ಅರ್ಹರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಬಿಪಿಎಲ್ ಕಾರ್ಡ್​ಗೆ ಅನರ್ಹರಿದ್ದರೂ ಪಡೆದ ಕುಟುಂಬದವರು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವಂತೆ ಇಲಾಖೆ ಆದೇಶಿಸಿದೆ. ಹೀಗಾಗಿ, ಅರ್ಜಿಗಳ ವಿಲೇವಾರಿ ನಡೆಯುತ್ತಿಲ್ಲ. ಅನರ್ಹರು ಕಾರ್ಡ್​ಗಳನ್ನು ಮರಳಿಸಲು ಜೂ. 30ರವರೆಗೆ ಕಾಲಾವಕಾಶ ನೀಡಲಾಗಿದ್ದು, ಅರ್ಹರು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

    ಜಿಲ್ಲೆಯಲ್ಲಿ 12,514 ಬಿಪಿಎಲ್ ಕಾರ್ಡ್​ಗಳ ಅರ್ಜಿ ವಿಲೇವಾರಿಯಾಗಿಲ್ಲ. ಈ ಪೈಕಿ ಹುಬ್ಬಳ್ಳಿ ತಾಲೂಕಿನಲ್ಲೇ 4,923 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಇವೆ. ಸದ್ಯ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ಸದಸ್ಯನಿಗೆ ಉಚಿತವಾಗಿ 10 ಕೆಜಿ ಅಕ್ಕಿ, 2 ಕೆಜಿ ಗೋಧಿ ವಿತರಿಸಲಾಗುತ್ತಿದೆ. ಗ್ಯಾಸ್ ಸಂಪರ್ಕ ಪಡೆದಿದ್ದರೆ ಅಂಥವರಿಗೆ ಸೀಮೆಎಣ್ಣೆ ನೀಡುವುದಿಲ್ಲ. ಕರೊನಾದಿಂದ ಲಾಕ್​ಡೌನ್ ಘೋಷಣೆಯಾಗಿದ್ದರಿಂದ ಮೇ ಹಾಗೂ ಜೂನ್​ನಲ್ಲಿ ತಲಾ ಅರ್ಜಿಗೆ 10 ಕೆಜಿಯಂತೆ ಅಕ್ಕಿ ವಿತರಿಸಲಾಗುತ್ತಿದೆ.

    ಕೋವಿಡ್ ಪರಿಹಾರ ಗೋಜಲು: ಕೋವಿಡ್ ಮೊದಲ ಹಾಗೂ 2ನೇ ಅಲೆಯಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ತಾಲೂಕು ಆಡಳಿತಗಳು ಈಗಾಗಲೇ ತಮ್ಮ ಅಧೀನದ ಗ್ರಾಮ ಲೆಕ್ಕಾಧಿಕಾರಿಗಳಿಂದ ಮೃತರ ವಿವರ ಕಲೆಹಾಕುತ್ತಿವೆ. ಆದರೆ, ಬಿಪಿಎಲ್ ಕಾರ್ಡ್ ಕಡ್ಡಾಯಗೊಳಿಸಿದರೆ ರಾಜ್ಯಾದ್ಯಂತ ಸಾಕಷ್ಟು ಕುಟುಂಬಗಳು ಕೋವಿಡ್ ಪರಿಹಾರದಿಂದ ವಂಚಿತವಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

    ಸರ್ಕಾರದ ಮಟ್ಟದಲ್ಲಿ ಬಿಪಿಎಲ್ ಅರ್ಜಿಗಳ ವಿಲೇವಾರಿ ಸ್ಥಗಿತಗೊಂಡಿದೆ. ಮೊದಲು ಅನರ್ಹ ಬಿಪಿಎಲ್ ಕಾರ್ಡ್​ಗಳನ್ನುರದ್ದು ಮಾಡಿ ಎಪಿಎಲ್ ಕಾರ್ಡ್ ಗಳನ್ನಾಗಿ ಉನ್ನತೀಕರಿಸಲು ಆದೇಶವಿದೆ. ಅನರ್ಹರು ಕಾರ್ಡ್​ಗಳನ್ನುಮರಳಿಸಲು ಜೂ. 30 ಕೊನೆಯ ದಿನವಾಗಿದ್ದು, ನಂತರ ಹೊಸ ಅರ್ಜಿಗಳ ವಿಲೇವಾರಿಗೆ ಅನುಮತಿ ಸಿಗುವ ನಿರೀಕ್ಷೆ ಇದೆ.

    | ಪ್ರೀತಿ ದೊಡ್ಡಮನಿ

    ಆಹಾರ ಇಲಾಖೆ ಉಪ ನಿರ್ದೇಶಕಿ

    ಬಿಪಿಎಲ್ ಕಾರ್ಡ್ ಅನಿವಾರ್ಯ

    ಬಿಪಿಎಲ್ ಕಾರ್ಡ್ ಪಡಿತರ ಪಡೆಯಲು ಮಾತ್ರವಲ್ಲ, ಸರ್ಕಾರದ ಹಲವು ಯೋಜನೆಗಳಿಗೆ ಅನಿವಾರ್ಯ. ವಿವಿಧ ವಸತಿ ಯೋಜನೆಗಳ ಅಡಿ ಮನೆ, ಶೌಚಗೃಹ, ಇಂಗುಗುಂಡಿ, ಬದುವು, ಕೃಷಿ ಹೊಂಡ ನಿರ್ವಣಕ್ಕೆ ಸಹಾಯಧನ ಪಡೆಯಲು, ನರೇಗಾ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಮಾಡಿಕೊಳ್ಳಲು, ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್- ಸ್ಟೌವ್ ಸೌಲಭ್ಯ, ಆರೋಗ್ಯ ವಿಮೆ, ರೈತರ ಬ್ಯಾಂಕ್ ಸಾಲ ಮನ್ನಾಕ್ಕೆ ಬಿಪಿಎಲ್ ಕಾರ್ಡ್ ಅಗತ್ಯ.

    ಮಾನದಂಡ

    ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಸಂಘ- ಸಂಸ್ಥೆಗಳು, ನಿಗಮ- ಮಂಡಳಿಗಳ ಕಾಯಂ ನೌಕರರು ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರು. ಅದೇರೀತಿ 3 ಹೆಕ್ಟೇರ್ ಜಮೀನು ಹೊಂದಿರಬಾರದು. ನಗರದಲ್ಲಿ 1,000 ಚ. ಅಡಿ ಮನೆ ಹೊಂದಿರಬಾರದು. ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿರಬಾರದು. ಆದರೆ, ಈ ಮಾನದಂಡಗಳನ್ನು ಮರೆಮಾಚಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಮರಳಿಸಲು ಹಲವು ಬಾರಿ ಅವಕಾಶ ನೀಡಲಾಗಿದೆ. ಹೀಗಾಗಿ, ಬಾಕಿ ಅರ್ಜಿಗಳ ವಿಲೇವಾರಿ ಸ್ಥಗಿತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts